ಜನುಮ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಗೆ ವಾಟರ್ ಪಿಲ್ಟರ್ ವಿತರಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್

ರಾಮನಗರ : ನಮ್ಮ ಆರೋಗ್ಯ ರಕ್ಷಣೆಗೆ ಊಟ ಎಷ್ಟು ಮುಖ್ಯವೊ ಕುಡಿಯುವ ನೀರೂ ಸಹ ಅಷ್ಟೆ ಮುಖ್ಯವಾಗಿರುತ್ತದೆ. ಆದ್ದರಿಂದ ನನ್ನ ಮಕ್ಕಳ ಪ್ರತಿ ವರ್ಷದ ಹುಟ್ಟು ಹಬ್ಬಕ್ಕೂ ಶುದ್ಧ ಕುಡಿಯುವ ನೀರಿನ ಸೌಲಭ್ಯದ ಕೊರತೆ ಇರುವ ಸರಕಾರಿ ಶಾಲೆಗಳಿಗೆ ವಾಟರ್ ಫಿಲ್ಟರ್ ನೀಡುತ್ತೇನೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ .ಕೆ ಅವರು ತಿಳಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿರುವ ಇರುಳಿಗರ ಕಾಲೋನಿಯಲ್ಲಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ತಮ್ಮ ಹುಟ್ಟಹಬ್ಬದ ಪ್ರಯುಕ್ತ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಿ ಮಾತನಾಡಿದ ಸತೀಶ್ .ಕೆ ಅವರು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಸೌಲಭ್ಯಗಳ ಕೊರತೆಯ ನಡುವೆಯೂ ವಿದ್ಯಾಭ್ಯಾಸವನ್ನು ಪಡೆಯುವಂತೆ ಶ್ರಮಿಸುತ್ತಿರುವುದು ಇಲ್ಲಿನ ಶಾಲೆಯ ಮುಖ್ಯ ಶಿಕ್ಷಕ ಚಂದ್ರು ಅವರ ಶ್ರಮ ಶ್ಲಾಘನೀಯ ಕಾರ್ಯವಾಗಿದೆ ಎಂದರು.


ಮಕ್ಕಳು ಶುದ್ಧ ನೀರನ್ನು ಸೇವಿಸಿ ಆರೋಗ್ಯವಂತರಾಗಿ ಉತ್ತಮ ಶಿಕ್ಷಣವನ್ನು ಹೊಂದಬೇಕು. ಸರಕಾರಿ ಪ್ರಾಥಮಿಕ ಪಾಠಶಾಲೆಯಾದ ಈ ಇರುಳಿಗರ ಕಾಲೋನಿಯ ಪಾಠಶಾಲೆಯಲ್ಲಿನ ವಿದ್ಯಾರ್ಥಿಗಳು ಹಲವು ಕುಂದು-ಕೊರತೆಗಳ ನಡುವೆಯೂ ಅಕ್ಷರ ಜ್ಞಾನಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ವಿದ್ಯಭ್ಯಾಸ ಹೊಂದುತ್ತಿರುವುದು ಶಿಕ್ಷಕರ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಶಾಲೆಯಲ್ಲಿನ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಹೊಂದಿ ವಸತಿ ಶಾಲೆಗಳಲ್ಲಿ ಪ್ರವೇಶವನ್ನು ಪಡೆದು ಉನ್ನತ ವ್ಯಾಸಂಗವನ್ನು ಹೊಂದಬೇಕು. ಆ ಮೂಲಕ ನಗರ ಪ್ರದೇಶಗಳ ವಿದ್ಯಾರ್ಥಿಗಳ ಸರಿಸಮಾನವಾಗಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕಾಂತರಾಜ್ .ಎಂ ಅವರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸತೀಶ್ ಅವರು, ಕುಡಿಯುವ ಶುದ್ಧ ನೀರಿನ ಕೊರತೆ ಇರುವ ಈ ಶಾಲೆಗೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿ ಮಕ್ಕಳ ನಡುವೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.


ಶುದ್ಧ ಕುಡಿಯುವ ನೀರು ನಗರವಾಸಿಗಳಿಗೆ ದೊರೆಯುವಂತೆ ಕೊರತೆ ಇರುವ ಇಂತಹ ಸರಕಾರಿ ಶಾಲೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ತಮ್ಮ ಹುಟ್ಟುಹಬ್ಬದ ನೆನಪಿನಾರ್ಥ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿ ಸಮಾಜಮುಖಿ ಕಾರ್ಯದಲ್ಲಿ ಮುಂದಾಗಿದ್ದಾರೆ. ಶಿಕ್ಷಕರ ಕೊರತೆ ಇರುವ ಈ ಶಾಲೆಗೆ ಸಿಆರ್ಪಿಓ ಗೌರೀಶ್ ಅವರು ಮಕ್ಕಳಿಗೆ ಕಲಿಕೆಗೆ ಮುಂದಾಗಿರುವುದು ನಿಜಕ್ಕೂ ಪ್ರಶಂಸನಾರ್ಹವಾದ ಕಾರ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ರಾಜ್ಯ ಪರಿಷತ್ ಸದಸ್ಯ ಸುರೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಮತ್ತು ಸಿಆರ್ಪಿಓ ಗೌರೀಶ್ ಅವರುಗಳು ಈ ಸಂದರ್ಭದಲ್ಲಿ ಮಾತನಾಡಿದರು. ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಹುಣಸನಹಳ್ಳಿ ಗ್ರಾಮ ಪಂಚಾಯಿತ ಸದಸ್ಯ ಬೈರೇಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ರವಿ, ಖಜಾಂಚಿ ಟಿ. ನರಸಯ್ಯ, ದರ್ಶನ್ಗೌಡ, ಪ್ರದೀಪ್, ನಾಗರಾಜ್, ಸಿದ್ದರಾಮಯ್ಯ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *