ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಈ ಫಲಿತಾಂಶ ಶಾಕ್ ನೀಡಿದೆ : ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಜ್ಯದಲ್ಲಿ ಇನ್ನೇನು ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಪಂಚರಾಜ್ಯಗಳ ಫಲಿತಾಂಶ ಶಾಕ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷ ಟಾಂಗ್ ನೀಡಿದರು.
ಐದು ರಾಜ್ಯಗಳ ಫಲಿತಾಂಶ ಸಂಬಂಧ ವಿಧಾನಸೌಧದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಮೀಕ್ಷೆಗಳು ಭವಿಷ್ಯ ನುಡಿದಂತೆ ಚುನಾವಣೆ ಫಲಿತಾಂಶ ಬರುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜ್ಜಾನೋದಯ ಮಾಡಿಕೊಳ್ಳುವ ಫಲಿತಾಂಶ ಇದಾಗಿದೆ ಎಂದು ಹೇಳಿದರು.
ಗೋವಾ, ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಕರ್ನಾಟಕದಿಂದ ಸೂತ್ರಧಾರರನ್ನು ಗೋವಾಗೆ ಕಳುಹಿಸಿದ್ದರು ಎಂದ ಅವರು; ಜೆಡಿಎಸ್ ಮುಗಿಸಲು ಹೋದವರಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ ಇದಾಗಿದೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಪೈಪೋಟಿ ನೀಡಲು ಜೆಡಿಎಸ್ ಸೂಕ್ತ ಎಂಬುದು ಸಾಬೀತಾಗಿದೆ ಎಂದು ಅವರು ತಿಳಿಸಿದರು.
ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದ ಅವರು, ಐದು ರಾಜ್ಯಗಳ ಪರಿಸ್ಥಿತಿ ಬೇರೆ, ನಮ್ಮ ರಾಜ್ಯಗಳ ಪರಿಸ್ಥಿತಿ ಬೇರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಹಿಂದೆ ಪಶ್ಚಿಮ ಬಂಗಾಳದಲ್ಲಿ ಬಂದ ಫಲಿತಾಂಶ ಹಾಗೂ ಪಂಜಾಬ್ ನಲ್ಲಿ ಆಗಿರುವ ಬದಲಾವಣೆ ನಮಗೆ ಪ್ರೇರಣೆ ತಂದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.