ಎಸ್. ರುದ್ರೇಶ್ವರ ಅವರ ಲೇಖನ : ವಿಶೇಷ ಮಕ್ಕಳು, ವಿಕಲಚೇತನ ಮಕ್ಕಳ ಬದುಕನ್ನು ನಿಸ್ವಾರ್ಥದಿಂದ ರೂಪಿಸುತ್ತಿರುವ ಶ್ರೀಮತಿ ವನಜಾಕ್ಷಿ ಹೆಗಡೆ

ಕರ್ನಾಟಕದ ಪಶ್ಚಿಮಘಟ್ಟದ ದಟ್ಟ ಕಾಡಿನ ಊರು ಶಿರಸಿ. ಆ ತಾಲ್ಲೂಕು ಕೇಂದ್ರದಿಂದ 6 ಕಿಲೊ ಮೀಟರ್ ಗಳಷ್ಟು ದೂರದ ಮೂಲೆಯಲ್ಲಿರುವ ಸಣ್ಣ ಹಳ್ಳಿ ಜಾನ್ಮನೆ. ಅಲ್ಲಿನ ಒಂದು ಸಾಮಾನ್ಯ ರೈತ ಕುಟುಂಬವೊಂದರ ಶ್ರೀ ಸೀತರಾಮ ಹೆಗಡೆ ಹಾಗೂ ಮಂಜುಳಾ ಹೆಗಡೆ ದಂಪತಿಗಳ 6 ಜನ ಮಕ್ಕಳಲ್ಲಿ 3 ನೇಯವರಾಗಿ ದಿನಾಂಕ: 12-05-1967 ರಂದು ವನಜಾಕ್ಷಿ ಅವರು ಜನಿಸಿದರು. ಶಾಲೆಗೆ ಹೋಗಿ ಬರುವುದು ಕಷ್ಟವೆಂದು ಚಿಕ್ಕವರಿದ್ದಾಗಲೆ ಶಿಕ್ಷಣಾಕ್ಕಾಗಿ ಅಜ್ಜನ ಮನೆ ಕೊಪ್ಪಲು ತೋಟಕ್ಕೆ ಹೋಗಿದ್ದಾಯಿತು. ಅಲ್ಲಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದ ತಾಲ್ಲೂಕು ಯಲ್ಲಾಪುರದ ವಜ್ರಳ್ಳಿಯಲ್ಲೂ ಪೂರೈಸಿ ಅಲ್ಲಿಗೆ ಒಂದು ಹಂತದ ಶಿಕ್ಷಣ ಪೂರೈಸಿತೆಂದು ಬೆಂಗಳೂರಿಗೆ ಪಯಣಿಸಿದರು.

         1987 ರಲ್ಲಿ ಬೆಂಗಳೂರಿಗೆ ಬಂದಿಳಿದು ಸೇರಿದ್ದು ಆಗಿನ ‘ಹಿಂದೂ ಸೇವಾ ಪ್ರತಿಷ್ಠಾನ’ದ ಅಡಿಯಲ್ಲಿ ವಿಕಲಚೇತನರ ಸೇವಾ ಕಾರ್ಯವನ್ನು ನಡೆಸುತ್ತಿದ್ದ ‘ಸೇವಾ ಇನ್ ಆಕ್ಷನ್’ ಎಂಬ ಸಂಘಟನೆಯಲ್ಲಿ ಸೇವಾ ಕಾರ್ಯ ಪ್ರಾರಂಭವಾಯಿತು. ಅಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಯಂ ವಿದ್ಯಾಭ್ಯಾಸವನ್ನು ಮುಂದುವರೆಸಿ ಎನ್‍ಟಿಟಿ ತರಬೇತಿಯನ್ನು ಪಡೆದು ಸಮನ್ವಯ ಶಿಕ್ಷಣದ ತರಗತಿಗಳನ್ನು ಪೂರೈಸಿ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಸೇವಾ ಕಾರ್ಯಕ್ಕಾಗಿ ನಿಯೋಜನೆಗೊಂಡು ಪೂರ್ಣಕಾಲಿಕ ಸೇವಾ ವೃತ್ತಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.

         ಸೇವಾ ಕಾರ್ಯದ ನಿಮಿತ್ತ 1993 ರಲ್ಲಿ ರಾಯಚೂರು ಜಿಲ್ಲೆಗೆ ಹೋಗಿ ಅಲ್ಲಿ ವಿಕಲಚೇತನ ಮಕ್ಕಳಿಗಾಗಿ ‘ಪ್ರೇರಣಾ’ ಸಂಸ್ಥೆಯನ್ನು ಹುಟ್ಟುಹಾಕಿ ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ವಿಕಲಚೇತನರಿಗೆ ಆಶಾಕಿರಣವಾಗಿ ಬದುಕು ಪ್ರಾರಂಭವಾಯಿತು. ಈ ಸಂಸ್ಥೆಯಲ್ಲಿ ಆಗ ಸುಮಾರು 40 ಕ್ಕೂ ಹೆಚ್ಚು ವಿಕಲಚೇತನರಿಗೆ ಬದುಕಿನ ಪಾಠ ಕಲಿಸಿ ಅವರಿಗೊಂದು ನೆಲೆಯನ್ನು ಕಾಣಿಸುವಲ್ಲಿ ಶ್ರಮಿಸಲಾಯಿತು.

         ಮತ್ತೆ ಪುನಃ 1995 ರಲ್ಲಿ ಬೆಂಗಳೂರಿಗೆ ಬಂದು ಅಲ್ಲಿ ಸಮೀಪದ ಕನಕಪುರ, ಕೋಲಾರದ ಚಿಂತಾಮಣಿ, ನೆಲಮಂಗಲ ಮುಂತಾದ ಸ್ಥಳಗಳಲ್ಲಿ ವಿಕಲಚೇತನರ ಬದುಕು ಕಟ್ಟಿಕೊಡಲು ಬೇಕಾದ ಮೂಲಭೂತ ಶಿಕ್ಷಣವನ್ನು ಅವರಿಗೆ ನೀಡುವ ಕೆಲಸ ಮಾಡಲಾಯಿತು. ಅದೇ ಸಮಯದಲ್ಲಿ ಅಂದರೆ 1996 ರಲ್ಲಿ ರಾಮನಗರಕ್ಕೆ ಬಂದು ‘ಸಂವರ್ಧನ ಸಂಪನ್ಮೂಲ ಕೇಂದ್ರ’ ಎಂಬ ಸಂಸ್ಥೆಯನ್ನು ಸೇವಾ ಇನ್ ಆಕ್ಷನ್ ಸಹಯೋಗದೊಂದಿಗೆ ನಡೆಸಲು ತೊಡಗಿಸಿಕೊಳ್ಳಬೇಕಾಯಿತು. ಆಗ ಪರಿಚಯವಾದವರು ರಾಮನಗರದ ದಿನಕರ್ ಅವರು.  ಅವರೊಂದಿಗೆ ಬಾಳನ್ನು ಹಂಚಿಕೊಂಡು ವೈವಾಹಿಕ ಬದುಕನ್ನು ಪ್ರಾರಂಭಿಸಿದರು. ಮನೆ, ಸಂಸಾರ ಇದರೊಂದಿಗೆ ಸಂವರ್ಧನದಲ್ಲಿ ಸೇವಾ ಕಾರ್ಯ ಮುಂದುವರೆಯುತ್ತಿದೆ.

         ಸಾಂಸಾರಿಕ ಬದುಕಿನಲ್ಲಿ ಮಗಳು ನಾಗಶ್ರೀ ಆಗಮಿಸಿದರು. ಮುಂದೆ ರಾಮನಗರದ ಹಿರಿಯ ಹಿತೈಷಿಗಳ ಸಹಯೋಗದಲ್ಲಿ ಸಂವರ್ಧನ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ನಾಗಶ್ರೀ ಎಂಬ ಮಗಳಿದ್ದಾರೆ.

         ಪ್ರಸ್ತುತ ಇದುವರೆಗೆ ಸುಮಾರು 200ಕ್ಕೂ ಹೆಚ್ಚು ವಿಕಲಚೇತನ ಮಕ್ಕಳು ತಮ್ಮ ಬರಡಾದ ಬದುಕಿನಲ್ಲಿಯೂ ನಗುವಿನ ಕಿರಣವನ್ನು ಕಂಡುಕೊಂಡಿದ್ದಾರೆ. ಈ ತರಹದ ಮಕ್ಕಳಿಗಾಗಿ ಸಂವರ್ಧನಾ ಸಂಸ್ಥೆಯಲ್ಲಿ ಅವರ ಮುಂದಿನ ಬದುಕಿನಲ್ಲಿ ಅತ್ಯಂತ ಅವಶ್ಯಕವಾದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ತರಬೇತಿ ನೀಡುವುದರೊಂದಿಗೆ ವಿಕಲಚೇತನರಿಗಾಗಿ ಸರ್ಕಾರದಿಂದ ದೊರಬೇಕಾದ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಈ ಸಂಸ್ಥೆಯು ಶ್ರಮಿಸುತ್ತಿದೆ. ಇದಲ್ಲದೆ ಮನೆಯಲ್ಲೇ ತಯಾರಿಸಬಹುದಾದ ಉಪಕರಣಗಳು, ಕೈಚೀಲಗಳು, ಮೇಣದ ಬತ್ತಿ ಪೇಪರ್ ಬ್ಯಾಗ್ ಮುಂತಾದವುಗಳ ತಯಾರಿಕೆಯ ತರಬೇತಿಯನ್ನು ನೀಡಿ ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಬೇಕಾದ ತರಬೇತಿಯನ್ನು ನೀಡಲಾಗುತ್ತಿದೆ.

         ಇವರ ಸೇವಾ ಕಾರ್ಯವನ್ನು ಮೆಚ್ಚಿ 2013ರ ವಿಶ್ವ ವಿಕಲಚೇತನರ ದಿನದಂದು ಇವರನ್ನು ಸನ್ಮಾನಿಸಲಾಯಿತು. 2015 ರಲ್ಲಿ ಶ್ರೀಯುತ ರಾಮಾ ಜೋಯಿಸ್ ರವರು ಈ ಸಂಸ್ಥೆಗೆ ಆಗಮಿಸಿ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದಲ್ಲದೆ ರಾಮನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ ಸಮನ್ವಯ ಶಿಕ್ಷಣ ನೀಡಿದ್ದಕ್ಕಾಗಿ ವಿಶೇಷ ಶಿಕ್ಷಣ ಪುರಸ್ಕಾರವನ್ನು 2016 ರಲ್ಲಿ ನೀಡಿದೆ.

         ವಿಶೇಷ ಮಕ್ಕಳು, ವಿಕಲಚೇತನ ಮಕ್ಕಳ ಬದುಕನ್ನು ನಿಸ್ವಾರ್ಥದಿಂದ ರೂಪಿಸುತ್ತಿರುವ ಶ್ರೀಮತಿ ವನಜಾಕ್ಷಿ ಹೆಗಡೆ ಅವರನ್ನು ರಾಮನಗರದ ಸಂವರ್ಧನಾ ಶಾಲೆಯಲ್ಲಿ ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರು ತಮ್ಮ ಅಜ್ಜಅಜ್ಜಿ (ಪಾರ್ವತಮ್ಮ ಸಿದ್ದವೀರಯ್ಯ, ಜಯಮ್ಮ ಶಾಂತಯ್ಯ) ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಲೇಖನ : ಎಸ್. ರುದ್ರೇಶ್ವರ, ಸಂಪಾದಕರು, ‘ಹಾಯ್ ರಾಮನಗರ’ ಡಿಜಿಟಲ್ ನ್ಯೂಸ್

Leave a Reply

Your email address will not be published. Required fields are marked *