ತಾಳವಾಡಿ ಗ್ರಾಮದಲ್ಲಿ ಮಾರ್ಚ್ 20ರಿಂದ ಜಾತ್ರಾ ಮಹೋತ್ಸವ : ಮಾರ್ಚ್ 23ರಂದು ಪುರಾಣ ಪ್ರಸಿದ್ಧ ಮಾರಮ್ಮ ದೇವಿಯ ಅಗ್ನಿಕೊಂಡ ಮಹೋತ್ಸವ

ಮಾರ್ಚ್ 20ರ ಭಾನುವಾರದಂದು ಬೋರೇದೇವರ(ವೀರಭದ್ರೇಶ್ವರ) ಉತ್ಸವ ಮತ್ತು ಸೋಮವಾರ ಬೆಳಿಗ್ಗೆ ಅಗ್ನಿಕೊಂಡ ನಡೆಯಲಿದೆ. ಮಾರ್ಚ್ 21ರ ಸೋಮವಾದಂದು ಬಸವೇಶ್ವರ ಸ್ವಾಮಿ ಕೊಂಡದ ಸೌದೆ ಕಾರ್ಯಕ್ರಮ ಜರುಗಲಿದೆ. ಮಾರ್ಚ್ 22ರ ಮಂಗಳವಾರ ಬೆಳಿಗ್ಗೆ 9.30ಕ್ಕೆ ಬಸವೇಶ್ವರ ಸ್ವಾಮಿ ಅಗ್ನಿಕೊಂಡ ನಡೆಯಲಿದೆ. ಮಂಗಳವಾರ ಸಂಜೆ ಮಾರಮ್ಮ ದೇವಿಯ ಕೊಂಡದ ಸೌದೆ ಕಾರ್ಯ ನಡೆಯಲಿದೆ. ಮಾರ್ಚ್ 22ರ ಮಂಗಳವಾರ ರಾತ್ರಿ 10 ಗಂಟೆಗೆ ರಥೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಮಧ್ಯಾಹ್ನ 12 ಗಂಟೆಗೆ ಅರಮನೆ ಆರತಿ, ಸಂಜೆ 5 ಗಂಟೆಗೆ ಪಾನಕದ ಗಾಡಿ, 6 ಗಂಟೆಗೆ ನಾಲ್ಕು ಗ್ರಾಮಗಳ ಕೊಂಡದ ಸೌದೆ, ಸಂಜೆ 6.30 ರಿಂದ 8.30ರವರೆಗೆ ಪ್ರಸಾದ ವಿನಿಯೋಗ, ಬಳಿಕ ಪೂಜಾ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಮೈಸೂರು ನಗಾರಿ, ಮೈಸೂರು ಡೋಲು, ಮಹಿಳಾ ವೀರಗಾಸೆ ಕುಣಿತ ಹಾಗೂ ಆಂಜನೇಯ ಸ್ವಾಮಿಯ ಪಲ್ಲಕ್ಕಿ, ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಹಾಗೂ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿಯ ತಾಳವಾಡಿಯ ಪುರಾಣ ಪ್ರಸಿದ್ಧ ಮಾರಮ್ಮದೇವಿಯ ಅಗ್ನಿಕೊಂಡ ಮಾರ್ಚ್ 23ರ ಬುಧವಾರ ಬೆಳಿಗ್ಗೆ 5.30ಕ್ಕೆ ನಡೆಯಲಿದೆ. ತಾಳವಾಡಿಯ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಹಾಗೂ ಅಗ್ನಿಕೊಂಡ ವಿಜೃಂಭಣೆಯಿಂದ ನಡೆಯಲಿದೆ.

ಬಸವೇಶ್ವರಸ್ವಾಮಿ ದೇವಾಲಯ ತಾಳವಾಡಿ


ತಾಳವಾಡಿ ಸೇರಿದಂತೆ ಬಾಳಲಿಂಗೇಗೌಡನದೊಡ್ಡಿ, ತಿರುಮಲೇಗೌಡನದೊಡ್ಡಿ, ಕಾಂಚಿದೊಡ್ಡಿ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಮಾರಮ್ಮದೇವಿಯ ಅಗ್ನಿಕೊಂಡ ಮಹೋತ್ಸವಕ್ಕೆ ಸೌದೆಯನ್ನು ಎತ್ತಿನಗಾಡಿ, ಟ್ರಾಕ್ಟರ್ ಗಳ ಮೂಲಕ ಮಂಗಳವಾರ ಸಂಜೆಯಿಂದಲೇ ಜನರು ತಂದು ಅಗ್ನಿಕೊಂಡಕ್ಕೆ ಹಾಕಲಿದ್ದಾರೆ.

ಶ್ರೀ ಬಸವೇಶ್ವರಸ್ವಾಮಿ ತಾಳವಾಡಿ


ಮಾರ್ಚ್ 20ರ ಭಾನುವಾರದಂದು ಬೋರೇದೇವರ(ವೀರಭದ್ರೇಶ್ವರ) ಉತ್ಸವ ಮತ್ತು ಸೋಮವಾರ ಬೆಳಿಗ್ಗೆ ಅಗ್ನಿಕೊಂಡ ನಡೆಯಲಿದೆ. ಮಾರ್ಚ್ 21ರ ಸೋಮವಾದಂದು ಬಸವೇಶ್ವರ ಸ್ವಾಮಿ ಕೊಂಡದ ಸೌದೆ ಕಾರ್ಯಕ್ರಮ ಜರುಗಲಿದೆ. ಮಾರ್ಚ್ 22ರ ಮಂಗಳವಾರ ಬೆಳಿಗ್ಗೆ 9.30ಕ್ಕೆ ಬಸವೇಶ್ವರ ಸ್ವಾಮಿ ಅಗ್ನಿಕೊಂಡ ನಡೆಯಲಿದೆ. ಮಂಗಳವಾರ ಸಂಜೆ ಮಾರಮ್ಮ ದೇವಿಯ ಕೊಂಡದ ಸೌದೆ ಕಾರ್ಯ ನಡೆಯಲಿದೆ. ಮಾರ್ಚ್ 22ರ ಮಂಗಳವಾರ ರಾತ್ರಿ 10 ಗಂಟೆಗೆ ರಥೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.

ಬೋರೇದೇವರ (ವೀರಭದ್ರಸ್ವಾಮಿ) ದೇವಸ್ಥಾನ, ತಾಳವಾಡಿ.


ಅಂದು ಮಧ್ಯಾಹ್ನ 12 ಗಂಟೆಗೆ ಅರಮನೆ ಆರತಿ, ಸಂಜೆ 5 ಗಂಟೆಗೆ ಪಾನಕದ ಗಾಡಿ, 6 ಗಂಟೆಗೆ ನಾಲ್ಕು ಗ್ರಾಮಗಳ ಕೊಂಡದ ಸೌದೆ, ಸಂಜೆ 6.30 ರಿಂದ 8.30ರವರೆಗೆ ಪ್ರಸಾದ ವಿನಿಯೋಗ, ಬಳಿಕ ಪೂಜಾ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಮೈಸೂರು ನಗಾರಿ, ಮೈಸೂರು ಡೋಲು, ಮಹಿಳಾ ವೀರಗಾಸೆ ಕುಣಿತ ಹಾಗೂ ಆಂಜನೇಯ ಸ್ವಾಮಿಯ ಪಲ್ಲಕ್ಕಿ, ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಹಾಗೂ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

ಬೋರೇದೇವರು (ವೀರಭದ್ರಸ್ವಾಮಿ) ತಾಳವಾಡಿ.


‘ತಾಳವಾಡಿ ಮಾರಮ್ಮದೇವಿಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷವೂ ನಡೆಯುವ ಮಾರಮ್ಮದೇವಿ ಅಗ್ನಿಕೊಂಡಕ್ಕೆ ಮೈಸೂರಿನ ಮಹಾರಾಜರಿಂದ ‘ಅರಮನೆ ಆರತಿ’ ಬರಲಿದೆ. ಈ ಬಾರಿಯೂ ಸಹ ಸುಬ್ಬಶಾಸ್ತ್ರಿ ಅವರು ‘ಅರಮನೆ ಆರತಿ’ಯನ್ನು ತರಲಿದ್ದಾರೆ. ಮಾರಮ್ಮ ದೇವಿಯ ಭಕ್ತರ ಕೋರಿಕೆಗಳನ್ನ ಈಡೇರಿಸಿ ಹೆಚ್ಚಿನ ಭಕ್ತ ಸಮೂಹವನ್ನು ಹೊಂದಿದೆ’ ಎಂದು ತಾಳವಾಡಿಯ ಯಜಮಾನ್ ಶಿವಲಿಂಗಯ್ಯ “ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ಗೆ ತಿಳಿಸಿದರು.

ಶ್ರೀ ಸೋಮೇಶ್ವರ (ಈಶ್ವರ) ದೇವರು, ತಾಳವಾಡಿ.


‘ಭಾನುವಾರದಿಂದ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಮುಂದಿನ ಬುಧವಾರದವರೆಗೂ ಗ್ರಾಮದಲ್ಲಿ ಹಬ್ಬದ ವಾತಾವರಣವಿರುತ್ತದೆ. ಮಂಗಳವಾರ ಬಸವೇಶ್ವರಸ್ವಾಮಿಯ ಅಗ್ನಿಕೊಂಡ ವಿಜೃಂಭಣೆಯಿಂದ ನಡೆಯಲಿದೆ. ಮಂಗಳವಾರ ರಾತ್ರಿ ಪೂರ್ತಿ ಜಾನಪದ ಕಲಾ ತಂಡಗಳ ಮೆರವಣಿಗೆ, ಹಾಸ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಾಳವಾಡಿಯ ರವಿ ಮಾಹಿತಿ ನೀಡಿದರು.

ಸೋಮೇಶ್ವರ (ಈಶ್ವರ) ದೇವಸ್ಥಾನ, ತಾಳವಾಡಿ.


ಜನಸಾಗರ : ಜಿಲ್ಲೆಯೂ ಒಳಗೊಂಡಂತೆ ರಾಜ್ಯ ವಿವಿಧ ಭಾಗಗಳಿಂದ ಆಗಮಿಸಲಿರುವ ದೇವಿಯ ಆರಾಧಕರ ಹರ್ಷೋದ್ಗಾರ ಉತ್ಸವಕ್ಕೆ ಸಾಕ್ಷಿಯಾಗಲಿದೆ.


ತಾಳವಾಡಿ : ಕ್ರಿ.ಶ. 1295ರ ಹೊಯ್ಸಳ ರಾಮನಾಥನ ಕಾಲದಲ್ಲಿ ಇದು ಉಕ್ತವಾಗಿದ್ದು, ಜಾಲಮಂಗಲ ಗ್ರಾಮದ ಸಮೀಪದಲ್ಲಿದೆ. ಕ್ರಿ.ಶ. 1085ರ ಕುಲೋತ್ತುಂಗ ಚೋಳನ ಕಾಲದ ಶಾಸನ ಇಲ್ಲಿ ಲಭ್ಯವಿರುವಲ್ಲಿ ಅದರ ಹಳಮೆ ಅರಿವಾಗುತ್ತದೆ. ‘ವಾಡಿ’ ಎಂದರೆ ಸೈನ್ಯದ ಬೀಡು ಎಂಬರ್ಥವೂ ಇದ್ದು, ಧಾನ್ಯ ಬೆಳೆವ ಬೀಡು ಆಗಿದ್ದ ಕಾರಣ ನಡೆದಿರುವ ಯುದ್ದಗಳ ಹಿನ್ನೆಲೆಯಲ್ಲಿ ದಿನಚರಿಯ ಬದುಕಿನಿಂದ ರೂಪುಗೊಂಡಿದ್ದ ಹೆಸರಿಗೆ, ಚಾರಿತ್ರಿಕ ಸಂದರ್ಭದ ಕಾರಣ ಸೇರಿದ ಇನ್ನೊಂದು ಶಬ್ದ ಜೊತೆಯಾಗಿ ತಾಳ+ವಾಡಿ=ತಾಳವಾಡಿ ಆಗಿರುವಂತಿದೆ ಎಂದು ಹಿರಿಯ ಸಂಶೋಧಕರಾದ ಡಾ.ಎಂ.ಜಿ. ನಾಗರಾಜ್ ಅವರು ತಮ್ಮ “ರಾಮನಗರ ತಾಲ್ಲೂಕಿನ ಸ್ಥಳನಾಮಗಳು” ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಹನುಮಂತರಾಯ ದೇವಸ್ಥಾನ, ತಾಳವಾಡಿ.


“ಮೊದಲು ತಾಳವಾಡಿ ಮಾರಮ್ಮನ ದೇವಸ್ಥಾನ ಮಣ್ಣಿನ ಮಂಟಪದಲ್ಲಿತ್ತು, ನಂತರ ಕೈಹಂಚಿನಲ್ಲಿ ನಿರ್ಮಾಣವಾಯಿತು, ಆನಂತರ ಸೀಮೆಹಂಚಿನಲ್ಲಿ ನಿರ್ಮಾಣವಾಗಿ, ಈಗ ಕಲ್ಲಿನಲ್ಲಿ ನಿರ್ಮಾಣವಾಗಿದೆ” ಎಂದು ತಾಳವಾಡಿಯ ಯಜಮಾನ್ ಶಿವಲಿಂಗಯ್ಯ ಮಾಹಿತಿ ನೀಡಿದರು.


ತಾಳವಾಡಿಯ ಮಾರಮ್ಮ ಮೊದಲು ಯರೇಹಳ್ಳಿ ಗ್ರಾಮದಲ್ಲಿ ಇತ್ತಂತೆ, ನಂತರ ತಾಳವಾಡಿಗೆ ಬಂದು ನೆಲೆಯಾಯಿತು ಎಂದು ನಮ್ಮ ಊರಿನ ಹಿರಿಯರು ಹೇಳುತ್ತಿದ್ದರು. ತಾಳವಾಡಿ ಗ್ರಾಮವನ್ನು ಕೊಳ್ಳೆ ಹೊಡೆಯಲು ರಾಜನು ನುಗ್ಗಿದಾಗ ಊರಿನ ನಾಲ್ಕು ಕಡೆ ‘ತಾಳ’ ಹಾಕಲಾಯಿತಂತೆ, ಅಂದಿನಿಂದ ಈ ಊರನ್ನು ‘ತಾಳವಾಡಿ’ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.


ತಾಳವಾಡಿ ಗ್ರಾಮದಲ್ಲಿ ಮಾರಮ್ಮ, ಬಸವಣ್ಣ, ಹನುಮಂತರಾಯ, ಬೋರೆದೇವರು (ವೀರಭದ್ರಸ್ವಾಮಿ), ಸೋಮೇಶ್ವರ (ಈಶ್ವರ) ದೇವಸ್ಥಾನಗಳಿವೆ. ಪ್ರತಿ ವರ್ಷ ಮಾರಮ್ಮ, ಬಸವಣ್ಣ, ಹನುಮಂತರಾಯ ದೇವರುಗಳ ಅಗ್ನಿಕೊಂಡ ನಡೆಯುತ್ತದೆ. ಮಾರಮ್ಮನ ಅಗ್ನಿಕೊಂಡ ಒಮ್ಮೆಯೂ ನಿಂತಿಲ್ಲ ಎಂದು ತಿಳಿಸಿದರು.
ತಾಳವಾಡಿ ಬೆಟ್ಟಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಚಾರಣಿಗರು ಬರುತ್ತಾರೆ. ತಾಳವಾಡಿ ಬೆಟ್ಟದಲ್ಲಿ ಕೆಂಪೇಗೌಡರ ಕಾಲದ ಮಂಟಪಗಳಿವೆ. ನೀರಿನ ಸೊಣೆ ಇದೆ. ಗಟ್ಲು ಆಂಜನೇಯಸ್ವಾಮಿ ದೇವಾಲಯವಿದ್ದು, ಪ್ರತಿ ವರ್ಷ ಪರ ಮಾಡುತ್ತೇವೆ ಎಂದು ತಿಳಿಸಿದರು.


ತಾಳವಾಡಿ ಮಾರಮ್ಮ ಪುರಾತನ ಕಾಲದಿಂದಲೂ ತಾಳವಾಡಿಯಲ್ಲಿದೆ. ತಾಳವಾಡಿ ಮಾರಮ್ಮ ಹೊರಗಿನ ಭಕ್ತಾದಿಗಳಿಗೆ ಬೇಗ ವರಗಳನ್ನು ನೀಡುತ್ತಾಳೆ, ಮಂಗಳವಾರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ತಾಳವಾಡಿ ಗ್ರಾಮದ ನಂಜಪ್ಪ ತಿಳಿಸಿದರು.
ತಾಳವಾಡಿ “ಇನಾಮ್ತಿ” ಗ್ರಾಮವಾಗಿತ್ತು. ಮೈಸೂರು ಅರಸರಿಂದ ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ “ಅರಮನೆ ಆರತಿ” ಬರುತ್ತದೆ ಎಂದು ಅವರು ಹೇಳಿದರು.


ವಿಜಯ್ ರಾಂಪುರ ಅವರ ಫೇಸ್ ಬುಕ್ ಬರಹ :
ರಾಮನಗರ ತಾಲ್ಲೂಕು ಕೇಂದ್ರದಿಂದ 16 ಕಿ.ಮೀ. ದೂರದಲ್ಲಿರುವ ತಾಳವಾಡಿ ಗ್ರಾಮದ ಪೂರ್ವ ದಿಕ್ಕಿನಲ್ಲಿ, ರಾಮನಗರಕ್ಕೆ ವಾಯುವ್ಯ ದಿಕ್ಕಿನಲ್ಲಿ ಇರುವ ತಾಳವಾಡಿ ಬೆಟ್ಟದ ಚಾರಣ ಅದ್ಬುತ ಅನುಭವವನ್ನು ನೀಡಿತು. ಶಿಥಿಲಾವಸ್ಥೆ ತಲುಪಿದ ಕೋಟೆಯ ಪಳೆಯುಳಿಕೆ, 12 ಅಂಕಣದ ಕಲ್ಲಿನ ಮಂಟಪ, ಅಲ್ಲಲ್ಲೇ ಕಾಣಸಿಗುವ ನಿಸರ್ಗ ನಿರ್ಮಿತ ಹಾಗೂ ಮಾನವ ನಿರ್ಮಿತ ಗುಹೆಗಳು, ಗಾರೆ ಸೊಣೆ, ಆಂಜನೇಯನ ಉಬ್ಬು ಚಿತ್ರ, ಬಸವನ ಎರಡು ವಿಗ್ರಹಗಳು, ಮಣ್ಣಿನ ಗೋಡೆಯಲ್ಲಿ ಬಂದೂಕು ಇಟ್ಟುಕೊಂಡು ಕಾಯಲು ಇರುವ ಬಿಲದಾಕಾರದ ರಂಧ್ರಗಳು ಇಂದಿಗೂ ಉಳಿದಿರುವುದು ಆಶ್ಚರ್ಯಕರ ಸಂಗತಿ. ಬಿಳಿ ಕುತ್ತಿಗೆಯ ಹದ್ದುಗಳು, ಇನ್ನಿತರ ಅಪರೂಪದ ಪಕ್ಷಿಗಳ ಅಚ್ಚರಿಯ ಲೋಕವೇ ಇಲ್ಲಿದೆ.

ಬಂಡೆ ಮೇಲೇರಲು ಕಡಿದಾದ, ಕೊರಕಲು ಹಾದಿಯಲ್ಲಿ ಸಾಗಲು ಮಾನವ ನಿರ್ಮಿತ ಮೆಟ್ಟಿಲುಗಳ ಮಾದರಿ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಂಡೆವು. ಇದಲ್ಲದೆ, ಹೇರಳವಾಗಿ ಕಾಣಸಿಗುವ ಮಣ್ಣಿನ ಮಡಕೆ ಚೂರುಗಳು, ಚಪ್ಪಟೆ ಆಕಾರದ ವಿಶೇಷ ಸುಟ್ಟ ಇಟ್ಟಿಗೆಗಳಿಂದ ನಿರ್ಮಿತವಾದ ಗಾರೆ ಕೋಟೆಯನ್ನು ನೋಡುವುದೇ ಸೊಬಗು. ಅಲ್ಲಲ್ಲಿ ಕಾಣುವ ಒಳಕಲ್ಲುಗಳು ಹಾಗೂ ರಾಗಿ ಬೀಸುವ ಕಲ್ಲು ಇನ್ನಿತ್ಯಾದಿ ತರೆಹಾವರಿ ನೋಡದ್ದಾಯ್ತು. ಬೆಟ್ಟದ ತಪ್ಪಲಿನಲ್ಲಿ ಮೆಟ್ಟು ಪಾದ ಹಾಗೂ ಅರವಂಟಿಕೆ ಮಂಟಪ (ಜಗತಿ) ಇದೆ. ದುರ್ಗಮ ಹಾದಿಯುದ್ದಕ್ಕೂ ದೇವ ಕಣಿಗಿಲೆ ಮರಗಳ ತೋಪೇ ಇದೆ.
ಇನ್ನೊಂದು ಪ್ರಮುಖ ವಾದ ಏಳೆಮ್ಮೆ ಸೊಣೆಯ ಬಗ್ಗೆ ಹೀಗೊಂದು ಕಥೆಯಿದೆ.
ಈ ಸೊಣೆಯಲ್ಲಿ ಅಕ್ಕತಂಗಿಯರಿಬ್ಬರು ಸ್ನಾನ ಮಾಡುವ ಸಂದರ್ಭದಲ್ಲಿ, ಅವರಿಬ್ಬರ ಅಣ್ಣನು ತನ್ನ ಎಮ್ಮೆಗಳಿಗೆ ನೀರು ಕುಡಿಸಲು ಬರುತ್ತಾನೆ. ತಂಗಿಯರು ಸ್ನಾನ ಮಾಡುತ್ತಿದ್ದ ಸ್ಥಿತಿಯನ್ನು ಕಣ್ಣಾರೆ ಕಂಡುದ್ದಕ್ಕಾಗಿ ನೊಂದು (ಪ್ರಾಯಶ್ಚಿತಕ್ಕಾಗಿ) ಆತ್ಮಹತ್ಯೆ ಮಾಡಿಕೊಂಡನಂತೆ. ಆತನ ಏಳೆಮ್ಮೆಗಳು ಸತ್ತು ಹೋದವೆಂಬ ಕಥೆ ಈ ಭಾಗದ ಜನಪದರಲ್ಲಿ ಚಾಲ್ತಿಯಲ್ಲಿದೆ. ಆ ಕಾರಣಕ್ಕಾಗಿ ಈ ಸೊಣೆಗೆ ಏಳೆಮ್ಮೆ ಸೊಣೆ ಎಂಬ ನಿಷ್ಪತ್ತಿ ಉಳಿದಿದೆ.
ಅದೇನೆ ಇರಲಿ, ಶ್ರೀ ಮಾಗಡಿ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತೆಂಬ ನಂಬುಗೆಯಿರುವ ಈ ತಾಳವಾಡಿ ಬೆಟ್ಟ ಕೋಟೆ ಒಂದು ದಿನದ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳವಿದು. ರಾಮನಗರದ ಬಹುತೇಕ ಬೆಟ್ಟ, ಗುಡ್ಡ,ಕೆರೆ,ತೊರೆ,ರಸ್ತೆ, ಗ್ರಾಮಗಳನ್ನು ಎತ್ತರದಲ್ಲಿ ನಿಂತು ಕಣ್ತುಂಬಿಕೊಳ್ಳಬಹುದು. ಶ್ಯಾನುಭೋಗನಹಳ್ಳಿಯ ಶ್ರೀ ಕಾಂತರಾಜ್ ಪಟೇಲ್ ಒತ್ತಾಸೆಯಿಂದ, ಅವರ ಗೆಳೆಯರ ಬಳಗದ ಜೊತೆಗೆ, ಬೆಟ್ಡದ ಚಾರಣಕ್ಕೆ ಹೋಗಿದ್ದು ನಿಜಕ್ಕೂ ಅವಿಸ್ಮರಣೀಯ ದಿನ. ಹೃತ್ಪೂರ್ವಕ ಧನ್ಯವಾದಗಳು ನಲ್ಮೆಯ ಹಿರಿಯ ಮಿತ್ರರಾದ ಕಾಂತರಾಜ್ ಪಟೇಲ್ ಅವರಿಗೆ.

ಎಸ್. ರುದ್ರೇಶ್ವರ

ಚಿತ್ರ ಲೇಖನ : ಎಸ್. ರುದ್ರೇಶ್ವರ ಸಂಪಾದಕರು, “ಹಾಯ್ ರಾಮನಗರ” ಡಿಜಿಟಲ್ ನ್ಯೂಸ್

Leave a Reply

Your email address will not be published. Required fields are marked *