ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 2021-22 ನೇ ಸಾಲಿನ ರಾಜ್ಯದ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಸ್ತಿ ಸ್ವೀಕರಿಸಿದ ಇಕ್ರಂ
ರಾಮನಗರ : ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಮಾರ್ಚ್ 14ರ ಸೋಮವಾರ ನಡೆದ “ನರೇಗಾ ಹಬ್ಬ-2022″ರ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ 2021-22ನೇ ಸಾಲಿನ ರಾಜ್ಯದ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಸ್ತಿ ಸ್ವೀಕರಿಸಿದರು.
ಕಳೆದ ಎರಡೂವರೆ ವರ್ಷಗಳಿಂದ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಇರುವ ಇಕ್ರಂ, ಅವರು ಜಿಲ್ಲೆಯು ನರೇಗಾ ಯೋಜನೆಯಲ್ಲಿ ಮೊದಲ ಸ್ಥಾನ ಪಡೆಯಲು ಶ್ರಮಿಸಿದ್ದಾರೆ. ಈ ವರ್ಷ ಬರೋಬ್ಬರಿ 1.07 ಲಕ್ಷ ವೈಯಕ್ತಿಕ ಕಾಮಗಾರಿಗಳನ್ನು ಪೂರ್ಣಗೊಳಿಸಿ, 300 ಕೋಟಿ ರೂ.ಗೂ ಹೆಚ್ಚು ನರೇಗಾ ಅನುದಾನ ಬಳಕೆ ಮೂಲಕ ಸಾರ್ವಜನಿಕ ಆಸ್ತಿ ಸೃಜಿಸುವಲ್ಲಿ ಅವರ ಪಾಲು ಇದೆ. ನರೇಗಾ ಯೋಜನೆ ಅಡಿ ಜಿಲ್ಲೆಯ 120ಕ್ಕೂ ಹೆಚ್ಚು ಸರ್ಕಾರಿ ಶಾಲೆ ಆಟದ ಮೈದಾನಗಳ ಅಭಿವೃದ್ಧಿ, 140 ಸ್ಮಾಶನ ಅಭಿವೃದ್ಧಿ, 90 ಕಲ್ಯಾಣಿಗಳ ಜೀರ್ಣೋದ್ದಾರ ಮಾಡಿದ್ದು, ಇವು ಇತರ ಜಿಲ್ಲೆಗಳಿಗೂ ಮಾದರಿ ಆಗಿವೆ. ಜೊತೆಗೆ ಚೆಕ್ ಡ್ಯಾಂ, ಸ್ಮಾರ್ಟ್ ಅಂಗನವಾಡಿ ಮೊದಲಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನರೇಗಾ ವಾರ್ ರೂಂ ಸ್ಥಾಪನೆ, ಸ್ವಸಹಾಯ ಸಂಘಗಳ ಬಲವರ್ಧನೆಗೂ ಶ್ರಮಿಸಿದ್ದಾರೆ.