ಕನಕಪುರ : ಯಶಸ್ವಿಯಾಗಿ ನಡೆದ ಆದಿನಿರ್ವಾಣ ಮಹಾ ಶಿವಯೋಗಿಗಳವರ ಜಾತ್ರಾ ಮಹೋತ್ಸವ
ಹಾಯ್ ರಾಮನಗರ (hairamanagara.in) 16 ಫೆಬ್ರವರಿ 2022
ಕನಕಪುರ : ತಾಲ್ಲೂಕಿನ ಶ್ರೀ ದೇಗುಲ ಮಠದಲ್ಲಿ ಶ್ರೀ ಆದಿ ನಿರ್ವಾಣ ಮಹಾಶಿವಯೋಗಿಗಳವರ ರಥೋತ್ಸವವು ಕೋವಿಡ್ ನಿಯಮಗಳನ್ನ ಪಾಲಿಸಿ ಸಡಗರದಿಂದ ಬುಧವಾರ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗದ್ದುಗೆಗೆ ವಿಶೇಷ ಅಲಂಕಾರದ ಮೂಲಕ ಪೂಜಾ ಕೈಂಕರ್ಯಗಳು ನಡೆದವು.ಬೆಳಿಗ್ಗೆ 4ಗಂಟೆಗೆ ರುದ್ರಾಭಿಷೇಕ 7.30 ಕ್ಕೆ ಷಟ್ಸ್ಥಲ ಧ್ವಜಾರೋಹಣ, ರಾಜೋಪಚಾರವನ್ನು ಭಕ್ತಿ ಭಾವದೊಂದಿಗೆ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಳಿಗ್ಗೆ ಪ್ರಾತಃಕಾಲ ಶ್ರೀ ಸಿದ್ದಗಂಗಾ ಮಠಾಧ್ಯಕ್ಷ ರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರ ಶಿವಪೂಜೆ ಹಾಗು ಧ್ವಜಾರೋಹಣವನ್ನು ನೆರವೇರಿಸಿದರು.
ಸುತ್ತೂರು ಕ್ಷೇತ್ರದ ಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು “ನಮ್ಮ ದೇಶದಲ್ಲಿ ಅನೇಕ ಕಾಲಗಳಿಂದ ನಡೆದುಕೊಂಡು ಬಂದ ಪರಂಪರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಆದರೆ ಈ ಕಾರ್ಯಕ್ರಮಗಳಿಗೆ ಕರೋನ ಮೂರನೇ ಅಲೆ ಇರುವುದರಿಂದ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ತೊಂದರೆಗಳು ಆಗುತ್ತಿದೆ. ಆದರೆ ಪರಂಪರೆ ಉಳಿಸಿ ಭಕ್ತರಿಗೆ ಆರೋಗ್ಯ ಭಾಗ್ಯ ನೀಡಲಿ. ದೇಶ ರಾಜ್ಯಗಳು ಸಮೃದ್ಧಿಯಾಗಿ ಇರಲಿ” ಎಂದು ತಿಳಿಸಿದರು.

ದೇಗುಲಮಠದ ಹಿರಿಯ ಪೂಜ್ಯರು ಆಶೀರ್ವಚನ ನೀಡಿ “ನಮ್ಮ ಆದಿ ನಿರ್ವಾಣ ಮಹಾ ಶಿವಯೋಗಿಗಳವರ ಆಶೀರ್ವಾದ ನಮ್ಮೆಲ್ಲ ಭಕ್ತರ ಮೇಲೆ ಇರಲಿ, ಸದಾಕಾಲ ಎಲ್ಲರೂ ನೆಮ್ಮದಿಯಿಂದ ಜೀವನವನ್ನು ನಡೆಸುವಂತಾಗಲಿ, ಕೋವಿಡ್ ತೊಲಗಲಿ ಎಂದು ಆಶೀರ್ವಚನ ನೀಡಿದರು.
ಶ್ರೀ ಚನ್ನಬಸವ ಸ್ವಾಮಿಗಳವರು ಮಾತನಾಡುತ್ತಾ ನಮ್ಮ ಪೂಜ್ಯ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಮತ್ತು ಭಕ್ತರ ಅಪೇಕ್ಷೆಯಂತೆ ಕೋವಿಡ್ ನಿಯಮಗಳನ್ನು ಪರಿಪಾಲಿಸುತ್ತ ಸಡಗರದಿಂದ ರಥೋತ್ಸವವನ್ನು ನೆರವೇರಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಕಾರ್ಯಗಳು ದೇಗುಲಮಠದ ಹಿರಿಯ ಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು ಹಾಗೂ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಸ್ವಾಮಿಗಳವರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ನಂದಿದ್ವಜ ವೀರಗಾಸೆ ಪಟಕುಣಿತ ಮತ್ತು ವಿವಿಧ ಮಂಗಳವಾದ್ಯಗಳೊಂದಿಗೆ ರಥೋತ್ಸವವನ್ನು ಎಳೆಯಲಾಯಿತು.

ಭಕ್ತರು ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಶ್ರೀಕ್ಷೇತ್ರದ ಆವರಣದ ಒಳಗೆ ತೇರು ಎಳೆಯಲಾಯಿತು. ಈ ಸಂದರ್ಭದಲ್ಲಿ ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, ಆಡಳಿತ ಅಧಿಕಾರಿ ರಂಗನಾಥ್ ಹಾಗೂ ರಾಜಕೀಯ ಗಣ್ಯ ಮಹನೀಯರು ಮತ್ತು ಹರಗುರು ಚರಮೂರ್ತಿಗಳು ರಾಜ್ಯದ ನಾನಾ ಭಾಗದ ಭಕ್ತರು ಶಾಲಾ-ಕಾಲೇಜಿನ ಶಿಕ್ಷಕ-ಶಿಕ್ಷಕಿಯರು ಆಡಳಿತ ಮಂಡಳಿ ಸದಸ್ಯರು ಮಕ್ಕಳು ರಥೋತ್ಸವದಲ್ಲಿ ಭಾಗವಹಿಸಿದ್ದರು.