ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಿಂದ ಅನಿರ್ಧಿಷ್ಠಾವಧಿ ಧರಣಿ : ಸಿ. ಪುಟ್ಟಸ್ವಾಮಿ
ರಾಮನಗರ : ಜಿಲ್ಲೆಯ ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮಾ.23 ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಹಿರಿಯ ರೈತ ಮುಖಂಡ ಪುಟ್ಟಸ್ವಾಮಿ ತಿಳಿಸಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ರೈತರ ಹಿತ ರಕ್ಷಣೆ ಮಾಡುವುಲ್ಲಿ ಸಂಪೂರ್ಣ ವಿಫಲವಾಗಿದೆ. ಅಕಾಲಿಕ ಮಳೆ ಮತ್ತು ಹವಮಾನ ವೈಪರೀತ್ಯ ಹಾಗೂ ಶಿಪಾರಸ್ಸು ಮಾಡಿದ ರಾಸಾಯನಿಕ ಔಷಧಗಳ ದುಷ್ಪರಿಣಾಮದಿಂದ ಶೇ.85 ಕ್ಕೂ ಅಧಿಕ ಪ್ರಮಾಣದಲ್ಲಿ ಹೂವು ಬತ್ತಿ ಹೋಗಿ, ಹರಳು, ಈಚು ಜೊಳ್ಳಾಗಿ ಬಿದ್ದು ಹೋಗಿದ್ದು ರೈತರು ಭಾರಿ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದಾರೆ. ಫಸಲು ಕಳೆದುಕೊಂಡಿರುವ ರೈತರಿಗೆ ಹೂ, ತರಕಾರಿ ಹಾಗೂ ಇತರೆ ಬೆಳೆಗಾರರಿಗೆ ನೀಡುವಂತೆ ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಅಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಾ.23 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ಮಾವು ಬೆಳೆಗೆ ಸಿಂಪಡಿಸುವ ಔಷಧಗಳ ಸಾಮಾರ್ಥ್ಯ ಗುಣಮಟ್ಟ ಪರಿಶೀಲಿಸಿ ಶಿಫಾರಸ್ಸು ಮಾಡಬೇಕಾದ ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಗುಣಮಟ್ಟ ಖಾತರಿ ಇಲ್ಲದ ಔಷಧ ಬಳಕೆಯಿಂದ ರೈತರಿಗೆ ಸುಮಾರು 120 ಕೋಟಿಯಷ್ಟು ಹೆಚ್ಚು ಹಣವನ್ನು ಖರ್ಚು ಮಾಡುವಂತಾಯಿತು ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಸಂಶೋಧನ ಕೇಂದ್ರಗಳಿದ್ದರೂ ಸಹ ರೈತರಿಗೆ ಬೆಳೆ ನಿರ್ವಹಣೆ ಮತ್ತು ಕೊಯ್ಲಿನ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ತೋಟಗಾರಿಕೆ ಬೆಳೆಗಾರರಿದ್ದರೂ ಸಹ ಕೇವಲ 3 ಸಾವಿರ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಒಂದು ಜಿಲ್ಲೆ ಒಂದು ಉತ್ಪನ್ನ ಹೆಸರಿನಲ್ಲಿ ರಾಮನಗರ ಜಿಲೆ,್ಲ ಮಾವು ಮತ್ತು ತೆಂಗು ಬೆಳೆಯುವ ಪ್ರಮುಖ ಪ್ರದೇಶ ಎಂದು ಗುರ್ತಿಸಿಕೊಂಡಿದೆ. ಈ ಬೆಳೆಗಳಿಗೆ ಸಾಮೂಹಿಕವಾಗಿ ಎಲ್ಲಾ ರೈತರಿಗೂ ವಿಮೆ ಕಲ್ಪಿಸಬೇಕಾಗಿತ್ತು. ಆದರೆ ಈ ರೀತಿ ಮಾಡಿಲ್ಲ ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದರು.
ಮಾವು ಬೆಳೆಗಾರ ವಾಸು ಮಾತನಾಡಿ, ಮಾವು ಮಾರುಕಟ್ಟೆಗೆ ಬರುವ ಸಂದರ್ಭದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧಿಕಾರಿಗಳು ಹೆಚ್ಚು ಮಾವು ಬೆಳೆಯುವ ರಾಮನಗರ ಮತ್ತು ಕೋಲಾರ ಜಿಲ್ಲೆಗಳಿಗೆ ಬಂದು ಬೆಳೆ ನಿರ್ವಹಣೆ ಮಾಡಬೇಕು ಆದರೆ ಅಧಿಕಾರಿಗಳು ಬೆಂಗಳೂರಿನ ಕಚೇರಿಯಲ್ಲಿ ಕುಳಿತು ಕಾಲ ಕಳೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿಕ್ಕಬೈರೇಗೌಡ, ಉಪಾಧ್ಯಕ್ಷ ಗುಂಗರಳ್ಳಿ ಮಹೇಶ್, ಮುಖಂಡರಾದ ಲಿಂಗೇಗೌಡ, ಧರಣೀಶ್ ರಾಂಪುರ, ಗೋಪಿ, ನಂಜಪ್ಪ, ಶಂಕುಂತಲ, ಕಮಲಮ್ಮ, ಎಂ. ಜಯಮ್ಮ, ಅಶ್ವತ್ಥನಾರಾಯಣ, ಸಿದ್ದರಾಜು, ದೇವರಾಜು ಇತರರು ಇದ್ದರು.