ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಜ್ಜಾಗಿ : ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ
ಚನ್ನಪಟ್ಟಣ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗ ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಕಿವಿಮಾತು ಹೇಳಿದರು.
ನಗರದ ಬಿಇಒ ಕಚೇರಿ ಆವರಣದಲ್ಲಿರುವ ಕೋಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಆದರ್ಶ ವಿದ್ಯಾಲಯ ದಾಖಲಾತಿಯ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕೆ ಪೋಷಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ಇದೇ ಮೊದಲ ಬಾರಿಗೆ ಆದರ್ಶ ಶಾಲೆಯ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಸಿ.ಆರ್.ಪಿ. ಮುತ್ತಯ್ಯ, ಮಾಗನೂರು ಪ್ರಾಥಮಿಕ ಶಾಲೆಯ ಶಿಕ್ಷಕ ಕರುಣಾಕರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅವ್ವೇರಹಳ್ಳಿ ಶಾಲೆಯ ಶಿಕ್ಷಕಿ ಪ್ರಭಾ, ಮುಖಂಡ ವೆಂಕಟಸ್ವಾಮಿ, ಶಿಕ್ಷಣ ಸಂಯೋಜಕರಾದ ರವಿಕುಮಾರ್, ಗಂಗಾಧರ ಮೂರ್ತಿ ಭಾಗವಹಿಸಿದ್ದರು.