ಬಿ.ಕೆ. ಸುರೇಶ್ ಬಾಬು ಅವರ ಲೇಖನ : ಜೀವ ಜಲ ನೀರಿನ ಸಂರಕ್ಷಣೆ ನಮ್ಮೆಲರ ಹೊಣೆ

ವಿಶ್ವಸಂಸ್ಥೆಯು ಮಾರ್ಚ್ 22 ಅನ್ನು ವಿಶ್ವ ಜಲ ದಿನವನ್ನಾಗಿ ಆಚರಿಸುತ್ತಿದ್ದು ನೀರಿನ ಮಹತ್ವ ಹಾಗೂ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಹಗಲಿರುಳು ಪ್ರಯತ್ನಿಸುತ್ತಿದೆ. ಕುಗ್ಗುತ್ತಿರುವ ನೀರಿನ ಪ್ರಮಾಣ ಹಾಗೂ ಮಿತಿ ಮೀರಿದ ನೀರಿನ ಬಳಕೆ ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿವರ್ಷ ಮಾರ್ಚ್ 22 ಅನ್ನು ವಿಶ್ವ ಜಲ ದಿನ ವನ್ನಾಗಿ ಆಚರಿಸುತ್ತಿದೆ.
21ನೇ ಶತಮಾನದ ಮಧ್ಯಭಾಗದಲ್ಲಿ ಪ್ರಪಂಚದಲ್ಲಿ ಮಾನವನಿಗೆ ಅತಿ ಮುಖ್ಯವಾಗಿ ಬೇಕಾದ ನೀರಿಗೆ ಅತಿಹೆಚ್ಚು ಬೇಡಿಕೆ ಉಂಟಾಗುತ್ತಿದೆ. ವಿಶ್ವವು 2050ರ ವೇಳೆಗೆ 1000 ಕೋಟಿ ಜನಸಂಖ್ಯೆಯ ಭಾರವನ್ನು ಹೊರಲು ಸಜ್ಜಾಗುತ್ತಿದೆ. ಈ ಜನಸಂಖ್ಯೆಗೆ ಶುದ್ಧ ನೀರು ಪೂರೈಸುವುದು ತುಂಬಾ ಕಷ್ಟಕರವಾಗಲಿದೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ದ ನಡೆದರೆ ಅದರಲ್ಲಿ ನೀರಿನ ಸಮಸ್ಯೆಯೂ ಕೂಡ ಕಾರಣವಾಗುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
300ವರ್ಷಗಳಿಂದೀಚೆಗೆ ನೀರಿನ ಬಳಕೆಯ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದ ನೀರಿನ ಬಳಕೆಯ ಪ್ರಮಾಣ ಶೇಕಡ 35% ರಷ್ಟು ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕವಾಗಿ ಸುಮಾರು 650 ಕ್ಯುಬಿಕ್ ಕಿಲೋಮೀಟರ್ ನೀರಿನ ಅವಶ್ಯಕತೆಯಿದ್ದು, ಶೇಕಡ 60%ರಷ್ಟು ಕೃಷಿಗೆ, ಶೇಕಡ 30%ರಷ್ಟು ಕೈಗಾರಿಕೆಗಳ ಬೆಳವಣಿಗೆಗೆ ಹಾಗೂ ಶೇಕಡ 10%ರಷ್ಟು ಇತರೆ ಉಪಯೋಗಕ್ಕೆ ಲಭ್ಯವಿದ್ದು, ಇದರಲ್ಲಿ ಶೇಕಡಾ 1%ರಷ್ಟು ಮಾತ್ರ ಕುಡಿಯಲು ಉಪಯೋಗಕ್ಕೆ ಇದೆ ಎಂಬ ವಾಸ್ತವ ಸತ್ಯ ವೈಜ್ಞಾನಿಕವಾಗಿ ದೃಢಪಟ್ಟಿದೆ. ಭೂಮಿಯ ಮೇಲೆ ಲಭ್ಯವಿರುವ ಶೇಕಡ 99ರಷ್ಟು ನೀರು ಮಾನವನಿಗೆ ಸಾಧ್ಯವಿಲ್ಲವಾಗಿದೆ ಎಂಬುದು ವಿಷಾದನೀಯ.
ಮನುಷ್ಯನ ಅತ್ಯಾವಶ್ಯಕ ಬೇಡಿಕೆಗಳಲ್ಲಿ ಶುದ್ಧ ನೀರು ಪ್ರಮುಖವಾಗಿದ್ದು, ಮಾನವ ತನ್ನ ದಿನ ನಿತ್ಯದ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ನೀರನ್ನು ಉಪಯೋಗಿಸುತ್ತಿದ್ದಾನೆ. ನೀರು ಮಾನವನ ಪ್ರತಿದಿನದ ನಿತ್ಯ ಕರ್ಮಗಳಿಗೆ ಬೇಕೇ-ಬೇಕಾಗಿದೆ. ಮಾನವ ಕುಲದ ಅಸ್ತಿತ್ವಕ್ಕೆ ಹಾಗೂ ಪುನಶ್ಚೇತನಕ್ಕೆ ನೀರು ಜೀವನಾಧಾರದ ಅಮೃತ ವಾಗಿದ್ದು, ನೀರನ್ನು ‘ಜೀವಜಲ’ ಎಂದೇ ಪರಿಭಾವಿಸಲಾಗಿದೆ. ಮನುಷ್ಯನಿಗೆ ಗಾಳಿ ಹೇಗೆ ಮುಖ್ಯವೋ ಕುಡಿಯುವ ನೀರು ಕೂಡ ಅತಿ ಅಮೂಲ್ಯ.
ನೀರಿನ ಪ್ರಾಮುಖ್ಯತೆ
ಮನುಷ್ಯನ ಮೆದುಳು, ಸ್ವಾಶಕೋಶ, ರಕ್ತ, ಸ್ನಾಯುಗಳಲ್ಲಿ ನೀರಿನ ಅಂಶ ಇದ್ದು ದೇಹದ ಉಷ್ಣತೆಯನ್ನು ಸ್ಥಿರ ಪ್ರಮಾಣದಲ್ಲಿ ಇಡಲು ಪ್ರತಿನಿತ್ಯ ಜೀವಕೋಶಗಳು ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಪಡೆದು ಲವಲವಿಕೆಯನ್ನು ಉಳಿಸಿಕೊಳ್ಳುತ್ತದೆ. ಜೀವಕೋಶಗಳಿಗೆ ಅಗತ್ಯವಾಗಿ ಬೇಕಾದ ಆಮ್ಲಜನಕ ನೀರಿನ ಮೂಲಕವೇ ಪೂರೈಕೆಯಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹೊರಹಾಕಲು ನೀರು ಬೇಕೇ ಬೇಕು. ನೀರಿನ ಅಂಶ ದೇಹದಲ್ಲಿ ಕಡಿಮೆಯಿದ್ದರೆ ಡಿಹೈಡ್ರೇಶನ್(ನಿರ್ಜಲೀಕರಣ), ಬಾಯಾರಿಕೆ, ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗುವುದಲ್ಲದೆ ಕೆಟ್ಟ ವಾಸನೆ ಬರುತ್ತದೆ. ಮೂತ್ರವು ಹಳದಿ ಬಣ್ಣಕ್ಕೆ ತಿರುಗಲು ಎನ್ ಬಿ ಪ್ಲೇಬಿನ್, ಎಬಿ, ವಿಟಮಿನ್ ಕಾರಣ. ಪ್ರತಿದಿನ ಕುಡಿಯುವ ನೀರು ಕೊನೆಯಲ್ಲಿ ಮೂತ್ರದ ರೂಪದಲ್ಲಿ, ಉಸಿರಾಟ, ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ. ಮನುಷ್ಯ ಚುರುಕಾಗಿ ಕೆಲಸ ಮಾಡುತ್ತಿರಬೇಕಾದರೆ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯಲೇ ಬೇಕು.
ನೀರಿನ ಪರಿಶುದ್ಧತೆ:
 ನೀರು ಕುಡಿಯುವ ಪ್ರತಿಯೊಬ್ಬರೂ ನೀರಿನ ಪರಿಶುದ್ಧತೆ ಬಗ್ಗೆ ಜಾಗ್ರತೆಯಿಂದ ಗಮನಹರಿಸಬೇಕು.
 ಕಲುಷಿತ ನೀರು ಕುಡಿಯುವುದರಿಂದ ಮನುಷ್ಯ ಸಾಮಾನ್ಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ.
 ಶುದ್ದ ಕುಡಿಯುವ ನೀರಿನಿಂದ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗುತ್ತದೆ
 ಕಲುಷಿತ ನೀರು ಸೇವನೆಯಿಂದ ಸೇವನೆಯಿಂದ ಕಾಲರಾ ವೈರಾಣು ಸೇರಿದಂತೆ ಅನೇಕ ವೈರಾಣುಗಳು ಶರೀರದೊಳಗೆ ಸೇರಿದರೆ ಅನಾರೋಗ್ಯ ಉಂಟಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ
 ಆರ್ಸೆನಿಕ್ ಅಂಶ ಹೆಚ್ಚಾಗಿರುವ ನೀರು ಕುಡಿಯುವುದರಿಂದ ತಕ್ಷಣ ಯಾವುದೇ ಪರಿಣಾಮ ಕಂಡು ಬರದಿರಬಹುದು ಆದರೆ ದೀರ್ಘಕಾಲದ ಪರಿಣಾಮ ಉಂಟಾಗಿ ಅದು ಸಾವಿನಲ್ಲಿ ಮುಕ್ತವಾಗಬಹುದು ಸ್ವಲ್ಪ ಮುಂಜಾಗ್ರತೆ ವಹಿಸಿದರೆ ಸಾವನ್ನು ತಪ್ಪಿಸಬಹುದು
ಎಷ್ಟರಮಟ್ಟಿಗೆ ಅವಶ್ಯ:
ಮನುಷ್ಯನ ದೇಹ ಶೇಕಡ 60 ರಷ್ಟು ನೀರನ್ನು ಹೊಂದಿದೆ. ಮನುಷ್ಯನ ತೂಕದ ಪ್ರಕಾರ ಪ್ರತಿ ಕಿಲೋ ತೂಕಕ್ಕೆ ಅಂದಾಜು 30ml ನೀರಿನ ಅವಶ್ಯಕತೆ ಇದೆ. ಅಂದಾಜು 50 ಕಿಲೋ ತೂಕದ ವ್ಯಕ್ತಿ ಅಂದಾಜು ಒಂದೂವರೆ ಇಂದ ಎರಡು ಲೀಟರ್ ನೀರನ್ನು ಪ್ರತಿನಿತ್ಯ ಕುಡಿಯಲೇಬೇಕು. ಹಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ.
ರಾಷ್ಟ್ರೀಯ ಜಲಜೀವನ್ ಮಿಷನ್:
ಕೇಂದ್ರ ಸರ್ಕಾರವು 2019ರ ಆಗಸ್ಟ್ 15ರಂದು ರಾಷ್ಟ್ರೀಯ ಜಲಜೀವನ್ ಮಿಷನ್ ಅನ್ನು ಪ್ರಾರಂಭಿಸಿದ್ದು 2024 ರ ವೇಳೆಗೆ ಗ್ರಾಮೀಣ ಭಾರತದ ಎಲ್ಲ ಮನೆಗಳಿಗೆ ನಲ್ಲಿಯ ಮುಖಾಂತರ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರಗಳು ಕೇಂದ್ರದ ಸಹಯೋಗದೊಂದಿಗೆ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಾವಿರಾರು ಕೋಟಿ ರೂಪಾಯಿಗಳ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು ನಮ್ಮ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದ್ದು ಪ್ರತಿಯೊಂದು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ‘ಮನೆಮನೆಗೆ ಗಂಗೆ’ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ.
ನೀರು ಇಂದು ಆರೋಗ್ಯ, ಸಾಕ್ಷರತೆ, ಉದ್ಯೋಗ ಹೀಗೆ ಬದುಕಿನ ಎಲ್ಲ ಆಯಾಮಗಳಿಗೂ ತಳುಕು ಹಾಕಿಕೊಂಡಿದೆ. ಬಡತನ, ಅನಾರೋಗ್ಯ ಸಮಸ್ಯೆಗಳಿಗೆ ನೀರು ಮುಖ್ಯ ಕಾರಣವಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಕಾಂಕ್ರೀಟ್‌ ಕಾಡುಗಳನ್ನು ಕಟ್ಟುತ್ತಾ ಹಳ್ಳಿಗಳನ್ನು, ಕೆರೆಕಟ್ಟೆಗಳನ್ನು ನುಂಗಿದ ನಾವು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡುತ್ತಿದ್ದೇವೆ.
ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಶುದ್ಧ ಕುಡಿಯುವ ನೀರು ಪ್ರಜೆಗಳ ಮೂಲಭೂತ ಹಕ್ಕು! ಸರಕಾರದ ಈ ಕಾರ್ಯಕ್ರಮಗಳ ಯಶಸ್ಸು ಜನರ ಸಹಭಾಗಿತ್ವ ಹಾಗೂ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಅವಲಂಬಿಸಿದೆ.

ಸುರೇಶ ಬಾಬು ಬಿ ಕೆ

ಲೇಖನ : ಸುರೇಶ ಬಾಬು ಬಿ ಕೆ
SBCC ಸಂಯೋಜಕರು
ಜಿಲ್ಲಾ ಪಂಚಾಯತ್
ರಾಮನಗರ
. ಮೊ : 94801 21025

Leave a Reply

Your email address will not be published. Required fields are marked *