ವಿದ್ಯಾರ್ಥಿಗಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು : ಜಾಲಮಂಗಲ ನಾಗರಾಜು ಕಿವಿಮಾತು
ರಾಮನಗರ : ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲೇ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಪರಿಸರವಾದಿ ಜಾಲಮಂಗಲ ನಾಗರಾಜು ಕಿವಿಮಾತು ಹೇಳಿದರು.
ತಾಲ್ಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಕೆಂಗಲ್ ಆಂಜನೇಯ ಸ್ವಾಮಿ ಗ್ರಾಮಾಂತರ ವಿದ್ಯಾಸಂಸ್ಥೆ ಆವರಣದಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಜನಸೇವೆ ಹಾಗೂ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಯುವ ಜನತೆಗೆ ಗಾಂಧೀಜಿ ಕುರಿತು ಉಪನ್ಯಾಸ, ಬಹುಮಾನ ವಿತರಣೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ” ಕಾರ್ಯಕ್ರಮದಲ್ಲಿ ಅವರು ಪರಿಸರ ಜಾಗೃತಿ ಕುರಿತು ಮಾತನಾಡಿದರು.
ಪುರಾಣ ಕಾಲದಿಂದಲೂ ಪರಿಸರಕ್ಕೂ ಮಾನವನಿಗೂ ಅವಿನಾಭಾವ ಸಂಬಂಧವಿದೆ. ಅದರೆ, ಇತ್ತೀಚಿನ ದಿನಗಳಲ್ಲಿ ಪರಿಸರ ಸಮತೋಲನ ತಪ್ಪುತ್ತಿರುವ ಕಾರಣ, ಮಾನವ ಜೀವನ ಗಂಡಾಂತರದಲ್ಲಿದೆ. ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ಸ್ವಚ ವಾತಾವರಣ ಹಾಗೂ ಸುಂದರ ಪರಿಸರ ಉಳಿಸಿಕೊಳ್ಳುವಲ್ಲಿ ಜಾಗೃತರಾಗಬೇಕು ಈ ದಿಕ್ಕಿನಲ್ಲಿ ಶಿಕ್ಷಕರು, ಸಮಾಜದ ಪ್ರಭಾವಿ ಮುಖಂಡರು ಹಾಗೂ ಪೋಷಕರು ಮುಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಗ್ರಾಮೀಣ ಸೊಗಡಿನ ಸಾಹಿತಿ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ)ಗಾಂಧೀಜಿ ಚಿಂತನೆ ಕುರಿತು ವಿಶೇಷ ಉಪನ್ಯಾಸ ನೀಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸರಳವಾಗಿ ಬದುಕಿದರೂ ಜಗತ್ತಿಗೆ ಉನ್ನತ ಚಿಂತನೆಗಳನ್ನು ಬಿಟ್ಟು ಹೋಗಿದ್ದಾರೆ. ಅಹಿಂಸಾ ಪ್ರತಿಪಾದಕರಾಗಿದ್ದ ಹಿಂಸೆ ಮೂಲಕ ಕೊನೆಯುಸಿರೆಳೆದುದು ದುರಂತವೇ ಸರಿ. ಗಾಂಧೀಜಿಯವರಿಗೆ ಮಕ್ಕಳ ಬಗ್ಗೆ ವಿಶೇಷವಾದ ಮಮಕಾರವಿತ್ತು. ಮಕ್ಕಳೂ ಕೂಡ ಗಾಂಧಿತಾತಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ತಿಳಿಸಿದರು.
ಗಾಂಧೀಜಿಯವರು ಯುದ್ಧ ಮತ್ತು ಹಿಂಸೆಯ ವಿರೋಧಿಗಳಾಗಿದ್ದರು. ಸರ್ವರೂ ಶಾಂತಿ- ನೆಮ್ಮದಿಯಿಂದ ಬದುಕಬೇಕು ಎಂಬುದು ಅವರ ಅಖಂಡ ನಿಲುವಾಗಿತ್ತು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಮಗೆ ಯುದ್ಧ ಬೇಡ, ಗಾಂಧಿ, ಬುದ್ಧ, ಅಂಬೇಡ್ಕರ್, ಕುವೆಂಪು ಅವರಂತಹ ದಾರ್ಶನಿಕರ ವಿಶ್ವ ಮಾನವತ್ವದ ನಿಲುವುಗಳು ಬೇಕಾಗಿದೆ. ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ಶಾಂತಿಯುತ ಬದುಕು ಕಟ್ಟಿಕೊಳ್ಳಲು ಪ್ರತಿಜ್ಞೆ ಮಾಡಬೇಕು ಎಂದು ಸಿಸಿರಾ ಕಿವಿಮಾತು ಹೇಳಿದರು.
ಕೆಂಗಲ್ ಆಂಜನೇಯ ಸ್ವಾಮಿ ಗ್ರಾಮಾಂತರ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆರ್.ಚಿಕ್ಕಬೈರೇಗೌಡಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದವರಿಗೆ ನಗದು ಹಾಗೂ ಗಾಂಧೀಜಿ ಕುರಿತ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಹುಮಾನವಾಗಿ ನೀಡಲಾಯಿತು. ಇದಲ್ಲದೆ, ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ವತಿಯಿಂದ ಸಾಹಿತಿ ಡಾ. ಸಿಸಿರಾ ಅವರು ಕೆಂಗಲ್ ಆಂಜನೇಯ ಸ್ವಾಮಿ ಗ್ರಾಮಾಂತರ ವಿದ್ಯಾಸಂಸ್ಥೆ ಗ್ರಂಥಾಲಯಕ್ಕೆ ಕೆಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಕೆಂಗಲ್ ಆಂಜನೇಯ ಸ್ವಾಮಿ ಗ್ರಾಮಾಂತರ ವಿದ್ಯಾಸಂಸ್ಥೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ರಮೇಶ್ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾಸಂಸ್ಥೆ ನಿರ್ದೇಶಕ ನಾಗರಾಜು, ಶಿಕ್ಷಕರಾದ ಶಿವಕುಮಾರ್, ಶ್ರೀನಿವಾಸ್, ಸಂಜೀವಯ್ಯ, ಸತೀಶ್, ಗಿರಿಯಪ್ಪ, ಮಹದೇವು, ಅಪ್ಪಾಜಿಗೌಡ, ನರಸಿಂಹಮೂರ್ತಿ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.