ಲೇಔಟ್ ಬಗ್ಗೆ ತಿಳಿದುಕೊಳ್ಳದೆ ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಂಚೇಗೌಡ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ : ಉಮೇಶ್
ರಾಮನಗರ : ತಾಲೂಕಿನ ಕಸಬಾ ಹೋಬಳಿ ಜಿಗೇನಹಳ್ಳಿ ಸರ್ವೆ ನಂ. 107/3ರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಲೇಔಟ್ ಆಧಿಕೃತವಾಗಿದ್ದು, ಯಾವುದೇ ಒತ್ತುವರಿ ನಡೆದಿಲ್ಲ, ಲೇಔಟ್ ಬಗ್ಗೆ ಮಾಹಿತಿಯಿಲ್ಲದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಂಚೇಗೌಡ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಸ್ಪಷ್ಟಪಡಿಸಿದರು.
ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 2008ರಲ್ಲಿ ಮಹಮದ್ ಷರೀಪ್ ಎಂಬುವವರಿಂದ 1 ಎಕರೆ 05 ಗುಂಟೆ ಜಮೀನು ಖರೀದಿ ಮಾಡಿದ್ದು, 2012ರಲ್ಲಿ 0-21 ಗುಂಟೆ ಜಮೀನನ್ನು ರಾಮನಗರ-ಚನ್ನಪಟ್ಟಣ ಪ್ರಾಧಿಕಾರಕ್ಕೆ ಮಾರಾಟ ಮಾಡಿರುತ್ತೇನೆ. ಉಳಿದ 0-24 ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳಿಂದ ವಾಸದ ಉದ್ದೇಶಕ್ಕಾಗಿ (ವ್ಯವಸಾಯೇತರ) ಭೂ ಪರಿವರ್ತನೆ ಮಾಡಿಸಿ ಕಾನೂನು ಬದ್ದವಾಗಿ ನಿವೇಶನಗಳನ್ನು ಮಾಡಲಾಗಿದೆ. ಆದರೆ ಜವ್ಬಾದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷೆ ಆಶಾ ಮಂಚೇಗೌಡ ಸರ್ಕಾರಿ ಹಳ್ಳ ಒತ್ತುವರಿ ಮಾಡಿದ್ದಾರೆ ಎಂದು ಇಲ್ಲಸಲ್ಲದ ಆಧಾರ ರಹಿತ ಆರೋಪ ಮಾಡುವ ಜೊತೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದು ನನಗೆ ನೋವು ತರಿಸಿದೆ ಎಂದರು.
ಜವಾಬ್ದಾರಿ ಸ್ಥಾನದಲ್ಲಿರುವ ಆಶಾಮಂಚೇಗೌಡ ಆರೋಪ ಮಾಡುವ ಮುನ್ನಾ ಮಾಹಿತಿ ಪಡೆದುಕೊಳ್ಳುವುದು ಸೂಕ್ತವಾಗಿದೆ. 106 ಮತ್ತು 107ರ ನಡುವೆ ಇರುವ ಸರ್ಕಾರಿ ಹಳ್ಳವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುವುದನ್ನು ಪ್ರಶ್ನಿಸಿ ನಾನೇ ಡಿಸೆಂಬರ್ 2019ರಲ್ಲಿಯೆ ತಹಸೀಲ್ದಾರ್, ಇಓ, ಪಿಡಿಓ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆಶಾಮಂಚೇಗೌಡ ಅವರಿಗೆ ಸರ್ಕಾರಿ ಹಳ್ಳ ರಕ್ಷಣೆ ಮಾಡುವ ಬದ್ದತೆಯಿದ್ದರೆ ಅವರು ನಾನು ನೀಡಿರುವ ದೂರಿನಂತೆ ಒತ್ತವರಿ ಮಾಡಿರವವರ ವಿರುದ್ದ ಧ್ವನಿ ಎತ್ತಲಿ ನೋಡೋಣ ಎಂದು ಸವಾಲು ಹಾಕಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ರವಿ ಮಾತನಾಡಿ ಅಧ್ಯಕ್ಷ ಪದವಿಯನ್ನು ಮುಂದಿಟ್ಟುಕೊಂಡು ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ಅಕ್ರಮಗಳನ್ನು ಎಸಗಿರುವ ಪಂಚಾಯ್ತಿ ಅಧ್ಯಕ್ಷೆ ಆಶಾ ಮತ್ತು ಅವರ ಪತಿ ಮಂಚೇಗೌಡ ತಾವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಆರೋಪ ಮಾಡಿ ನುಣುಚಿಕೊಳ್ಳಲು ಯತ್ನಿಸಿಸುತ್ತಿದ್ದಾರೆ. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದೆ. ಮಂಚೇಗೌಡನ ಹಸ್ತಕ್ಷೇಪದಿಂದಾಗಿ ಅಧಿಕಾರಿಗಳು ಸಹ ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಆಗುತ್ತಿಲ್ಲ ಎಂದು ದೂರಿದರು.
ಹಾಲಿ ಅಧ್ಯಕ್ಷೆ ಆಶಾ ಕೇವಲ ನೆಪ ಮಾತ್ರದ ಅಧ್ಯಕ್ಷೆ, ಮಂಚೇಗೌಡ ಪತ್ನಿಯ ಅದಿಕಾರವನ್ನು ತಾನೇ ಚಲಾಯಿಸುವ ಜೊತೆಗೆ ಅನವಶ್ಯಕವಾಗಿ ಅಧ್ಯಕ್ಷ ಸ್ಥಾನವನ್ನು ವಯುಕ್ತಿಕ ಲಾಭದ ಕೆಲಸಗಳಿಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪತಿ ಮಂಚೇಗೌಡ ಗ್ರಾಮ ಪಂಚಾಯಿತಿಯಲ್ಲಿ ಅದ್ಯಕ್ಷರ ಕುರ್ಚಿಯಲ್ಲಿ ಕುಳಿತು ಕಾರ್ಯ ನಿರ್ವಹಣೆ ಮಾಡಿ ಪತ್ನಿಯ ಅಧಿಕಾರ ಕಸಿಯುವದಲ್ಲದೆ, ಜನಪ್ರತಿನಿಧಿಗೆ ಅವಮಾನ ಮಾಡಿ, ದಬ್ಬಾಳಿಕೆ ಹಾಗೂ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಹರೀಸಂದ್ರ ಗ್ರಾಮ ಪಂಚಾಯಿತಿ ಸದಸ್ಯರುಗಳು ರಾಜ್ಯ ಮಹಿಳಾ ಆಯೋಗ ಮತ್ತು ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು, ತನಿಖೆ ಸಹ ನಡೆದಿದ್ದು, ತನಿಖಾ ವರದಿಯನ್ನು ಇದುವರೆಗೆ ಜಿಪಂಗೆ ಸಲ್ಲಿಸದಿರುವುದಕ್ಕೆ ಇಓ ಅವರಿಗೆ ಜಿಲ್ಲಾ ಪಂಚಾಯಿತಿ ಸಿಇಓ ಅಂತಿಮ ನೆನಪೋಲೆಯನ್ನು ನೀಡಿದ್ದಾರೆ ಎಂದು ದೂರಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಅವರ ಪತಿ ಮಂಚೇಗೌಡ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಜಿಗೇನಹಳ್ಳಿ ಸರ್ವೆ ನಂ 107/2 ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ. ಅಷ್ಟೆ ಅಲ್ಲದೆ 2016ರಲ್ಲಿ ಸ್ವತ್ತಿಗೆ ಮೂಲ ದಾಖಲಾತಿಗಳಿಲ್ಲದಿದ್ದರೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಗ್ರಾಮ ಪಂಚಾಯಿತಿಯಲ್ಲಿ ಈಗಿನ ಪಂಚಾಯಿತಿ ಅಧ್ಯಕ್ಷೆ ಆಶಾ ಪತಿಯಾದ ಮಂಚಯ್ಯ ಹೆಸರಿನಲ್ಲಿ ಇ-ಸ್ವತ್ತು ಮಾಡಿಸಿ ಕೊಂಡಿದ್ದಾರೆ. ಸದರಿ ಸ್ವತ್ತು ಸರ್ಕಾರಿ ಸ್ವತ್ತಾಗಿರುವದರಿಂದ ಅಕ್ರಮವಾಗಿ ಮಾಡಿಕೊಂಡಿರುವ ಖಾತಾವನ್ನು ವಜಾಗೊಳಿಸುವಂತೆ ಗ್ರಾಮಸ್ಥ ಸಿದ್ದರಾಜು ಎಂಬುವರು ಜನವರಿ 5, 2022ರಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ, ತಾಪಂ ಇಓ ಹಾಗೂ ಪಿಡಿಓಗೆ ಮನವಿ ಸಹ ಮಾಡಿದ್ದಾರೆ. ಆದರೆ ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆಂಪೇಗೌಡನದೊಡ್ಡಿ ಗ್ರಾಮದ ಸಿದ್ದರಾಜು, ಹನುಮಂತು, ಕರಿಯಪ್ಪ ಮತ್ತಿತ್ತರರು ಇದ್ದರು.