ಮಾ.19 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ
ರಾಮನಗರ : ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮಾರ್ಚ್ 19 ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದ್ದು, ಅಧಿಕಾರಿಗಳ ತಂಡ ಅಂದು ಭೇಟಿ ನೀಡುವ ಗ್ರಾಮದಲ್ಲೇ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸ್ವೀಕರಿಸಿ ಪರಿಹಾರ ನೀಡಲಿದೆ.
ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಮಾಗಡಿ ತಾಲ್ಲೂಕು ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ವಾಸ್ತವ್ಯ ಹೊಡಲಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯ ಎಂ.ಬಿ.ಹಳ್ಳಿ ಗ್ರಾಮದಲ್ಲಿ ಅಪರ ಜಿಲ್ಲಾಧಿಕಾರಿಗಳು, ಚನ್ನಪಟ್ಟಣ ತಾಲ್ಲೂಕು ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ವಾಸ್ತವ್ಯ ಹೊಡಲಿದ್ದಾರೆ.
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೂಳ್ಯ ಗ್ರಾಮದಲ್ಲಿ ಕನಕಪುರ ಉಪವಿಭಾಗಾಧಿಕಾರಿ, ಕನಕಪುರ ತಾಲ್ಲೂಕು ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ವಾಸ್ತವ್ಯ ಹೊಡಲಿದ್ದಾರೆ.
ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ನೆಲಮಲೆ ಗ್ರಾಮದಲ್ಲಿ ರಾಮನಗರ ತಾಲ್ಲೂಕು ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ವಾಸ್ತವ್ಯ ಹೊಡಲಿದ್ದಾರೆ.
ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ಪಹಣಿ ತಿದ್ದುಪಡಿ, ಸಾಮಾಜಿಕ ಭದ್ರತೆ ಯೋಜನೆ ಪಿಂಚಣಿಗಳ ಮಂಜೂರಾತಿ ಪತ್ರ ವಿತರಣೆ , ಆಹಾರ ಪಡಿತರ ಚೀಟಿ ವಿತರಣೆ, ಚುನಾವಣಾ ಗುರುತಿನ ಚೀಟಿ ವಿತರಣೆ, ಆಶ್ರಯ ಮತ್ತು ಸ್ಮಶಾನಕ್ಕೆ ಜಮೀನು ಕಾಯ್ದಿರಿಸುವಿಕೆಗಾಗಿ ಪ್ರಸ್ತಾವನೆ ಪರಿಶೀಲನೆ ಮತ್ತು ಅಂಗೀಕಾರ ಹಾಗೂ ಪೌತಿ ಖಾತೆ ಪ್ರಕ್ರಿಯೆಗಳನ್ನು ವಿಲೇವಾರಿಗೂಳಿಸಲಾಗುವುದು.
ಸಾರ್ವಜನಿಕರು ಹಾಗೂ ರೈತ ಬಂಧುಗಳು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸಮಸ್ಯೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.