ಚನ್ನಪಟ್ಟಣ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ : ಬಿಇಒ ಬಿ.ಎನ್. ಮರೀಗೌಡ
ಚನ್ನಪಟ್ಟಣ : 2022 ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇದೇ ತಿಂಗಳ 28 ರಿಂದ ಏಪ್ರಿಲ್ 11 ನೇ ತಾರೀಕಿನವರೆಗೆ ನಡೆಯಲಿದ್ದು,ಸದರಿ ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎನ್. ಮರೀಗೌಡ ತಿಳಿಸಿದ್ದಾರೆ .
ಪಟ್ಟಣ ಪ್ರದೇಶದಲ್ಲಿ 05, ಗ್ರಾಮಾಂತರ ಪ್ರದೇಶದಲ್ಲಿ 09 ಪರೀಕ್ಷಾ ಕೇಂದ್ರಗಳು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 2821 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರೀಕ್ಷೆ ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಗಾಗಲೇ ಈ ಸಂಬಂಧ ಸಭೆ ಕೂಡ ನಡೆಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬರಂತೆ ಮುಖ್ಯಅಧೀಕ್ಷಕರು ,ಸ್ಥಾನಿಕ ಜಾಗೃತ ದಳ ಅಧಿಕಾರಿ ಮತ್ತು ಪ್ರಶ್ನಾಪತ್ರಿಕೆ ಅಭಿರಕ್ಷಣೆಗಾಗಿ ಕಸ್ಟೋಡಿಯನ್ ನೇಮಕ ಮಾಡಲಾಗಿದೆ.ಮೊಬೈಲ್ ಫೋನ್ ಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗದಂತೆ ಎಚ್ಚರ ವಹಿಸಲು ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಿಸಲಾಗಿದೆ .ಅನ್ಯ ಇಲಾಖೆಯ 14 ಅಧಿಕಾರಿಗಳನ್ನು ವಿಚಕ್ಷಣದಳ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಮಾರ್ಗಗಳನ್ನು ಗುರುತಿಸಲಾಗಿದ್ದು ಆರು ಮಂದಿ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಹಾಗೂ ವೈದ್ಯ ಸಿಬ್ಬಂದಿ , ಸ್ಕೌಟ್ ಮತ್ತು ಗೈಡ್, ಸೇವಾದಳ ತಂಡದಿಂದ ಇಬ್ಬರು ಸ್ವಯಂಸೇವಕರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನ್ ಮಾಡಲು, ಸ್ಯಾನಿಟೈಸರ್ ಹಾಕಲು , ಮಾಸ್ಕ್ ನೀಡಲು ಹೆಲ್ತ್ ಸೆಂಟರ್ ಸ್ಥಾಪಿಸಲಾಗಿದ್ದು ವಿದ್ಯಾರ್ಥಿಗಳು ತಮ್ಮ ಕೊಠಡಿಗಳ ಬಗ್ಗೆ, ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ವಿಚಾರಿಸಲು ಹೆಲ್ಪ್ ಸೆಂಟರ್ ತೆರೆಯಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಲು ಸಾಮಾಜಿಕ ಅಂತರವನ್ನು ಕಾಪಾಡಲು ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ಓರ್ವ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷೆ ನಡೆಯುವ ಸ್ಥಳದ ಸುತ್ತಲಿನಲ್ಲಿ 200 ಮೀ.ವರೆಗೆ ನಿರ್ಬಂಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಪೋಷಕರಿಗೆ ಪರೀಕ್ಷಾ ಆವರಣದೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ .
ನೋಡಲ್ ಅಧಿಕಾರಿ ಸಂಪರ್ಕಿಸಲು ಮನವಿ :
ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಆರೋಗ್ಯ ಮುನ್ನೆಚ್ಚರಿಕೆ ,ಸಾರಿಗೆ ವ್ಯವಸ್ಥೆ, ಪ್ರವೇಶ ಪತ್ರ , ಮಾಸ್ಕ್ , ಸ್ಯಾನಿಟೈಸರ್, ಪರೀಕ್ಷಾ ಕೇಂದ್ರಗಳ ಮಾಹಿತಿ ಸೇರಿದಂತೆ ಇನ್ನಿತರ ಎಲ್ಲಾ ಮಾಹಿತಿಗಳಿಗೆ ಉತ್ತರಿಸಲು ಬಿಇಒ ಕಚೇರಿಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ (ಮೊ.9620479970) ಇವರಿಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ .
ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ : ಪ್ರತಿ ಪರೀಕ್ಷಾ ಕೇಂದ್ರಗಳಿಗೆ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ ಸ್ಯಾನಿಟೈಸ್ ಮಾಡಿಸಲಾಗಿದ್ದು , ಪ್ರತಿ ಎರಡು ದಿನಕ್ಕೊಮ್ಮೆ ಪರೀಕ್ಷಾ ಬಿಡುವಿನ ದಿನದಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಯಾನಿಟೈಸ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ .ವಿದ್ಯಾರ್ಥಿಗಳು ತಮ್ಮ ಕೊಠಡಿ ಸಂಖ್ಯೆಯನ್ನು ಪರೀಕ್ಷಾ ಹಿಂದಿನ ದಿನವೇ ತಿಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ .
ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ :-
ವಿದ್ಯಾರ್ಥಿಗಳು ಸುರಕ್ಷತೆಯಿಂದ ಪರೀಕ್ಷೆ ಬರೆಯಲು ಎಲ್ಲಾ ಮಕ್ಕಳಿಗೆ ಮಾಸ್ಕ್ ನ್ನು ವಿತರಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ಮಗುವಿಗೂ ಸ್ಯಾನಿಟೈಸರ್ ಹಾಕಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸ್ಯಾನಿಟೈಸರ್ ಸರಬರಾಜು ಮಾಡಲಾಗಿದೆ. ಜ್ವರ , ನೆಗಡಿ ಮತ್ತಿತರ ಲಕ್ಷಣಗಳುಳ್ಳ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡಿ ಓ95 ಮಾಸ್ಕ್ ಹಾಕಿಸಿ ಪರೀಕ್ಷೆ ಬರೆಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆದು ಬಸ್ ಗಳ ಸಮರ್ಪಕ ಚಾಲನೆಗೆ ಮನವಿ ಮಾಡಲಾಗಿದೆ , ಇದಲ್ಲದೆ ಪೊಲೀಸ್ ಇಲಾಖೆ , ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ಪತ್ರ ಬರೆದು ಪರೀಕ್ಷೆಯ ಯಶಸ್ಸಿಗೆ ಸಹಕಾರ ಕೋರಲಾಗಿದೆ . ಅನಿವಾರ್ಯ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಖಾಸಗಿ ಶಾಲಾ ವಾಹನಗಳನ್ನು ಮೀಸಲಿರಿಸಲಾಗಿದೆ .ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕೊಠಡಿಗಳಲ್ಲಿ ನೋಂದಣಿ ಸಂಖ್ಯೆ ಹಾಕಿ ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ಒಂದು ದಿನ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಬಂದು ತಮ್ಮ ನೋಂದಣಿ ಸಂಖ್ಯೆ ಇರುವ ಕೊಠಡಿಯನ್ನು ನೋಡಿಕೊಂಡು ಹೋಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ .
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮಾರ್ಗದರ್ಶನದಂತೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಭಯ ಮತ್ತು ಆತಂಕಕ್ಕೆ ಒಳಗಾಗದೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಹಾಗೂ ಆತ್ಮವಿಶ್ವಾಸದಿಂದ,ನಿರ್ಭೀತಿಯಿಂದ ಪರೀಕ್ಷೆಯನ್ನು ಬರೆದು ಯಶಸ್ವಿಯಾಗುವಂತೆ ಬಿಇಒ ಮನವಿ ಮಾಡಿದ್ದಾರೆ.