36 ನಿವೇಶನಗಳ ಇ–ಖಾತೆ ರದ್ದು ಮಾಡಲು ಹರೀಸಂದ್ರ ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ
ರಾಮನಗರ: ಜಿಗೇನಹಳ್ಳಿ ಸರ್ವೆ ಸಂಖ್ಯೆ 92ರಲ್ಲಿ ಅಕ್ರಮವಾಗಿ ಮಾಡಿಕೊಡಲಾದ 38 ನಿವೇಶನಗಳ ಇ–ಖಾತೆಗಳ ಪೈಕಿ 36 ನಿವೇಶನಗಳ ಖಾತೆಯನ್ನು ರದ್ದು ಮಾಡಲು ಮಂಗಳವಾರ ನಡೆದ ಹರೀಸಂದ್ರ ಗ್ರಾಮ ಪಂಚಾಯಿತಿ ಸಭೆಯು ನಿರ್ಣಯ ಅಂಗೀಕರಿಸಿತು.
38 ಖಾತೆಗಳ ಪೈಕಿ ನಿವೇಶನ ಸಂಖ್ಯೆ 130ರ ಮಾಲೀಕರಾದ ಕಮಲಮ್ಮ ವೆಂಕಟೇಶ್ ಹಾಗೂ 131ರ ಮಾಲೀಕರಾದ ಮಹದೇವಮ್ಮ ಸಿದ್ದಪ್ಪಾಜಿ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಆ ಎರಡು ಖಾತೆಗಳ ವಿಚಾರದಲ್ಲಿ ನ್ಯಾಯಾಲಯದ ಮುಂದಿನ ಆದೇಶದಂತೆ ನಡೆಯಲು ತೀರ್ಮಾನಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಆಶಾ ಮಂಚೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾದ ಈ ನಿರ್ಣಯಕ್ಕೆ ಜೆಡಿಎಸ್ ಬೆಂಬಲಿತ ಎಂಟು ಸದಸ್ಯರು ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೊರ ನಡೆದರು. ಒಟ್ಟು 16 ಸದಸ್ಯರ ಪೈಕಿ 15 ಮಂದಿ ಹಾಜರಿದ್ದು, ಉಪಾಧ್ಯಕ್ಷೆ ಜಯಲಕ್ಷ್ಮಿ ಗೈರಾಗಿದ್ದರು. ಪ್ರಭಾರ ಪಿಡಿಒ ರಂಜಿತ್, ದ್ವಿತೀಯ ದರ್ಜೆ ಸಹಾಯಕ ದೀಪು ಇದ್ದರು.