ಪಕ್ಷ ಸಂಘಟನೆಗೆ ಮಾತ್ರ ಕಾರ್ಯಕರ್ತರು ಬೇಕು : ಅಧಿಕಾರಕ್ಕೆ ಬಲಾಢ್ಯರುಬೇಕು : ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಚ್‌ಡಿಕೆ ಯುವಸೇನೆ ಆಕ್ರೋಶ
ಹಾಯ್ ರಾಮನಗರ (hairamanagara.in) 18 ಫೆಬ್ರವರಿ 2022
ಚನ್ನಪಟ್ಟಣ : ಪಕ್ಷ ಸಂಘಟನೆಗೆ ಮಾತ್ರ ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಬೇಕು. ಅಧಿಕಾರಕ್ಕೆ ಬಲಾಢ್ಯರುಬೇಕು ಎಚ್‌ಡಿಕೆ ಯುವಸೇನೆ ಅಧ್ಯಕ್ಷ ಸುಣ್ಣಘಟ್ಟ ಅಶ್ವತ್ಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ನಾಲ್ಕು ಮಂದಿಗೆ ಮಾತ್ರ ಎಲ್ಲ ಅಧಿಕಾರವೂ ಬೇಕು. ಎಲ್ಲ ಕೆಲಸಗಳೂ ಬೇಕು. ಕಾರ್ಯಕರ್ತರನ್ನು ಕಡೆಗಣಿಸುವ ಮುಖಂಡರ ವರ್ತನೆಯಿಂದ ಬೇಸತ್ತು ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗುವ ಮೊದಲೇ ಎಚ್‌ಡಿಕೆ ಯುವಸೇನೆ ಆರಂಭಿಸಿದ್ದೆವು. ಸುಮಾರು 700 ಸದಸ್ಯರನ್ನು ನೋಂದಣಿ ಮಾಡಿಕೊಂಡು ತಾಲ್ಲೂಕಿನಲ್ಲಿ ಪಕ್ಷ ಬಲಪಡಿಸಿದ್ದೇವೆ. ಸಂಘಟನೆಯಿಂದ ಮಾಡಿದ ಕಾರ್ಯಕ್ರಮಗಳಿಗೆ ಯಾರಿಂದಲೂ ಬಿಡಿಗಾಸು ಪಡೆದಿಲ್ಲ ಎಂದರು.
ಕುಮಾರಸ್ವಾಮಿ ಶಾಸಕರಾದ ನಂತರ ತಾಲ್ಲೂಕಿನಲ್ಲಿ ಸಾಮಾನ್ಯ ಕಾರ್ಯಕರ್ತರು ತಮಗೆ ರಾಜಕೀಯ ಸ್ಥಾನಮಾನ ಸಿಗುತ್ತದೆ ಎಂದುಕೊಂಡಿದ್ದರು. ಆದರೆ, ಇಲ್ಲಿ ಕೆಲವೇ ಗುತ್ತಿಗೆದಾರರಿಗೆ ಮಾತ್ರ ಮಣೆಹಾಕುವ ಪ್ರವೃತ್ತಿ ಆರಂಭವಾಯಿತು. ಪಕ್ಷಕ್ಕಾಗಿ ದುಡಿದವರು ಮೂಲೆಗುಂಪಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟು ವರ್ಷ ಜೆಡಿಎಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇವೆ. ಮುಂದೆ ನಮ್ಮ ರಾಜಕೀಯ ಜೀವನ ಭದ್ರಪಡಿಸಿಕೊಳ್ಳಬೇಕಾಗಿದೆ. ಹಾಗಾಗಿ, ಯುವಸೇನೆಯ ಬಹುತೇಕ ಮಂದಿ ಜೆಡಿಎಸ್ ತೊರೆಯಲು ನಿರ್ಧಾರ ಮಾಡಿದ್ದೇವೆ. ನಿಗದಿತ ದಿನದಂದು ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆ ಆಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಾಮೂಹಿಕ ಬಿಜೆಪಿ ಸೇರ್ಪಡೆ :
ತಾಲ್ಲೂಕು ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರ ಸಮಸ್ಯೆ ಆಲಿಸದ ಕಾರಣ ಬೇಸತ್ತು ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಎಚ್‌ಡಿಕೆ ಯುವಸೇನೆ ಪದಾಧಿಕಾರಿಗಳು ತಿಳಿಸಿದರು.
ಯುವ ಸೇನೆಯ ಉಪಾಧ್ಯಕ್ಷ ಶಿವರಾಮು, ಪದಾಧಿಕಾರಿಗಳಾದ ಚಾಮರಾಜು, ಶಿವು, ವಸಂತಮ್ಮ, ರತ್ನಮ್ಮ, ಜಯರಾಮು, ರೋಷನ್ ಇದ್ದರು.