ಜಾನಪದ ಲೋಕದಲ್ಲಿ ರಾಜ್ಯ ಮಟ್ಟದ ಕನ್ನಡ ಗೀತೆಗಳ ರಚನಾ ಕಮ್ಮಟ ಹಾಗೂ ಜಾನಪದ ಸಂಭ್ರಮ : ಕಮ್ಮಟಗಳಲ್ಲಿ ಭಾಗವಹಿಸಿದ್ದರಿಂದ ನಾನು ನಿರ್ದೇಶಕನಾಗಿ, ಕಲಾವಿದನಾಗಿ ರೂಪುಗೊಂಡಿದ್ದೇನೆ : ಟಿ.ಎಸ್ ನಾಗಾಭರಣ

ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ನಡೆದ ರಾಜ್ಯ ಮಟ್ಟದ ಕನ್ನಡ ಗೀತೆಗಳ ರಚನಾ ಕಮ್ಮಟ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ಕನ್ನಡ ಸಂಗೀತ ಕ್ಷೇತ್ರದಲ್ಲಿ ಸಾಹಿತ್ಯದ ಗಟ್ಟಿತನವಿಲ್ಲದೆ ಸಂಗೀತವಿಲ್ಲ ಎಂದು ಅಭಿಪ್ರಾಯಪಟ್ಟರು.
ನಾನೂ ಕೂಡಇಂತಹ ಕಮ್ಮಟಗಳಲ್ಲಿ ಭಾಗವಹಿಸಿದ್ದರಿಂದ ಇಂದು ಒಬ್ಬ ನಿರ್ದೇಶಕನಾಗಿ, ಕಲಾವಿದನಾಗಿ ನಿರ್ಮಾಣಗೊಂಡಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ವೈ.ಕೆ ಮುದ್ದುಕೃಷ್ಣಅವರು ಇಂತಹ ಕಮ್ಮಟಗಳಿಂದ ಕವಿಗಳಿಗೆ, ಗಾಯಕರಿಗೆ ಮತ್ತು ಸಂಗೀತ ಸಂಯೋಜಕರಿಗೆ ಬಹಳ ಪ್ರಯೋಜನಗಳಾಗುತ್ತವೆ. ಕಾವ್ಯದಲ್ಲಿ ಚಿತ್ರ, ಪ್ರತಿಮೆ, ಭಾವ ಮುಂತಾದ ಅಂಶಗಳು ಅಡಕವಾಗಿರುತ್ತದೆ. ಹಾಗಾಗಿ ಕಾವ್ಯರಚನೆಗೂ ಮುನ್ನಕನ್ನಡ ವರ್ಣಮಾಲೆಯ ವ್ಯಾಕರಣದ ಅನುಭವ ಪಡೆಯುವುದು ಬಹಳ ಮುಖ್ಯ ಎಂದರು.
ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ತು, ಸಹಯೋಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಕಾರದಲ್ಲಿ ಆಯೋಜಿಸಲಾಗಿರುವ ಎರಡು ದಿನದ ಕಮ್ಮಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅರವತ್ತು ಯುವ ಕವಿಗಳು ಮತ್ತು ಕವಯತ್ರಿಯರು ಭಾಗವಹಿಸಿದ್ದಾರೆ.
ಈ ಶಿಬಿರದಲ್ಲಿ ಕವನ ರಚಿಸಲು ಬೇಕಾಗುವ ಪದಬಳಕೆ, ವ್ಯಾಕರಣ, ಛಂದಸ್ಸು, ಪ್ರಾಸ, ಅರ್ಥಾಲಂಕಾರ ಮುಂತಾದ ಅಂಶಗಳ ಬಗ್ಗೆ ನುರಿತ ಸಾಹಿತಿ, ವಿದ್ವಾಂಸರಿಂದ ಮಾಹಿತಿಯನ್ನು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಜೋಗಿಲ ಸಿದ್ದರಾಜು, ಜಾನಪದ ಲೋಕದ ಕ್ಯೂರೇಟರ್ ಡಾ.ಯು.ಎಂ. ರವಿ, ರಂಗಸಹಾಯಕರಾದ ಪ್ರದೀಪ್.ಎಸ್ ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಮೃತ್ಯುಂಜಯದೊಡ್ಡವಾಡ ಸ್ವಾಗತಿಸಿದರು. ಹಂಸಜ್ಯೋತಿ ಮುರಳಿ ನಿರೂಪಿಸಿದರು.

Leave a Reply

Your email address will not be published. Required fields are marked *