ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಪ್ರಮುಖ : ಸಿ.ಎಂ. ಲಿಂಗಪ್ಪ
ರಾಮನಗರ : ವಿದ್ಯಾರ್ಥಿಗಳ ವ್ಯಕ್ತಿತ್ವ ವರ್ಧನೆಯಲ್ಲಿ ಶಿಕ್ಷಣ ಪ್ರಮುಖ ಘಟ್ಟವಾಗಿದ್ದು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮಹತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ತಿಳಿಸಿದರು.
ತಾಲ್ಲೂಕಿನ ಬೈರಮಂಗಲ ಗ್ರಾಮದ ವೃಷಭಾವತಿ ಗ್ರಾಮಾಂತರ ಪ್ರೌಢಶಾಲೆ ಮತ್ತು ವೃಷಭಾವತಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ 2021-22 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ಕಲಿಕೆಯ ಕಡೆಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಮುತುವರ್ಜಿ ವಹಿಸಬೇಕು. ಉದ್ಯೋಗ ಹೊಂದುವುದೇ ಶಿಕ್ಷಣದ ಮೂಲ ಗುರಿ ಎಂಬುದನ್ನು ಬಿಟ್ಟು, ವ್ಯಕ್ತಿಯ ಪೂರ್ಣ ವಿಕಸನಕ್ಕೆ ಶಿಕ್ಷಣ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಹದಿಹರೆಯದ ವಯಸ್ಸು ಮತ್ತು ಮನಸ್ಸುಗಳನ್ನು ಸೆಳೆಯುವ ಶಿಕ್ಷಣದೊಂದಿಗೆ, ದೇಶಪ್ರೇಮ ಹಾಗೂ ವಾಸ್ತವಿಕ ಜಗತ್ತಿನ ಕಡೆಗೆ ಗಮನ ಸೆಳೆದು ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಛಾತಿ ಬೆಳೆಸಬೇಕು. ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಇಂತಹ ಸಮಾರಂಭಗಳು ಸಹಕಾರಿ. ಮಾತೃ ಭಾಷೆಯ ಬಳಕೆಯಲ್ಲಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಪ್ರವೃತ್ತಿಯನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕಾದುದು ಹಿರಿಯರ ಜವಾಬ್ದಾರಿ. ಈ ನೆಲದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎಳವೆಯಲ್ಲಿಯೇ ಬಿತ್ತಿ, ವಿದ್ಯಾರ್ಥಿಗಳನ್ನು ಸಶಕ್ತ ಭಾರತ ನಿರ್ಮಾಣಕ್ಕೆ ಅಣಿಗೊಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಶ್ರೀ ವೃಷಭಾವತಿ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಷಕಂಠಯ್ಯ ಮಾತನಾಡಿ, 53 ವರ್ಷಗಳ ಹಿಂದೆ ಆರಂಭವಾದ ಈ ವಿದ್ಯಾ ಸಂಸ್ಥೆಯು ಸಾವಿರಾರು ಜನರ ಉತ್ತಮ ಬದುಕಿಗೆ ಬುನಾದಿ ಹಾಕಿದೆ. ಗ್ರಾಮೀಣ ಭಾಗದ ಮಕ್ಕಳು, ಉನ್ನತ ಶಿಕ್ಷಣ ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುದೆ ವಿದ್ಯಾಸಂಸ್ಥೆಯ ಮುಖ್ಯ ಆಶಯ. ಸುಪ್ತ ಪ್ರತಿಭೆಗಳಿಗೆ ಭೂಮಿಕೆ ಒದಗಿಸಿಕೊಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ಸುದೀರ್ಘ ಕಾಲದಿಂದಲೂ, ಆಧುನಿಕ ಕಾಲಕ್ಕೆ ಅನುಗುಣವಾದ ಶಿಕ್ಷಣವನ್ನು ಕಡಿಮೆ ಖರ್ಚಿನಲ್ಲಿ ನೀಡುತ್ತಿರುವುದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ವೃಷಭಾವತಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಎಚ್.ಸಿ. ರಾಜಣ್ಣ, ಖಜಾಂಚಿ ಬಿ.ಆರ್. ನಾಗರಾಜು, ಸದಸ್ಯರಾದ ಕೆ.ಪುಟ್ಟಸ್ವಾಮಿ, ಹೆಚ್.ಎನ್. ಬೋರಯ್ಯ, ಬಿ.ವಿ. ಸಂಜೀವರೆಡ್ಡಿ, ಸಿ.ಕೆ. ಪ್ರಕಾಶ್, ಶಿಕ್ಷಕ ಆರ್.ಎಸ್. ಗಿರೀಶ್, ನಾಗವಾರ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ವಿ. ಶ್ರೀನಿವಾಸ್, ಮುಖಂಡರಾದ ಕಾರ್ಪೆಂಟರ್ ಮರಿಯಪ್ಪ, ಶಿವ ಪ್ರಕಾಶ್, ಚೌಕಹಳ್ಳಿ ನಾಗರತ್ನಮ್ಮ, ಗೌರಮ್ಮ, ಮುಖ್ಯೋಪಾಧ್ಯಾಯರು, ಬೋಧಕ ಹಾಗೂ ಬೋಧಕೇತರ ವರ್ಗ ಹಾಜರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/Bd3rUGY5mEx04sz4oN6uZY
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com