ಶಿಥಿಲಗೊಂಡಿರುವ ಶತಮಾನ ಕಂಡ ಹರೀಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ : ದುರಸ್ಥಿ ಪಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ
ರಾಮನಗರ ತಾಲೂಕಿನ ಕಸಬಾ ಹೋಬಳಿಯ ಹರೀಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನದಷ್ಟು ಹಳೆಯದಾಗಿದೆ. ಈ ಶಾಲಾ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ. 1920ರಲ್ಲಿ ಈ ಶಾಲೆಯ ಕಟ್ಟಡವನ್ನು ನಿರ್ಮಿಸಲಾಗಿತ್ತು. ಮೊದಲು 1 ರಿಂದ 4 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. 1935ರಲ್ಲಿ ಶಾಲಾ ವ್ಯಾಪ್ತಿಯನ್ನು, 5ರಿಂದ 7ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಯಿತು. ಶತಮಾನದಷ್ಟು ಹಳೆಯದಾದ ಈ ಸರ್ಕಾರಿ ಶಾಲೆಯಲ್ಲಿ ಈತನಕ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಕ್ಷಾರಭ್ಯಾಸ ಮಾಡುವುದರ ಜತೆಗೆ, ಉನ್ನತ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಭವ್ಯ ಐತಿಹಾಸಿಕ ಘನತೆ ಹೊಂದಿರುವ ಶಾಲೆ ಈಗ ಅಳಿವಿನ ಅಂಚಿಗೆ ತಲುಪಿದೆ.

ರಾಮನಗರ : ರಾಮನಗರ ಜಿಲೆಯಲ್ಲಿನ ಹಲವು ಏಕೋಪಾಧ್ಯಾಯ, ಗ್ರಾಮೀಣ ಶಾಲೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲೆಯ ಕಟ್ಟಡಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಶತಮಾನ ಕಂಡ ಸರ್ಕಾರಿ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಆಂಗ್ಲ ಹಾಗೂ ಕನ್ನಡ ಎರಡು ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿರುವ ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ ಹರೀಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ್ದೇ ಸಮಸ್ಯೆಯಾಗಿದ್ದು, ಬಿದ್ದು ಹೋಗುವ ಭೀತಿಯಿಂದಾಗಿ ಈ ಶಾಲೆಯನ್ನು ಪ್ರೌಢಶಾಲಾ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ.

ರಾಮನಗರ ತಾಲೂಕಿನ ಕಸಬಾ ಹೋಬಳಿಯ ಹರೀಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಶತಮಾನದಷ್ಟು ಹಳೆಯದಾಗಿದೆ. ಈ ಶಾಲಾ ಕಟ್ಟಡ ಕುಸಿದು ಬೀಳುವ ಹಂತ ತಲುಪಿದೆ.
1920ರಲ್ಲಿ ಈ ಶಾಲೆಯ ಕಟ್ಟಡವನ್ನು ನಿರ್ಮಿಸಲಾಗಿತ್ತು. ಮೊದಲು 1 ರಿಂದ 4 ನೇ ತರಗತಿವರೆಗೆ ಶಾಲೆ ನಡೆಯುತ್ತಿತ್ತು. 1935ರಲ್ಲಿ ಶಾಲಾ ವ್ಯಾಪ್ತಿಯನ್ನು, 5ರಿಂದ 7ನೇ ತರಗತಿ ವರೆಗೆ ವಿಸ್ತರಣೆ ಮಾಡಲಾಯಿತು.

ಶತಮಾನದಷ್ಟು ಹಳೆಯದಾದ ಈ ಸರ್ಕಾರಿ ಶಾಲೆಯಲ್ಲಿ ಈತನಕ ಸಾವಿರಾರು ಮಂದಿ ವಿದ್ಯಾರ್ಥಿಗಳು ಅಕ್ಷಾರಭ್ಯಾಸ ಮಾಡುವುದರ ಜತೆಗೆ, ಉನ್ನತ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಭವ್ಯ ಐತಿಹಾಸಿಕ ಘನತೆ ಹೊಂದಿರುವ ಶಾಲೆ ಈಗ ಅಳಿವಿನ ಅಂಚಿಗೆ ತಲುಪಿದೆ.

ಶಾಲೆಯ ಮಾಡು ಸಂಪೂರ್ಣ ಶಿಥಿಲಗೊಂಡಿದೆ. ಮಾಡಿಗೆ ಹಾಕಿದ ಮರದ ಪಕಾಸು-ರೀಪುಗಳು ಸಂಪೂರ್ಣ ದುರ್ಬಲಗೊಂಡಿದ್ದು, ಹೆಂಚುಗಳು ಕೆಳಗೆ ಬಿದ್ದು ಒಡೆದು ಹೋಗುತ್ತಿವೆ. ಮಳೆ ಬಂದರಂತೂ ಅಷ್ಟೂ ನೀರು ತರಗತಿಗಳ ಒಳಗೆ ಮಡುಗಟ್ಟಿ ನಿಲ್ಲುತ್ತಿದೆ. ನೀರನ್ನು ಶುಚಿಗೊಳಿಸುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಈ ಶಾಲೆಯನ್ನು ಜೀರ್ಣೋದ್ಧಾರಗೊಳಿಸಿ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಮೈಮರೆತು ಕುಳಿತಿದ್ದಾರೆ.

ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಕಂಡಿದ್ದ ಸ್ಥಳೀಯರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗಳಲ್ಲಿ ದಾಖಲು ಮಾಡಿದ್ದರು. ಆದರೆ ಕೊರೊನಾದಿಂದಾಗಿ ಮತ್ತೇ ಶಾಲೆಗೆ ದಾಖಲಾತಿ ಹೆಚ್ಚಾಗಿದೆ. ಅದರಲ್ಲೂ ಆಂಗ್ಲಮಾಧ್ಯಮ ನೀಡಿದ ಬಳಿಕ ಇಲ್ಲಿನ ದಾಖಲಾತಿಯು ಗಣನೀಯವಾಗಿ ಏರಿಕೆಯಾಗಿದೆ. ಶಾಲೆಯ ಒಟ್ಟು ಎಂಟು ಕೊಠಡಿಗಳಲ್ಲಿ ಏಳು ಸಂಪೂರ್ಣ ಶಿಥಿಲಗೊಂಡಿವೆ. ಉಳಿದಿರುವ ಒಂದು ಕೊಠಡಿಯಲ್ಲಿ 1ರಿಂದ 7ರ ತನಕ ತರಗತಿ ನಡೆಸುವುದು ಕಷ್ಟ. ಹಾಳಾಗಿರುವ ಕೊಠಡಿಗಳನ್ನು ದುರಸ್ಥಿ ಮಾಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ತರಗತಿ ನೀಡಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.

ಪಕ್ಕದ ಶಾಲೆಗಳಿಗೆ ಮಕ್ಕಳ ಸ್ಥಳಾಂತರ :
ಶಾಲೆಯ ಕಟ್ಟಡಗಳಿಂದಾಗಿ ಮಕ್ಕಳಿಗೆ ಹೊರೆಯಾಗುವುದನ್ನು ತಪ್ಪಿಸುವ ಸಲುವಾಗಿ ಪ್ರೌಢಶಾಲೆಯಲಿ ತರಗತಿ ನಡೆಸಲಾಗುತ್ತಿದೆ. ಆದರೆ, ಆಂಗ್ಲ ಹಾಗೂ ಕನ್ನಡ ಮಾಧ್ಯಮ ಇರುವುದರಿಂದ ಹೆಚ್ಚಿನ ಕೊಠಡಿಗಳು ಬೇಕಾಗುತ್ತದೆ. ಈ ಸಮಸ್ಯೆಯನ್ನು ಅರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಲಾದರೂ, ಶತಮಾನದಷ್ಟು ಹಳೆಯದಾದ ಶಾಲೆಗಳನ್ನು ಉಳಿಸಿಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಶಾಲೆಯ ಕಟ್ಟಡಗಳು ದುರಸ್ಥಿಯಾಗಿರುವ ಕಾರಣ, ಪಕ್ಕದ ಪ್ರೌಢಶಾಲೆಯಲ್ಲಿ ತರಗತಿ ಮಾಡುತ್ತಿದ್ದೇವೆ. ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ ಎನ್ನುತ್ತಾರೆ ಹರಿಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಲ್.ವಿ. ರುದ್ರಾಣಿ.

ಶತಮಾದಷ್ಟು ಹಳೆಯ ಶಾಲೆಯು ಸಂಪೂರ್ಣ ಶಿಥಿಲಗೊಂಡಿದೆ. ಕೊರೊನಾ ಬಿಕ್ಕಟ್ಟಿನಿಂದ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಸರ್ಕಾರಿ ಶಾಲೆಗಳ ದುಸ್ಥಿತಿ ನೋಡಿದರೆ, ಮರಳಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ಅನಿವಾರ್ಯ ಎನಿಸುತ್ತಿದೆ ಎಂದು ಹನುಮಂತೇಗೌಡನದೊಡ್ಡಿ ನಿವಾಸಿ ಮಧುಸೂದನ್ ತಿಳಿಸಿದರು.