75ನೇ ವರ್ಷಕ್ಕೆ ಕಾಲಿಡುತ್ತಿರುವ ಬಡವರ ವೈದ್ಯ, ಸಮಾಜ ಸೇವಕ ಡಾ.ಕೆ.ಪಿ. ಹೆಗ್ಡೆ ಅವರಿಗೆ ಶುಭಾಶಯ ಹೇಳೋಣ

ವೈದ್ಯ ವೃತ್ತಿಯ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಪರೂಪದ ವ್ಯಕ್ತಿಗಳಲ್ಲಿ ರಾಮನಗರದ ಡಾ.ಕೆ.ಪಿ. ಹೆಗ್ಡೆ (23-03-1948 : 23-03-2022) ಒಬ್ಬರು.

ಇವರು ಸರ್ಕಾರದ ಸೈಪಂಡರಿ ಸ್ಕೀಂ ನಲ್ಲಿ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದರು. ಆದರೆ ಬಡವರ ಮೇಲಿನ ಕಾಳಜಿಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ 1973ರಲ್ಲಿ ‘ಪ್ರಗತಿ ಚಿಕಿತ್ಸಾಲಯ’ ಸ್ಥಾಪಿಸಿದರು. ಚಿಕಿತ್ಸಾಲಯಕ್ಕೆ ಬರುವ ರೋಗಿಗಳ ಹತ್ತಿರ ಹಣ ಇರಲಿ, ಇಲ್ಲದಿರಲಿ ಇವರು ಚಿಕಿತ್ಸೆ ನೀಡುತ್ತಿದ್ದಾರೆ. ಜತಗೆ ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಣ ಕೊಡುವ ರೋಗಿಗಳಿಗೆ ಒಬ್ಬರಿಗೆ 20 ರೂ. ನಿಗದಿ ಪಡಿಸಿದ್ದಾರೆ. ತಮ್ಮ ಸೇವಾ ಮನೋಭಾವನೆಯಿಂದ ಇವರು ‘ಬಡವರ ಡಾಕ್ಟರ್‌’ ಎಂದೇ ಗುರುತಿಸಲ್ಪಟ್ಟಿದ್ದಾರೆ.

ಸೆಂಟ್ ಜಾನ್ ಆಂಬ್ಯುಲೆನ್ಸ್ ಕಾರ್ಯದರ್ಶಿಯಾಗಿ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಾಮನಗರದಲ್ಲಿ ಮೊದಲ ಬಾರಿಗೆ ಪ್ರಥಮ ಚಿಕಿತ್ಸೆಯ ಹೆದ್ದಾರಿ ಘಟಕವನ್ನು ಪ್ರಾರಂಭಿಸಿ 2001 ರಿಂದ 2010ರ ವರೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಿದ್ದಾರೆ.

ಇದನ್ನೂ ಓದಿ :

ಮಾರ್ಚ್ 23ರಂದು ಸಮಾಜ ಸೇವಕ, ಬಡವರ ವೈದ್ಯ ಡಾ.ಕೆ.ಪಿ. ಹೆಗ್ಡೆ ಅವರ ಜನುಮ ದಿನದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಸನ್ಮಾನ – ಹಾಯ್ ರಾಮನಗರ

https://go.shr.lc/3NewNym

ಅಲೆಮಾರಿದೊಡ್ಡಿ, ದೇವರದೊಡ್ಡಿ, ಕೊಂಕಾಣಿದೊಡ್ಡಿ, ಶಾನುಬೋಗನಹಳ್ಳಿ,ರಂಗರಾಯರದೊಡ್ಡಿ, ಪೌರಕಾರ್ಮಿಕರ ಕಾಲೋನಿ, ಅರ್ಕೇಶ್ವರ ಕಾಲೋನಿ, ವಡೇರಹಳ್ಳಿಯ ಹಾಗೂ ರಾಮದೇವರ ಬೆಟ್ಟದ ಬಳಿ ಇರುವ ಇರುಗಳಿಗರ ಕಾಲೋನಿಯನ್ನು ದತ್ತು ತೆಗೆದುಕೊಂಡಿದ್ದಾರೆ.

ಇರುಳಿಗರ ಕಾಲೋನಿಗಳಿಗೆ 17 ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯದ ಮಹತ್ವವನ್ನು ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಿದ್ದಾರೆ.

ವೈದ್ಯ ವೃತ್ತಿ ಇತರೆ ವೃತ್ತಿಗಳಿಗಿಂತ ಮಹತ್ವವಾದುದು. ಇವತ್ತು ವೈದ್ಯ ವೃತ್ತಿ ವ್ಯಾಪರೀಕರಣಕ್ಕೆ ಒಳಗಾಗಿದೆ. ಸೇವಾ ಮನೋಭಾವನೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲೂ ಸೇವೆಯನ್ನೇ ಪ್ರಮುಖ ಆಶಯವನ್ನಾಗಿ ಇಟ್ಟು ಕೊಂಡು ದುಡಿಯುತ್ತಿರುವವರಲ್ಲಿ ಡಾ.ಕೆ.ಪಿ. ಹೆಗ್ಡೆ ಪ್ರಮುಖರು. ಹೆಗ್ಡೆ ಅವರು ವೈದ್ಯ ವೃತ್ತಿಯನ್ನು ಎಂದೂ ಕೂಡ ಹಣ ಗಳಿಕೆಗೆ ಬಳಸಿಕೊಂಡವರಲ್ಲ. ಈಗ ಖಾಸಗಿ ಆಸ್ಪತ್ರೆಗಳು ಹೆಚ್ಚಾಗುತ್ತಿವೆ. ಆದರೂ ಇವರ ಕೈ ಗುಣ ಹಾಗೂ ದುಬಾರಿ ಹಣಕ್ಕೆ ಆಸೆ ಬೀಳದ ಕಾರಣ ಜನಸಾಮಾನ್ಯರು ಇವರನ್ನು ಹೆಚ್ಚು ಇಷ್ಟಪಡುತ್ತಾರೆ.

ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇವರು, ಕನ್ನಡ ಸಾಹಿತ್ಯ ಪರಿಷತ್‌, ರೋಟರಿ ಕ್ಲಬ್‌, ಸೆಂಟ್ ಜಾನ್‌ ಆಂಬ್ಯುಲೆನ್ಸ್, ಕನ್ನಡ ಸಂಘರ್ಷ ಸಮಿತಿ, ಚುಟುಕು ಸಾಹಿತ್ಯ ಪರಿಷತ್‌, ಭಾರತ್‌ ಸೇವಾದಳ, ಭಾರತ್‌ ಸ್ಕೌಟ್ಸ್ ಅಂಡ್‌ ಗೈಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಎನ್ನುವುದು ಇಂದು ಉದ್ಯಮವಾಗಿದೆ. ಹೆಗ್ಡೆ ಅವರು ಕನ್ನಡ ಮಾಧ್ಯಮದಲ್ಲಿ ಪ್ರಗತಿ ಶಾಲೆ ಪ್ರಾರಂಭಿಸಿ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವದು ಶ್ಲಾಘನೀಯ.

ಡಾ.ಕೆ.ಪಿ. ಹೆಗ್ಡೆ ಅವರೊಂದಿಗೆ ಲೇಖಕ ಎಸ್. ರುದ್ರೇಶ್ವರ

ಲೇಖನ : ಎಸ್. ರುದ್ರೇಶ್ವರ ಸಂಪಾದಕರು “ಹಾಯ್‌ ರಾಮನಗರ” ಡಿಜಿಟಲ್ ನ್ಯೂಸ್.

Leave a Reply

Your email address will not be published. Required fields are marked *