ಮಾಗಡಿ ತಾಲ್ಲೂಕಿನ ಸಂಕೀಘಟ್ಟದಲ್ಲಿ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆ ಉದ್ಘಾಟನೆ : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಪಬ್ಲಿಕ್ ಶಾಲೆ ಪ್ರಾರಂಭ : ಡಾ.ಸಿ.ಎನ್. ಅಶ್ವಥ್ ನಾರಾಯಣ

ಮಾಗಡಿ : ಶಿಕ್ಷಣದಿಂದ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಗುಣಮಟ್ಟದ ಶಿಕ್ಷಣ ನೀಡಿ ಜ್ಞಾನ ವೃದ್ಧಿಸಲು ಸಂಕಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಕೌಶಲಾಭಿವೃದ್ಧಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.


ಬುಧವಾರ ಮಾಗಡಿ ತಾಲ್ಲೂಕಿನ ಸಂಕಿಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಜ್ಞಾನಭರಿತವಾದಾಗ ಸಮಾನತೆ ನೆಲಿಸುತ್ತದೆ. ದೇಶ ಅಭಿವೃದ್ಧಿಯಾಗುತ್ತದೆ. 21 ನೇ ಶತಮಾನದಲ್ಲಿ ಜ್ಞಾನ ಅತಿ ಎತ್ತರದ ಸ್ಥಾನ ಪಡೆದುಕೊಂಡಿದೆ. ಸಮಾಜದಲ್ಲಿ ಬಡವರು-ಶ್ರೀಮಂತರೆನ್ನದೇ ಎಲ್ಲರಿಗೂ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ದೊರಕಬೇಕು. ಗ್ರಾಮ ಪಂಚಾಯಿತಿಯಲ್ಲಿ ಪ್ರಾರಂಭಿಸಿರುವ ಪಬ್ಲಿಕ್ ಶಾಲೆಯಿಂದ ಶಿಕ್ಷಣದಲ್ಲಿ ಉಂಟಾಗುವ ಬದಲಾವಣೆಯನ್ನು ಜನರು ಕೆಲವು ವರ್ಷದಲ್ಲಿ ನೋಡಬಹುದು. ಶಿಕ್ಷಣದ ಜೊತೆ ಜ್ಞಾನ, ಕೌಶಲ್ಯತೆ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕೃಷಿ, ಸ್ವ ಉದ್ಯೋಗ ಸೇರಿದಂತೆ ಯಾವುದೇ ಉದ್ಯೋಗದ ಕ್ಷೇತ್ರವಿರಬಹುದು ಆರ್ಥಿಕವಾಗಿ ಸದೃಢವಾಗುವುದರ ಜೊತೆಗೆ ಉತ್ತಮ ಸಾಧನೆ ಮಾಡಬಹುದು ಎಂದರು.
ಹಣ ಹಾಗೂ ಆಸ್ತಿ ಶಾಶ್ವತವಲ್ಲ. ನಾವು ಗಳಿಸುವ ಜ್ಞಾನ ಮಾತ್ರ ಶಾಶ್ವತ. ನಾವು ಕಲಿಯುವ ಜ್ಞಾನ ನಮ್ಮೊಂದಿಗೆ ಸದಾ ಇರುತ್ತದೆ. ವಿದ್ಯಾರ್ಥಿಗಳು ಜ್ಞಾನವನ್ನು ಅರ್ಜಿಸಿ, ಆರಾಧಿಸಬೇಕು, ಆಗ ಮಾತ್ರ ನೀವು ಕಂಡಂತಹ ಕನಸು ಹಾಗೂ ನಿಗದಿಮಾಡಿಕೊಂಡ ಗುರಿ ಮುಟ್ಟಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ಹೆಸರು ಹಾಗೂ ಸ್ಥಾನ ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಸಂಕಿಘಟ್ಟದಲ್ಲಿರುವ ಗ್ರಾಮ ಪಂಚಾಯತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು.ಲ್ಯಾಬ್, ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಶಿಕ್ಷಕರು ಸೇರಿದಂತೆ ಯಾವುದೇ ಕೊರತೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಜ್ಞಾನರ್ಜನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಕಲಿಕೆ ಸಂಪೂರ್ಣವಾಗಿ ಶಾಲೆಯಲ್ಲೇ ನಡೆಯಬೇಕು. ಶಾಲೆಯಲ್ಲಿ ಕೇವಲ ಒಬ್ಬರೆ ಶಿಕ್ಷಕರು ಎಲ್ಲಾ ವಿಷಯಗಳನ್ನು ಬೋಧಿಸಿದರೆ ಗುಣಮಟ್ಟದ ಶಿಕ್ಷಣ ದೊರಕುವುದು ಕಷ್ಟಕರವಾಗಿರುತ್ತದೆ. ವಿದ್ಯಾರ್ಥಿಗಳು ಇಂದು ಕೇವಲ ಶಾಲೆ, ಗ್ರಾಮ ಮಾತ್ರವಲ್ಲ ಬೇರೆ ದೇಶದವರೊಂದಿಗೆ ಪ್ರತಿಯೊಂದು ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ಸಿದ್ಧಪಡಿಸಬೇಕಿದೆ. ಇದಕ್ಕಾಗಿ ಗುನಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಪಬ್ಲಿಕ್ ಶಾಲೆಯಲ್ಲಿ ವಿಷಯಾಧಾರಿತ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸಾರಿಗೆ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು ಎಂದರು.
ರಾಮನಗರ ಜಿಲ್ಲಾ ಪಂಚಾಯತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನರೇಗಾ ಯೋಜನೆಯಡಿ ಮಾಡಿರುವ ಕೆಲಸವನ್ನು ಗುರುತಿಸಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಶಸ್ತಿ ಸಹ ನೀಡಲಾಗಿದೆ. ಇಂದು ರಾಮನಗರ ಜಿಲ್ಲಾ ಪಂಚಾಯತ್ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೂರ್ಯಕುಮಾರ್, ಗಂಗಮ್ಮ, , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಮ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *