36,925 ಮಕ್ಕಳಿಗೆ ಕೋವಿಡ್ ಲಸಿಕೆ : 12ರಿಂದ 14 ವರ್ಷದ ಮಕ್ಕಳಿಗೆ ಹಾಗೂ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ (3ನೇ ಡೋಸ್) ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ
ರಾಮನಗರ : ದೇಶದಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ಹೋಗಿಲ್ಲ, ಮಕ್ಕಳನ್ನು ಕೋವಿಡ್ ಸೋಂಕಿನಿಂದ ರಕ್ಷಿಸುವುದು ಅವಶ್ಯಕವಾಗಿದೆ ಎಂದು ರಾಮನಗರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್. ಸಿ. ಎಚ್ ಅಧಿಕಾರಿಗಳ ಕಛೇರಿ ವತಿಯಿಂದ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಅಭಿಯಾನ ಮತ್ತು 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕಾ ಲಸಿಕೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿ ಹರೆಯದ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರುವುದರಿಂದ ಅವರಿಗೆ ರೋಗ ನಿರೋಧಕ ಶಕ್ತಿ ಮುಖ್ಯ. ಶಾಲೆ, ಕಾಲೇಜುಗಳಿಗೆ ಹೋಗುವುದರಿಂದ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. 12 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರವು ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದ್ದು, ಅರ್ಹ ಮಕ್ಕಳು ಲಸಿಕೆ ಪಡೆಯುವಂತೆ ತಿಳಿಸಿದರು.

2 ಡೋಸ್ ಕೋವಿಡ್ ಲಸಿಕೆ ಪಡೆದು 9 ತಿಂಗಳು ಪೂರೈಸಿರುವ 60 ವರ್ಷ ಮೇಲ್ಪಟ್ಟ ಫಲಾನುಭವಿಗಳು ಮುನ್ನೆಚ್ಚರಿಕ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ಆರ್.ಸಿ. ಹೆಚ್ ಅಧಿಕಾರಿ ಡಾ. ಪದ್ಮ ಅವರು ಮಾತನಾಡಿ 12 ರಿಂದ 14 ವರ್ಷದ ಮಕ್ಕಳಲ್ಲಿ ಸೋಂಕು ನಿಯಂತ್ರಿಸಲು ಕೋರ್ಬಿವ್ಯಾಕ್ಸ್ ಎಂಬ ಲಸಿಕೆಯನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 36925 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ದಿನ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶಾಲೆಗಳು ಮತ್ತು ಲಸಿಕಾ ಶಿಬಿರಗಳಲ್ಲಿ ಹಂತ ಹಂತವಾಗಿ ಲಸಿಕೆ ನೀಡುವ ಮೂಲಕ ಗುರಿ ಸಾಧಿಸಲಾಗುವುದು. ಪೋಷಕರು ಹಾಗೂ ಮಕ್ಕಳು ಭಯ ಪಡುವ ಅವಶ್ಯಕತೆಯಿಲ್ಲ, ಮಾರ್ಗಸೂಚಿ ಅನ್ವಯ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ , ಜೊತೆಗೆ ತಜ್ಞರ ತಂಡ ರಚಿಸಿದ್ದು ತುರ್ತು ಸಂದರ್ಭಗಳಲ್ಲಿ ಅಗತ್ಯ ಸೇವೆಗಳನ್ನು ನೀಡಲಾಗುವುದು. ಇಂದಿನಿಂದ 60 ವರ್ಷ ಮೇಲ್ಪಟ್ಟ 2 ಡೋಸ್ ಲಸಿಕೆ ಪಡೆದು 9 ತಿಂಗಳು ಪೂರೈಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಲಸಿಕೆಯನ್ನು ಆರಂಭಿಸಿದ್ದು ಇದರ ಪ್ರಯೋಜನ ಪಡೆಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಶಿಧರ್, ಟಿ. ಎಚ್.ಓ ಡಾ ಶಶಿಕಲಾ, ಮಕ್ಕಳ ತಜ್ಞರಾದ ಡಾ ಶಶಿರೇಖಾ, ತಜ್ಞ ವೈದ್ಯರಾದ ಡಾ. ಯಶೋಧ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಸ್. ಗಂಗಾಧರ್, ಶುಶೂಶ್ರಕಾಧಿಕಾರಿ ಗಣೇಶ್, ಪ್ರಸೂತಿ ತಜ್ಞೆ ಡಾ ಗೀತಾ, ಮೇಲ್ವಿಚಾರಕರಾದ ಉಮಾದೇವಿ, ಶಂಭುಲಿಂಗಯ್ಯ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೋಷಕರು ಹಾಗೂ ಮಕ್ಕಳು ಹಾಜರಿದ್ದರು.