ಸ್ಲೋವಾಕಿಯಾ ಗಡಿಗೆ ಕ್ಯಾಬ್ ಗಳಲ್ಲಿ ಬರುತ್ತಿದ್ದಾಗ ಕಣ್ಣೇದುರಿಗೆ ಬಾಂಬ್ ಗಳು ಸಿಡಿದವು : ನಮ್ಮ ಕಥೆ ಮುಗೀತು ಅಂತಲೆ ಭಾವಿಸಿದ್ದೇವು : ಐಜೂರು ನಿವಾಸಿ ಆಯೇಷಾ
ರಾಮನಗರ : ಕಳೆದ ಡಿಸೆಂಬರ್ ನಲ್ಲಿ ವೈದ್ಯಕೀಯ ಪದವಿಗಾಗಿ ಉಕ್ರೇನ್‍ಗೆ ತೆರಳಿದ್ದ ರಾಮನಗರದ ಐಜೂರು ನಿವಾಸಿ ಆಯೇಷಾ ಭಾನುವಾರ ಬೆಳಿಗ್ಗೆ ರಾಮನಗರಕ್ಕೆ ವಾಪಸ್ಸಾಗಿದ್ದಾರೆ.
ಯುದ್ದಗ್ರಸ್ಥ ಉಕ್ರೇನ್‍ನಲ್ಲಿ ತಾವು ಅನುಭವಗಳನ್ನು ಮಾಧ್ಯಮ ಪ್ರತಿನಿಧಿಗಳ ಬಳಿ ಹಂಚಿಕೊಂಡಿದ್ದಾರೆ. ಉಕ್ರೇನ್‍ನಲ್ಲಿ ತಾವು ಅನುಭವಿಸಿದ ಯಾತನೆ, ನೋವನ್ನು ಪೋಷಕರ ಬಳಿ ಹೇಳಿಕೊಂಡಿರಲಿಲ್ಲ. ಮರುಳಿದ ನಂತರವಷ್ಟೇ ತಮ್ಮ ಭೀಕರ ಅನುಭವಗಳನ್ನು ಹಂಚಿಕೊಂಡಿರುವುದಾಗಿ ಹೇಳಿದರು.
ಕಿವಿವ್‍ನಲ್ಲಿ ಕೆಲ ದಿನಗಳ ವಾಸ್ತವ್ಯ :
ಕಳೆದ ಡಿಸೆಂಬರ್ ನಲ್ಲಿ ತಾನು ವೈದ್ಯಕೀಯ ಪದವಿಗಾಗಿ ಉಕ್ರೇನ್‍ನ ಲಿವಿವ್ ನಗರದಲ್ಲಿರುವ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಗೆ ಹೋಗಿದ್ದಾಗಿ, ರಷ್ಯಾ ಯುದ್ದ ಆರಂಭಿಸಿದ ತಕ್ಷಣ ತಾವೆಲ್ಲ ಅಲ್ಲಿನ ಪ್ರಮುಖ ನಗರ ಕಿವಿವ್‍ನಲ್ಲಿರುವ ಭಾರತೀಯ ರಾಯಭಾರಿಗಳ ಕಚೇರಿಗೆ ಬಂದು, ರಾಯಭಾರ ಕಚೇರಿಯವರು ತಮಗೆಲ್ಲ ಅಲ್ಲಿನ ಶಾಲೆಯೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು.
ಶಾಲೆಯ ಕಟ್ಟಡದ ಕೆಳಗೆ ತೀರಾ ಹಳೆಯದಾದ, ಧೂಳಿನಿಂದ ಆವೃತ್ತವಾಗಿದ್ದ ಬಂಕರ್ ನಲ್ಲಿ ತಮಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅದು ಹಿಟ್ಲರ್ ಕಾಲದ್ದು ಎಂದು ಅಲ್ಲಿನವರೊಬ್ಬರು ಹೇಳಿದರು. ಕಿವಿವ್ ನಗರದಲ್ಲಿ ಕರ್ಪ್ಯೂ ಇದ್ದ ಕಾರಣ ರಾಯಭಾರಿ ಕಚೇರಿಯವರು 15-20 ಕಿಮಿ ದೂರದಿಂದ ತಿನ್ನಲು ಆಹಾರ ತರಿಸುತ್ತಿದ್ದರು. ಹೊಟ್ಟೆ ತುಂಬ ಸಿಗುತ್ತಿರಲಿಲ್ಲ. ರಾಯಭಾರಿ ಕಚೇರಿ ಸಿಬ್ಬಂದಿ ಕೂಡ ನಮ್ಮ ಜೊತೆಗೆ ಸಿಕ್ಕಷ್ಟು ತಿನ್ನುತ್ತಿದ್ದರು. ಕಿವಿವ್‍ನಗರದ ಮೇಲೆ ದಾಳಿ ತೀವ್ರವಾಗಲಿದೆ ಎಂದು ಗೊತ್ತಾದ ಕೂಡಲೆ ನಮ್ಮನ್ನು ರೈಲಿನಲ್ಲಿ ಸ್ಲೋವಾಕಿಯಾ ಗಡಿಗೆ ಕಳುಹಿಸಲು ಏರ್ಪಾಟು ಮಾಡಿದರು. ಆದರೆ ಉಕ್ರೇನ್ ಸೈನಿಕರು ನಮಗೆ ರೈಲು ಹತ್ತಲು ಅವಕಾಶ ಮಾಡಲಿಲ್ಲ. ಹೀಗಾಗಿ ಕ್ಯಾಬ್‍ಗಳಲ್ಲಿ ಸ್ಲೋವಾಕಿಯಾ ಗಡಿ ತಲುಪಿದೆವು ಎಂದು ವಿವರಿಸಿದರು.
ಸ್ಲೋವಾಕಿಯಾ ಗಡಿ ತಲುಪಲು ಸುಮಾರು 50 ಗಂಟೆಗಳ ಕಾಲ ಪ್ರಯಾಣವಿತ್ತು. ದಾರಿಯಲ್ಲಿ ಅನೇಕಬಾರಿ ಉಕ್ರೇನ್ ಸೈನಿಕರು ತಪಾಸಣೆ ಮಾಡಿದ ವೇಳೆ ನಮ್ಮ ತಲೆಗೆ ಗನ್ ಇಟ್ಟು ನಾವೆಲ್ಲ ಯಾರು ಎಂದು ಪ್ರಶ್ನಿಸಿದರು. ಹ್ಯಾಂಡ್ಸ್ ಅಪ್ ಅಂದಾಗ ಪಾಲಿಸಬೇಕಿತ್ತು. ನಾವು ರಷ್ಯನ್ ಕಡೆಯವರೆಂದು, ತಮ್ಮ ರಾಷ್ಟ್ರಕ್ಕೆ ತೊಂದರೆ ಮಾಡಬಹುದು ಎಂಬುದು ಅವರ ಶಂಕೆ. ಹೀಗಾಗಿ ಎಲ್ಲ ರೀತಿಯಲ್ಲೂ ತಪಾಸಣೆ ನಡೆಸಿದರು. ಕೆಲವರು ತಮ್ಮನ್ನು ಹೆದರಿಸಿದ್ದು ಉಂಟು. ನಾವು ಭಾರತೀಯರು, ಮೆಡಿಕಲ್ ಓದೋಕೆ ಬಂದಿದ್ದೀವಿ ಎಂದು ತಮ್ಮ ಮೊಬೈಲ್‍ನಲ್ಲಿದ್ದ ಭಾರತದ ರಾಷ್ಟ್ರಧ್ವಜ ಮುಂತಾದ ಕುರುಹುಗಳನ್ನು ಕಂಡು ಪಾಸ್ ಪೋರ್ಟ್ ಪರೀಕ್ಷಿಸಿದ ನಂತರವಷ್ಟೇ ಕ್ಷಮೆ ಕೇಳಿ ಬೀಳ್ಕೊಟ್ಟರು. ಅಲ್ಲದೆ ಊಟ, ತಿಂಡಿ, ಬಟ್ಟೆ, ವೈದ್ಯಕೀಯ ವ್ಯವಸ್ಥೆ ಕೊಟ್ಟು ಗಡಿಗೆ ತೆರಳಲು ಸಹಕರಿಸಿದರು ಎಂದರು.
ಕಿವಿವ್ ನಗರದ ಶಾಲೆಯಲ್ಲಿ ವಾಸ್ತವ್ಯವಿದ್ದಾಗ ಆಗಾಗ್ಗೆ ಬಾಂಬ್ ಸಿಡಿತದ ಸದಸು ಕೇಳಿಸುತ್ತಿತ್ತು. ಅಲ್ಲಿ ಸುಮಾರು 300 ಭಾರತೀಯರಿದ್ದೆವು. ಒಮ್ಮೊಮ್ಮೆ ದಟ್ಟ ಹೊಗೆ ಕಾಣಿಸುತ್ತಿತ್ತು. ಆಗೆಲ್ಲ ನಮ್ಮ ಕಥೆ ಮುಗೀತು ಅಂತಲೇ ಭಾವಿಸಿದ್ದೆವು. ಸ್ಲೋವಾಕಿಯಾ ಗಡಿಗೆ ಕ್ಯಾಬ್‍ಗಳಲ್ಲಿ ಬರುತ್ತಿದ್ದಾಗ, 2-3 ಬಾರಿ ಕಣ್ಣೇದುರಿಗೆ ಬಾಂಬ್‍ಗಳು ಬಿದ್ದು ಸಿಡಿದವು.ಆಗಲೂ ನಮ್ಮ ಕಥೆ ಮುಗೀತು ಅಂತಲೆ ಭಾವಿಸಿದ್ದೇವು.
ಸ್ಲೋವಾಕಿಯಾ ಗಡಿ ತಲುಪಿದಾಗ ಅಲ್ಲಿ ಭಾರತದ ಅ„ಕಾರಿಗಳು ನಮ್ಮನ್ನು ಬರಮಾಡಿಕೊಂಡರು. ಅಲ್ಲಿಂದ ನಮಗೆ ನೀರು, ಆಹಾರದ ಕೊರತೆ ಕಾಣಲಿಲ್ಲ. ಭಾರತಕ್ಕೆ ಮರಳಲು ವಿಮಾನ ಪ್ರಯಾಣಕ್ಕೆ ಮೊದಲು ಬಂದವರಿಗೆ ಆಧ್ಯತೆ. ಹೀಗಾಗಿ ನಾವು ನಮ್ಮ ಸರದಿಗಾಗಿ ಕಾಯಬೇಕಿತ್ತು. ಹೀಗೆ ಕಾಯುವಾಗ ಸ್ಪೀಕರ್‍ನಲ್ಲಿ *ಇಂಡಿಯನ್ಸ್* ಅಂದಾಗ ಹೆತ್ತ ತಾಯಿ ಕರೆದಂತೆ ಭಾಸವಾಗುತ್ತಿತ್ತು ಎಂದರು. ಬಸ್, ವಿಮಾನ ವ್ಯವಸ್ಥೆಯನ್ನು ಭಾರತ ಸರ್ಕಾರವೇ ಮಾಡಿತ್ತು. ಶನಿವಾರ ಬೆಳಿಗ್ಗೆ ನವದೆಹಲಿ ಏರ್ ಪೋರ್ಟ್ ಗೆ ಬಂದ ನಂತರ ಕರ್ನಾಟಕ ರಾಜ್ಯದ ಅಧಿಕಾರಿಗಳು ಬರ ಮಾಡಿಕೊಂಡರು. ಕರ್ನಾಟಕ ಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟರು. ಬೆಂಗಳೂರಿಗೆ ಬರಲು ವಿಮಾನದ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರವೇ ಮಾಡಿತ್ತು ಎಂದು ವಿವರಿಸಿದರು.
ಯುದ್ದಗ್ರಸ್ಥ ಉಕ್ರೇನ್‍ನಿಂದ ನಮ್ಮನ್ನು ವಾಪಸ್ಸು ಕರೆತರಲು ಭಾರತ ರಾಯಭಾರಿ ಕಚೇರಿಯ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ. ಇತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಶ್ರಮಿಸಿವೆ. ಆರಂಭದಲ್ಲಿ ರಾಯಭಾರಿ ಕಚೇರಿಯವರ ಬಗ್ಗೆ ನನಗೂ ಕೋಪ ಬಂದಿದ್ದು ನಿಜ. ಆದರೆ ಅವರ ಸ್ಥಾನದಲ್ಲಿ ನಿಂತು ಯೋಚಿಸಿದಾಗಲೇ ಅವರ ಕಷ್ಟ ಅರ್ಥವಾಗಿತ್ತು. ನಾವೆಲ್ಲ ಎದೆಗುಂದದಂತೆ, ಆತಂಕಕ್ಕೆ ಒಳಗಾಗದಂತೆ ನಮ್ಮ ಬಗ್ಗೆ ನಿಗಾ ಇಟ್ಟಿದ್ದರು. ವಿಷಮ ಪರಿಸ್ತಿತಿಯಲ್ಲೂ ನಮ್ಮ ಪ್ರೋತ್ಸಾಹಿಸಲು ಜೋಕ್ಸ್ ಮಾಡಿ ನಗಿಸಲು ಪ್ರಯತ್ನಿಸುತ್ತಿದ್ದರು, ಪ್ರೋತ್ಸಾಹ ನುಡಿ ಆಡುತ್ತಿದ್ದರು ಎಂದು ಧನ್ಯವಾದ ತಿಳಿಸಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಂದೆ, ತಾಯಿ, ಚಿಕ್ಕಪ್ಪ, ಸಂಬಂಧಿಕರನ್ನು ಕಂಡಾಗ ತವರಿಗೆ ಬಂದುಬಿಟ್ಟೆ ಎಂಬ ಸಂತೋಷ ಆವರಿಸಿತು ಎಂದರು. ತನ್ನ ವೈದ್ಯಕೀಯ ಪದವಿ ಮುಂದುವರೆಯಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟರೆ ಮುಂದುವರೆಸುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆಯೇಷಾರ ತಂದೆ ಜೋಹಾರ್ ಪಾಷ ಮಾತನಾಡಿ ಉಕ್ರೇನ್‍ನಲ್ಲಿರುವ ಭಾರತದ ಮಕ್ಕಳೆಲ್ಲ ವಾಪಸ್ಸಾದ ಮಾತ್ರ ನನ್ನ ಮಗಳು ವಾಪಸ್ಸಾದ ಸಂತಸ ನನ್ನಲ್ಲಿ ಮನೆ ಮಾಡಲಿದೆ ಎಂದು ಹೇಳಿದರು.
ಈ ವೇಳೆ ಆಯೇಷಾರ ತಾಯಿ ಹಾಜಿರ ಭಾನು, ಚಿಕ್ಕಪ್ಪ ಕೌಸರ್ ಪಾಷ, ಕುಟುಂಬ ಸ್ನೇಹಿತ ಡಾ. ಸೈಯದ್ ಇದ್ದರು.