ಪ್ರಗತಿಪರ ಕೃಷಿಕ ಗರಕಹಳ್ಳಿ ಕೃಷ್ಣೇಗೌಡ ಅವರಿಗೆ ಹಾರೋಕೊಪ್ಪ ಲಿಂಗಮ್ಮ-ಡಾ ಚಿಕ್ಕಕೊಮಾರಿಗೌಡ ಕಸಾಪ ದತ್ತಿ ಪ್ರಶಸ್ತಿ ಪ್ರದಾನ

ಕೃಷಿಕನದು ಹೋರಾಟದ ಬದುಕು. ನಾನೂ ಹೋರಾಟದ ಮೂಲಕವೇ ಕೃಷಿಯಲ್ಲಿ ಸಾಧನೆ ಮಾಡಿದ್ದೇನೆ, ಕೃಷಿಗಾಗಿ ಜೈಲುವಾಸವನ್ನೂ ಮಾಡಿದ್ದೇನೆ. ಯಾವುದೇ ಸಾಧನೆ ಮಾಡಲು ಮನೆಯವರ ಸಹಕಾರದ ಅವಶ್ಯಕತೆ ಇದೆ – ಗರಕಹಳ್ಳಿ ಜಿ.ಕೃಷ್ಣೇಗೌಡ

ಬೆಂಗಳೂರು : ಕೃಷಿ ಕೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡ ಮಾಡುವ  ಚನ್ನಪಟ್ಟಣ ತಾಲ್ಲೂಕು ಹಾರೋಕೊಪ್ಪ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಕಸಾಪ ದತ್ತಿ ಪ್ರಶಸ್ತಿಯು ತಾಲ್ಲೂಕಿನ ಪ್ರಗತಿಪರ ಕೃಷಿಕ, ರೈತಪರ ಹೋರಾಟಗಾರ, ವೈಚಾರಿಕ ಚಿಂತಕ ಗರಕಹಳ್ಳಿ ಜಿ.ಕೃಷ್ಣೇಗೌಡ ಅವರ ಮುಡಿಗೇರಿದೆ.

ರಾಜಧಾನಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚನ್ನಪಟ್ಟಣ ತಾಲ್ಲೂಕು ಹಾರೋಕೊಪ್ಪ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ದತ್ತಿ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ ಗರಕಹಳ್ಳಿ ಕೃಷ್ಣೇಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಷಿ ಹಾಗೂ ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಆರ್. ಆರ್. ಹಂಚಿನಾಳ ಅವರು ಜಂಟಿಯಾಗಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಕಸಾಪ ಪ್ರಶಸ್ತಿ ಪಡೆಯಲು ಅರ್ಜಿ-ಮರ್ಜಿಯ ಅಗತ್ಯವಿಲ್ಲ. ಸಾಧಕರನ್ನು ಹುಡುಕಿಕೊಂಡು ಹೋಗಿ ಪರಿಷತ್ತಿನ ಪ್ರಶಸ್ತಿ ನೀಡಲಾಗುವುದು ಎಂದು  ಹೇಳಿದರು.

ನಮ್ಮ ನಾಡು ಋಷಿ ಸಂಸ್ಕೃತಿಯನ್ನು ಹೊಂದಿದೆ. ಈ ಸಂಸ್ಕೃತಿ ನಿಂತಿದ್ದೇ ಕೃಷಿ ಸಂಸ್ಕೃತಿಯ ಆಧಾರದ ಮೇಲೆ ಆದ್ದರಿಂದ ರೈತರು ದೇವರಿಗೆ ಸಮ. ಈ ಮಾತನ್ನು ರಾಮಕೃಷ್ಣ ಪರಮಹಂಸರು, ಕುವೆಂಪು, ಗುರು ಗೋವಿಂದಭಟ್ಟರು, ಶಿಶುನಾಳ ಶರೀಫ ಸೇರಿದಂತೆ ಬಹುತೇಕರು ಒಪ್ಪಿಕೊಂಡಿದ್ದಾರೆ ಎಂದರು.

ಕೃಷಿ ಕೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡ ಮಾಡುವ ಈ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನೆಲೆಯಲ್ಲಿ ಪ್ರದಾನ ಮಾಡಿರಲಿಲ್ಲ. ಈ ನಿಟ್ಟಿನಲ್ಲಿ 2020 ನೇ ಸಾಲಿನ ಪ್ರಶಸ್ತಿಯನ್ನು ಗರಕಹಳ್ಳಿ ಜಿ.ಕೃಷ್ಣೇಗೌಡ ಹಾಗೂ 2021 ರ ಪ್ರಶಸ್ತಿಯನ್ನು ಜಿ.ಎನ್. ನಾರಾಯಣಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಜೊತೆಗೆ, ತಲಾ ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ, ಫಲ-ತಾಂಬೂಲ ನೀಡಿ ಗೌರವಿಸಲಾಯಿತು.

ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಆರ್. ಆರ್. ಹಂಚಿನಾಳ ಅವರು ಮಾತನಾಡಿ, ನಮ್ಮಲ್ಲಿ ನೀರನ್ನು ಸರಿಯಾದ ರೀತಿಯಲ್ಲಿ ಬಳಸಲಾಗುತ್ತಿಲ್ಲ. ಕೇವಲ ಶೇ.10 ರಷ್ಟು ಮಾತ್ರ ನೀರನ್ನು ಬಳಸಲಾಗುತ್ತಿದೆ.ಮಿಕ್ಕ ನೀರೆಲ್ಲಾ ಸಮುದ್ರ ಪಾಲಾಗುತ್ತಿದೆ. ಯಾವುದೇ ಕೆಲಸ ಮಾಡುವಾಗಲು ದಕ್ಷತೆ ಮುಖ್ಯ. ಕೃಷಿ ಕಾರ್ಯ ಎನ್ನುವುದು ದಕ್ಷತೆಯ ಪ್ರತೀಕ. ಅದರಲ್ಲಿಯೂ ಸಾಹಿತ್ಯ ಪರಿಷತ್ತು ಕೃಷಿಕರ ದಕ್ಷತೆ ಗುರುತಿಸುತ್ತಿರುವುದು ಶ್ಲಾಘನೀಯ ಎಂದರು.

 ಪ್ರಶಸ್ತಿ ಸ್ವಿಕರಿಸಿದ ಗರಕಹಳ್ಳಿ ಜಿ.ಕೃಷ್ಣೇಗೌಡ ಮಾತನಾಡಿ, ಕೃಷಿಕನದು ಹೋರಾಟದ ಬದುಕು. ನಾನೂ ಹೋರಾಟದ ಮೂಲಕವೇ ಕೃಷಿಯಲ್ಲಿ ಸಾಧನೆ ಮಾಡಿದ್ದೇನೆ, ಕೃಷಿಗಾಗಿ ಜೈಲುವಾಸವನ್ನೂ ಮಾಡಿದ್ದೇನೆ. ಯಾವುದೇ ಸಾಧನೆ ಮಾಡಲು ಮನೆಯವರ ಸಹಕಾರದ ಅವಶ್ಯಕತೆ ಇದೆ ಎಂದರು.

ಕೃಷಿಕ ಕೇವಲ ಕೃಷಿಯನ್ನು ನಂಬಿದರೆ ಸಾಲದು, ಬದಲಿಗೆ ಪರ್ಯಾಯ ವ್ಯವಹಾರ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತರೆ ಕ್ಷೇತ್ರಗಳಂತೆ ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲೂ ಬದಲಾವಣೆ ಆಗುತ್ತಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ. ಹಾಗೆಯೇ ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ಹೆಸರುವಾಸಿಯಾಗಿರುವ ನಮ್ಮ ಚನ್ನಪಟ್ಟಣ ತಾಲ್ಲೂಕನಲ್ಲೂ ಆಧುನಿಕ ಕೃಷಿ ಪ್ರಯೋಗ ನಡೆಯುತ್ತಿದೆ. ಸಾಕಷ್ಟು ಯುವಕರು ಕೃಷಿ ಮಾಡಲು ಮುಂದಾಗಿರವುದು ಕೂಡ ಖುಷಿಯ ವಿಚಾರ ಎಂದು ಗರಕಹಳ್ಳಿ ಕೃಷ್ಣೇಗೌಡ ತಮ್ಮ ಅನುಭವ ಹಂಚಿಕೊಂಡರು.

ದತ್ತಿ ದಾನಿ ಹಾರೋಕೊಪ್ಪ ಡಾ. ಚಿಕ್ಕಕೋಮಾರಿಗೌಡ ಮಾತನಾಡಿ, ದಾನಿಗಳು ನೀಡುವ ಪ್ರಶಸ್ತಿಗಳು ಸೂಕ್ತ ವ್ಯಕ್ತಿಗಳಿಗೆ ಸಿಗಬೇಕು ಎನ್ನುವುದು ಎಲ್ಲಾ ದಾನಿಗಳಿಗೆ ಇರುತ್ತದೆ. ಈ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಚಾಚು ತಪ್ಪದೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಸ್ವಾಗತಿಸಿ ವಂದಿಸಿದರು. ಕಸಾಪ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು  ನಿರೂಪಿಸಿದರು.

ಗರಕಹಳ್ಳಿ ಕೃಷ್ಣೇಗೌಡ ಅವರ ಪತ್ನಿ, ತಾಪಂ ಮಾಜಿ ಸದಸ್ಯೆ ಪವಿತ್ರ ಕೃಷ್ಣೇಗೌಡ, ಪುತ್ರಿ ರಂಜನಾ, ಅಳಿಯ ನಂದೀಶ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *