ರೇವಣಸಿದ್ದೇಶ್ವರ ಬೆಟ್ಟದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ

ರಾಮನಗರ : ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವನ್ನು ಇಲ್ಲಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಜಯಂತೋತ್ಸವದ ಅಂಗವಾಗಿ ಬೆಳಗಿನಿಂದಲೇ ಬೆಟ್ಟದ ಮೇಲಿನ ರೇವಣಸಿದ್ದೇಶ್ವರ ಉದ್ಬವಮೂರ್ತಿಗೆ ವಿಶೇಷ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜೆ, ಮಹಾ ಮಂಗಳಾರತಿ ನಡೆಯಿತು.

ವಿಶೇಷವಾಗಿ ಹೂಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಬೆಟ್ಟದ ಮಧ್ಯಭಾಗದ ಭೀಮೇಶ್ವರ, ಕೆಳಭಾಗದ ರೇಣುಕಾಂಭ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಜಿಲ್ಲೆ ಹೊರ ಜಿಲ್ಲೆಯಿಂದ ಬಂದ ಭಕ್ತರು ಬೆಟ್ಟ ಹತ್ತಿ ಬೆಳಗಿನಿಂದಲೇ ದೇವರ ದರ್ಶನ ಪಡೆದರು.

ರೇವಣಸಿದ್ದೇಶ್ವರ ದೇವರ ಉತ್ಸವಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ವಿಶೇಷ ಅಲಂಕಾರ ಮಾಡಿ ಮಂಗಳವಾಧ್ಯ ಸಮೇತ ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ಚನ್ನಪಟ್ಟಣ ಬೇವೂರು ಮಠಾಧ್ಯಕ್ಷರಾದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

ಬೇವೂರು ಮಠಾಧ್ಯಕ್ಷರಾದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ಬೆಟ್ಟವು ಅತ್ಯಂತ ಪ್ರಾಚೀನ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ.ಸಮಸ್ತ ಲೋಕ ಕಲ್ಯಾಣಕ್ಕಾಗಿ ಕೊಲ್ಲಿಪಾಕಿಯ ಶ್ರೀ ಸೋಮೇಶ್ವರ ಲಿಂಗಮುಖದಿಂದ ಅವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ದೈವಾಂಶಸಂಭೂತರು. ಭಕ್ತರಿಗೆಲ್ಲಾ ಅವರು ಸಾಕ್ಷಾತ್ ದೈವ ಸ್ವರೂಪರು ಅಪ್ರತಿಮ ಮಹಿಮಾಶಾಲಿಗಳಾದ ಅವರು ಲೋಕೋಧ್ಧಾರಕ್ಕಾಗಿ ಹಗಲಿರುಳೆನ್ನದೆ ಸಂಚರಿಸಿದರು.

ಸಪ್ತ ಸಮುದ್ರವನ್ನೇ ಪಾನ ಮಾಡಿದ ಅಗಸ್ತರ ಬದುಕನ್ನು ಬೆಳಗಿದ ತಪೋನಿಧಿಗಳು ವಿಭೀóಷಣನ ಮನದಿಚ್ಚೆಯಂತೆ ರಾವಣನ ನವಕೋಟಿ ಲಿಂಗಸ್ಥಾಪನೆಯ ಸಂಕಲ್ಪವನ್ನು ನೆರವೇರಿಸಿಕೊಟ್ಟು ತಮ್ಮ ಅವತಾರದುದ್ದಕ್ಕೂ ಜನ ಮನವನ್ನು ಶೋಧಿಸಿದ ಸಂಸ್ಕರಿಸಿದ ಘನಮಹಿಮ ಸಂಪನ್ನರಿವರು ಶ್ರೀ ಜಗದ್ಗುರು ರೇಣುಕಾಚಾರ್ಯರೇ ಕಲಿಯುಗದಲ್ಲಿ ಮತ್ತೆ ಶ್ರೀ ಜಗದ್ಗುರು ರೇವಣಸಿದ್ಧರಾಗಿ ಧರೆಗೆವತರಿಸಿ ಅನಂತ ಲೀಲೆಗಳನ್ನು ಮಾಡಿ ಭಕ್ತರ ಮನದಲ್ಲಿ ಆಧ್ಯಾತ್ಮಿಕ ಚೇತನವನ್ನು ತುಂಬಿದವರು.

ಲೋಕಸಂಚಾರ ಮಾಡುತ್ತಾ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಗೆ ಬಂದು ಇಲ್ಲಿನ ಬೆಟ್ಟದಲ್ಲಿ ಗುಪ್ತವಾಗಿ 700 ವರ್ಷಗಳು ತಪೋನುಷ್ಠಾನಗಳನ್ನು ಮಾಡಿ ಈ ಪರ್ವತ ಪ್ರದೇಶವನ್ನು ಪುನೀತಗೊಳಿಸಿದ ಮಹಾಮಹಿಮರು. ಅಂದಿನಿಂದ ಈ ಬೆಟ್ಟವು ಶ್ರೀ ರೇವಣಸಿದ್ದೇಶ್ವರ ಬೆಟ್ಟವೆಂದೇ ಪ್ರಸಿದ್ದವಾಗಿದೆ.ಅಂತಹ ಮಹಾಮಹಿಮರ ಜಯಂತಿಯನ್ನು ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಿ ಭಕ್ತ ಗಣಕೋಟಿಗೆ ರೇಣುಕಾಚಾರ್ಯರ ಮಹಿಮೆಯನ್ನು ಸಾರಬೇಕಿದೆ  ಎಂದು ತಿಳಿಸಿದರು.

ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರೇವಣಸಿದ್ದ ಸ್ವಾಮಿ ದಾಸೋಹ ಮಠದಿಂದ ಉತ್ಸವ ಸಮಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ದೇವಾಲಯದ ಆಡಳಿತಾಧಿಕಾರಿ ಎಸ್.ಎ. ಯೇಸುರಾಜ್, ಪ್ರಧಾನ ಅರ್ಚಕ ವಿಜಯಕುಮಾರ್, ಅರ್ಚಕರಾದ ಮಂಜುನಾಥ್, ಮೂರ್ತಿ, ವಿನಯ್, ಮನು, ಗ್ರಾಪಂ ಮಾಜಿ ಸದಸ್ಯ ಎ..ಸಿ. ಕೆಂಪಯ್ಯ ಮುಖಂಡರುಗಳಾದ ಬಿಡದಿ ಶಿವಸ್ವಾಮಿ, ಅವ್ವೇರಹಳ್ಳಿ ಶಿವಲಿಂಗಯ್ಯ,ಪ್ರಶಾಂತ್, ತಮ್ಮಣ್ಣ, ಸಿದ್ದಪ್ಪ ಕಾಡನಕುಪ್ಪೆ ರಾಘವೇಂದ್ರ, ವಿಭೂತಿಕೆರೆ ಶಿವಲಿಂಗಯ್ಯ, ನೆಲಮಲೆ ಗಂಗಾಧರ್, ಶಿಕ್ಷಕರಾದ ಮೃತ್ಯುಂಜಯ, ಶಿವರುದ್ರಯ್ಯ, ಅಮ್ಮನಪುರ ಶಶಿಕುಮಾರ್, ಪ್ರಕಾಶ್, ಕೋಟಹಳ್ಳಿ ರವಿ, ವಿಜಯಕುಮಾರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *