ತ್ರಿಮೂರ್ತಿಗಳಿಂದ ಜೆಡಿಎಸ್ ಅವಸಾನ ನಿಶ್ಚಿತ : ಸೋಮವಾರ ಬಿಜೆಪಿ ಸೇರ್ಪಡೆ : ಎಸ್. ಲಿಂಗೇಶ್ ಕುಮಾರ್

ಹಾಯ್ ರಾಮನಗರ (hairamanagara.in) 18 ಫೆಬ್ರವರಿ 2022

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಗುತ್ತಿಗೆದಾರ ಗೋವಿಂದಹಳ್ಳಿ ನಾಗರಾಜು ಅವರುಗಳು ಸೇರಿಕೊಂಡು ಪಕ್ಷವನ್ನು ಅವನತಿಯ ಹಾದಿಗೆ ಕೊಂಡೊಯ್ಯುತ್ತಿದ್ದಾರೆ, ಅವರು ಕಾರ್ಯಕರ್ತರ ಸಮಸ್ಯೆ ಆಲಿಸುತ್ತಿಲ್ಲ, ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಅವರು ನೆಲೆ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ, ಪಕ್ಷದಲ್ಲಿ ಬೆಲೆ ಇಲ್ಲದ ಮೇಲೆ ನಾವು ಇರುವುದು ಸರಿಯಿಲ್ಲ, ಹಾಗಾಗಿ ತಾಲೂಕಿಗೆ ನೀರಾವರಿ ಕೊಡುಗೆ ನೀಡಿದ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ – ಎಸ್. ಲಿಂಗೇಶ್ ಕುಮಾರ್

ಚನ್ನಪಟ್ಟಣ : ನಿರೀಕ್ಷೆಯಂತೆ ಬಮೂಲ್ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎಸ್. ಲಿಂಗೇಶ್‍ಕುಮಾರ್ ಜೆಡಿಎಸ್ ಪಕ್ಷ ತೊರೆದಿದ್ದು, ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲಿಂಗೇಶ್‍ಕುಮಾರ್, ಕಳೆದ ಮೂವತ್ತು ವರ್ಷಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಜೆಡಿಎಸ್ ಪಕ್ಷವನ್ನು ತಾಲೂಕಿನಲ್ಲಿ ಕಟ್ಟಲು ಸಾಕಷ್ಟು ಶ್ರಮಿಸಿದ್ದೇನೆ, ಆದರೆ ನಾನು ಪ್ರತಿನಿಧಿಸುತ್ತಿದ್ದ ಬಮೂಲ್ ಹಾಗೂ ಬಿಡಿಸಿಸಿ ಬ್ಯಾಂಕ್ ಚುನಾವಣೆಗಳಲ್ಲಿ ಸ್ವಪಕ್ಷದವರೊಂದಿಗೇ ಸೆಣೆಸಾಡುವ ಪರಿಸ್ಥಿತಿ ಬಂದೊದಗಿತು, ಚುನಾವಣೆಗಳಲ್ಲಿ ಗೆದ್ದಾಗ ಬೇರೆಯವರ ಬೆನ್ನುತಟ್ಟಿ, ಸೋತಾಗ ನನ್ನ ಕಡೆ ಬೊಟ್ಟುಮಾಡಲಾಯಿತು, ಪಕ್ಷ ಕಟ್ಟುವವರನ್ನು ಬಿಟ್ಟು ಪಕ್ಷದಲ್ಲಿರುವ ತ್ರಿಮೂರ್ತಿಗಳ ಮಾತುಕೇಳಿ ಕುಮಾರಸ್ವಾಮಿ ಅವರು ಮೂಲೆಗುಂಪು ಮಾಡಿದರು ಹಾಗಾಗಿ ಅನಿವಾರ್ಯವಾಗಿ ಪಕ್ಷ ತ್ಯಜಿಸುವ ನಿರ್ಧಾರ ಮಾಡಿದ್ದೇನೆಂದರು.

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಗುತ್ತಿಗೆದಾರ ಗೋವಿಂದಹಳ್ಳಿ ನಾಗರಾಜು ಅವರುಗಳು ಸೇರಿಕೊಂಡು ಪಕ್ಷವನ್ನು ಅವನತಿಯ ಹಾದಿಗೆ ಕೊಂಡೊಯ್ಯುತ್ತಿದ್ದಾರೆ, ಅವರು ಕಾರ್ಯಕರ್ತರ ಸಮಸ್ಯೆ ಆಲಿಸುತ್ತಿಲ್ಲ, ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಅವರು ನೆಲೆ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ, ಪಕ್ಷದಲ್ಲಿ ಬೆಲೆ ಇಲ್ಲದ ಮೇಲೆ ನಾವು ಇರುವುದು ಸರಿಯಿಲ್ಲ, ಹಾಗಾಗಿ ತಾಲೂಕಿಗೆ ನೀರಾವರಿ ಕೊಡುಗೆ ನೀಡಿದ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಮುಂದಿನ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ, ಇದು ಕೇವಲ ಆರಂಭ ಮುಂದಿನ ಆರು ತಿಂಗಳಲ್ಲಿ ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಕನಿಷ್ಟ 10 ಮಂದಿ ನಿಷ್ಟಾವಂತ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ, ಅಧಿಕಾರ ಪಡೆಯಲು ಹಣ ಚೆಲ್ಲುತ್ತಿರುವ ಕಾರ್ಯಕರ್ತರನ್ನು ನಿಕೃಷ್ಟವಾಗಿ ಕಾಣುವ ತ್ರಿಮೂರ್ತಿಗಳ ನಡೆಯಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. ಎಲ್ಲೋ ಬೆಂಗಳೂರಿನಲ್ಲಿ ಇದ್ದುಕೊಂಡು ಸ್ವಗ್ರಾಮದಲ್ಲಿ 100 ಮತಗಳ ಲೀಡ್ ಕೊಡಲು ಅಸಮರ್ಥರಾಗಿರುವ ಇವರೇ ಪಕ್ಷದಲ್ಲಿ ಪ್ರಮುಖರಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ಧೈರ್ಯವಿದ್ದರೆ ಅವರ ಗ್ರಾಮದಲ್ಲಿ ಲೀಡ್ ತೋರಿಸಲಿ ಎಂದು ಸವಾಲು ಹಾಕಿದರು.

ಅಧಿಕಾರ, ಹಣಕ್ಕಾಗಿ ನಾವು ಬಿಜೆಪಿಗೆ ಹೋಗುತ್ತಿಲ್ಲ, ನಮ್ಮ ಹಣವನ್ನೇ ಪಕ್ಷಕ್ಕಾಗಿ ಸುರಿದು ಪಕ್ಷ ಕಟ್ಟಿದ್ದೇವೆ, ಹಣದ ಅವಶ್ಯಕತೆ ನಮಗಿಲ್ಲ, ನಾವು ಯಾರೂ ಸಾಲ ಪಡೆದು ಸುಸ್ತಿದಾರರಾಗಿಲ್ಲ, ಬಮೂಲ್ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾಗ ರೈತರಿಗೆ ಕೋಟ್ಯಾಂತರ ರೂ. ಸಾಲ ಕೊಡಿಸಿದ್ದೇನೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ್ದೇನೆ, ತಾಲೂಕಿನಲ್ಲಿ ಪ್ರತಿನಿತ್ಯ 40 ಸಾವಿರ ಲೀ. ಇದ್ದ ಹಾಲಿನ ಪ್ರಮಾಣವನ್ನು 2 ಲಕ್ಷ ಲೀ.ಗೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷನಾಗಿ ಜಿಲ್ಲೆಯಲ್ಲಿ ಯುವಪಡೆಯನ್ನು ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದೇನೆ ಎಂದು ಲಿಂಗೇಶ್‍ಕುಮಾರ್ ಹೇಳಿದರು.

ಪಕ್ಷವನ್ನು ಬಿಡುವುದಾಗಿ ಖುದ್ದು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಿಳಿಸಿದ್ದೇನೆ, ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟಿನಿಂದಾಗಿ ಆದ ಅನ್ಯಾಯವನ್ನು ಅವರಿಗೆ ಬಿಡಿಸಿ ಹೇಳಿದ್ದೇನೆ, ಅವರೂ ಸಹ ಸರಿಪಡಿಸುವಲ್ಲಿ ನಾವು ಎಡವಿರುವುದಾಗಿ ಒಪ್ಪಿಕೊಂಡರು, ಮುಂದೆ ಸರಿಯಾಗುವುದೂ ಇಲ್ಲವೆಂದು ಹೇಳಿ ಹೊರಬಂದಿದ್ದೇನೆ, ಮುಂದಿನ ರಾಜಕೀಯ ಜೀವನವನ್ನು ಬಿಜೆಪಿಯಲ್ಲಿ ಮುಂದುವರೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುಳ್ಳೇರಿ ಶಿವರಾಮು, ನಯನ್, ಪ್ರದೀಪ್(ತಿಬ್ಬ), ದೇವರಾಜು, ತಮ್ಮಯ್ಯ, ಮುದಗೆರೆ ಜಯಕುಮಾರ್, ಸುಣ್ಣಘಟ್ಟ ಅಶ್ವತ್ಥ್, ಶಿವರಾಮು, ಚಾಮೇಗೌಡ, ಕಾಳೇಗೌಡ, ಹೇಮಂತ್, ಮಹದೇವು, ಗೋಪಾಲ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *