ಪರಿಸ್ಥಿತಿ ಬಿಗಡಾಯಿಸುವ ಮನ್ಸೂಚನೆ ಅರಿತ ಉಕ್ರೇನ್ ಸರ್ಕಾರ ಹಾಗೂ ವಿಶ್ವವಿದ್ಯಾಲಯ ನಮಗೆ ರೈಲು ವ್ಯವಸ್ಥೆ ಮಾಡಿ ಗಡಿಭಾಗದವರೆಗೆ ತಲುಪಿಸಿತು : ನಿವೇದಿತಾ

ಚನ್ನಪಟ್ಟಣ : ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ ನಿವೇದಿತಾ ಭಾನುವಾರ ಸಂಜೆ ಉಕ್ರೇನ್‌ನಿಂದ ಮನೆಗೆ ಸುರಕ್ಷಿತವಾಗಿ ವಾಪಾಸ್ಸಾಗಿದ್ದಾರೆ.

ಗ್ರಾಮದ ವಿನುತಾ ಹಾಗೂ ಚಂದ್ರಶೇಖರ್ ದಂಪತಿ ಪುತ್ರಿಯಾದ ನಿವೇದಿತಾ ಅವರು ಉಕ್ರೇನ್‌ನ ಜಪೋರ್ಸಿಯಾ ಸ್ಟೇಟ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು.

‘ನಾವು ಇದ್ದ ಜಪೋರ್ಸಿಯಾದಲ್ಲಿ ಗಂಭೀರ ಯುದ್ಧಭೀತಿ ಇರಲಿಲ್ಲವಾದರೂ ದಾಳಿ ನಡೆಯುತ್ತಿತ್ತು. ಯುದ್ಧ ವಿಮಾನ, ಟ್ಯಾಂಕರ್, ಸೇನಾಪಡೆ ಓಡಾಡುವ ಬಗ್ಗೆ ಸುದ್ದಿ ಬರುತ್ತಿತ್ತು. ನಮ್ಮನ್ನು ವಿದ್ಯಾರ್ಥಿ ನಿಲಯದಿಂದ ಬಂಕರ್‌ಗೆ, ಬಂಕರ್‌ನಿಂದ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಆ ನಂತರ ಪರಿಸ್ಥಿತಿ ಬಿಗಡಾಯಿಸುವ ಮನ್ಸೂಚನೆ ಅರಿತ ಉಕ್ರೇನ್ ಸರ್ಕಾರ ಹಾಗೂ ವಿಶ್ವವಿದ್ಯಾಲಯ ನಮಗೆ ರೈಲು ವ್ಯವಸ್ಥೆ ಮಾಡಿ ಗಡಿಭಾಗದವರೆಗೆ ತಲುಪಿಸಿತು. ಒಂದು ವಾರದ ಕಾಲ ರೈಲಿನಲ್ಲಿಯೆ ಪ್ರಯಾಣ ಮಾಡಿದೆವು. ರೈಲಿನಲ್ಲಿ ಬಿಸ್ಕೇಟ್, ಡ್ರೈಫ್ರೂಟ್ಸ್ ತಿನ್ನುತ್ತಾ ಗಡಿ ತಲುಪಿದೆವು’ ಎಂದು ತಿಳಿಸಿದರು.

‘ನಾವು ಹಂಗೇರಿ ದೇಶದ ಗಡಿ ತಲುಪಿದ ಮೇಲೆ ಕೇಂದ್ರ ಸರ್ಕಾರ ಸಹಾಯ ಮಾಡಿತು. ಹಂಗೇರಿಯ ಬುದ್ಧಪೆಸ್ಟ್ ವಿಮಾನ ನಿಲ್ದಾಣದಿಂದ ದೆಹಲಿ ತಲುಪಿ ಆನಂತರ ಬೆಂಗಳೂರು ತಲುಪಿದೆವು. ಗಡಿ ತಲುಪಿದ ನಂತರ ಭಾರತ ಸರ್ಕಾರವೇ ನಮಗೆ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿತು’ ಎಂದು ಅನುಭವ ಹಂಚಿಕೊಂಡರು.

‘ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ತಂದೆ, ತಾಯಿ, ತಂಗಿ ಸೇರಿದಂತೆ ಕುಟುಂಬಸ್ಥರು ಬಂದಿದ್ದರು. ನನ್ನಂತೆಯೆ ನೂರಾರು ವಿದ್ಯಾರ್ಥಿಗಳು ಅಲ್ಲಿಯೆ ಸಿಲುಕಿದ್ದಾರೆ. ಅವರನ್ನು ಸಹ ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆಸಿಕೊಳ್ಳಬೇಕು ಎನ್ನುವುದು ನನ್ನ ಮನವಿ’ ಎಂದು ನಿವೇದಿತಾ ಅವರು ಹೇಳಿದರು.

Leave a Reply

Your email address will not be published. Required fields are marked *