ರಾಮನಗರದ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಬೇನಾಮಿ ಆಸ್ತಿ ವಿವರ
ರಾಮನಗರ : ರಾಮನಗರ ಉಪವಿಭಾಗಾಧಿಕಾರಿ ಸಿ. ಮಂಜುನಾಥ್ ಅವರ ರಾಮನಗರದಲ್ಲಿರುವ ಸರ್ಕಾರಿ ಕಚೇರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅವರಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಒಟ್ಟು ಸುಮಾರು 5.5 ಕೋಟಿ ರೂ. ಆಸ್ತಿ ಪತ್ತೆಯಾಗಿದೆ.
ಮಾರ್ಚ್ 16ರ ಬುಧವಾರ ಬೆಳ್ಳಂ ಬೆಳಗ್ಗೆ ದಾಳಿ ಆರಂಭಿಸಿರುವ ಎಸಿಬಿ ಅಧಿಕಾರಿಗಳು ರಾಮನಗರದ ಮಿನಿವಿಧಾನಸೌಧದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೆಲವು ದಾಖಲೆಗಳನ್ನು ಪರಿಶೀಲನೆಗೆಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಅವರ ಅಧಿಕೃತ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ನಗರದ ಜಿಕೆವಿಕೆ ಬಳಿ 27 ಕುಂಟೆ ಭೂಮಿಯಲ್ಲಿ 7 ಬ್ಯಾಡ್ಮಿಂಟನ್ ಕೋರ್ಟುಗಳು, ರಿಕ್ರಿಯೇಷನ್ ಕೇಂದ್ರವನ್ನು ಇವರು ನಿರ್ಮಿಸಿದ್ದಾರೆ.
ಇಲ್ಲಿ ಕೆಲವು ಷಾಪಿಂಗ್ ಕಟ್ಟಡಗಳು ಇವೆ ಈ ಆಸ್ತಿಯ ಮೌಲ್ಯ ಸುಮಾರು 1.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬೆಂಗಳೂರು ಸಹಕಾರ ನಗರದಲ್ಲಿ ಮನೆ ಇದ್ದು, ಇದರ ಬೆಲೆ 2 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮದ ಬಳಿ ಪಾರ್ಮ್ ಹೌಸ್ ಪತ್ತೆಯಾಗಿದೆ. ಇಲ್ಲಿ ಮನೆ, ಕುರಿ, ಕೋಳಿ ಶೆಡ್ಗಳನ್ನು ನಿರ್ಮಿಸಲಾಗಿದೆ. ದಾಳಿಯ ವೇಳೆ ಅಧಿಕಾರಿಗಳಿಗೆ 710 ಗ್ರಾಂ ಚಿನ್ನಾಭರಣ, 3.5 ಕೆಜಿ ಬೆಳ್ಳಿ ಪದಾರ್ಥಗಳು, 1 ಇನ್ನೋವಾ ಕ್ರಿಸ್ಟಾ ಕಾರು, 1 ಪಾರ್ಚುನರ್ ಕಾರು ಪತ್ತೆಯಾಗಿದೆ. ಪರಿಶೀಲನೆ ಇನ್ನು ಪ್ರಗತಿಯಲ್ಲಿದೆ ಎಂದು ಎಸಿಬಿ ರಾಮನಗರ ಜಿಲ್ಲೆಯ ಡಿವೈಎಸ್ಪಿ ಜೋಗಿನ್ ತಿಳಿಸಿದ್ದಾರೆ.
ಮಂಜುನಾಥ್ ಅವರಿಗೆ ಸಂಬಂಧಿಸಿದಂತೆ ಆರು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯದಲ್ಲಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಅಧಿಕಾರಿ, ಸಿಬ್ಬಂದಿ ತನಿಖೆಯಲ್ಲಿ ಭಾಗಿಯಾಗಿದ್ಧಾರೆ.
ಕೆಎಎಸ್ ಅಧಿಕಾರಿ ಉಪವಿಭಾಗಾಧಿಕಾರಿ ಸಿ. ಮಂಜುನಾಥ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯ ಕೋಟಿಗಳನ್ನು ದಾಟುತ್ತದೆ. ಸಿ. ಮಂಜುನಾಥ್ ನೂರು ವರ್ಷ ಸೇವೆ ಮಾಡಿದರೂ ಕಾನೂನು ಬದ್ಧವಾಗಿ ಇದರಲ್ಲಿ ಅರ್ಧ ಆಸ್ತಿ ಮಾಡಲು ಸಾಧ್ಯವಿಲ್ಲ. ಆದರೆ ಈ ಪ್ರಮಾಣದ ಆಸ್ತಿ ಯಾವ ಆದಾಯದಿಂದ ಮಾಡಿದ್ದಾರೆ ಎಂಬುದನ್ನು ಸಿ. ಮಂಜುನಾಥ್ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.