ತಿಟ್ಟಮಾರನಹಳ್ಳಿ ಗ್ರಾಮದ ಸ್ಮಶಾನದ ಸಮಸ್ಯೆ ಬಗೆಹರಿಸಿದ ತಹಸೀಲ್ದಾರ್ ಎಲ್. ನಾಗೇಶ್
ಹಾಯ್ ರಾಮನಗರ (hairamanagara.in) 17 ಫೆಬ್ರವರಿ 2022
ಚನ್ನಪಟ್ಟಣ : ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಸ್ಮಶಾನ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವಲ್ಲಿ ತಹಸೀಲ್ದಾರ್ ಎಲ್. ನಾಗೇಶ್ ಸಫಲಗೊಂಡಿದ್ದಾರೆ.
ಗ್ರಾಮಸ್ಥರೇ ಜಮೀನು ಖರೀದಿಸಿ ಸ್ಮಶಾನ ನಿರ್ಮಿಸಿಕೊಂಡಿದ್ದರು. ಆದರೆ, ಜಮೀನಿನ ಸರಹದ್ದಿಗೆ ಸಂಬಂಧಪಟ್ಟಂತೆ ಕೆಲದಿನಗಳಿಂದ ವ್ಯಾಜ್ಯ ಉಂಟಾಗಿತ್ತು. ಸ್ಮಶಾನದ ಪಕ್ಕದ ಜಮೀನಿನ ಮಾಲೀಕ ಸ್ಮಶಾನದ ಗಡಿಗೆ ಸಂಬಂಧಿಸಿದಂತೆ ತಕರಾರು ತೆಗೆದಿದ್ದರು. ಇದು ಸ್ಮಶಾನ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು.
ಕೆಲತಿಂಗಳುಗಳ ಹಿಂದೆಯೇ ಸ್ಮಶಾನದ ಜಾಗವನ್ನು ಸರ್ವೆ ಮಾಡಿ ಹದ್ದುಬಸ್ತು ಗುರುತಿಸಲಾಗಿತ್ತು. ಹೀಗಿದ್ದರೂ ಸಹ ಈ ಸರ್ವೆ ಸಮರ್ಪಕವಾಗಿ ನಡೆದಿಲ್ಲ ಎಂದು ವ್ಯಕ್ತಿಯೊಬ್ಬರು ಅಭಿವೃದ್ಧಿ ಕಾಮಗಾರಿಯ ಆರಂಭಕ್ಕೆ ತಡೆವೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಗ್ರಾಮಸ್ಥರು ಸಮಸ್ಯೆ ಬಗೆಹರಿಸಿಕೊಡುವಂತೆ ತಹಸೀಲ್ದಾರ್ ಮೊರೆ ಹೋಗಿದ್ದರು.

ಈ ವಿಚಾರವಾಗಿ ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಸ್ಮಶಾನದ ಜಾಗಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಲ್ ನಾಗೇಶ್ ಖುದ್ದು ನಿಂತು ಸ್ಮಶಾನದ ಕಾಂಪೌಂಡ್ ಕಾಮಗಾರಿ ಆರಂಭಿಸಿದ್ದಾರೆ. ಜಾಗದ ಹದ್ದುಬಸ್ತನ್ನು ಮತ್ತೊಮ್ಮೆ ಗುರುತಿಸಿ ಕಾಮಗಾರಿ ಆರಂಭವಾಗುವರೆಗೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಈ ವೇಳೆ ಕಂದಾಯ ನಿರೀಕ್ಷಕ ಯುವರಾಜ್, ವಿ.ಎ. ಮಂಜು, ತಾಲೂಕು ಸರ್ವೆಯರ್ ಪುಟ್ಟರಾಜು, ಗ್ರಾಪಂ ಪಿಡಿಒ ಕಾವ್ಯಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸ್ಮಶಾನದ ಜಾಗದ ಸಮಸ್ಯೆಯನ್ನು ಬಗೆಹರಿಸಿ, ಕಾಮಗಾರಿ ಆರಂಭವಾಗಲು ಸಹಕರಿಸಿದ ತಹಸೀಲ್ದಾರ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.