ರೋಟರಿ ಸಂಸ್ಥೆಯ “ಗೌರ್ನರ್ ಅಫಿಷಿಯಲ್ ವಿಸಿಟ್ 2021-22” ಕಾರ್ಯಕ್ರಮ : ಚಾಲಕ ಹೆಚ್. ವೆಂಕಟೇಶ್, ಪರಿಸರ ಅಭಿಯಂತರ ಎಂ.ಕೆ. ಸುಬ್ರಹ್ಮಣ್ಯ, ಶಿಕ್ಷಕ ಚಿಕ್ಕಹನುಮಯ್ಯ ಅವರಿಗೆ ಸನ್ಮಾನ
ರಾಮನಗರ: ರೋಟರಿ ಸಂಸ್ಥೆಯಿಂದ ಸಾರ್ವಜನಿಕರಿಗೆ ಒಳ್ಳೆಯ ಸೌಲಭ್ಯಗಳನ್ನು ಒದಗಿಸಿ ಸಮಾಜ ಮುಖಿಯಾದ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ ಎಂಬುದನ್ನು ಸಂಸ್ಥೆಯ ಸದಸ್ಯರುಗಳೇ ಸಾರ್ವಜನಿಕರಿಗೆ ಪ್ರಚಾರಪಡಿಸಬೇಕು ಎಂದು ರೋಟರಿ ಸಂಸ್ಥೆಯ ಜಿಲ್ಲಾ ವಲಯ ಪಾಲಕ ರೋಟೆರಿಯನ್ ಫಜಲ್ ಮಮೂದ್ ತಿಳಿಸಿದರು.

ನಗರದ ರೋಟರಿ ಸಂಸ್ಥೆ ಅಂ.ರಾ. ಜಿಲ್ಲೆ-3190ರ ಸಂಸ್ಥೆಯ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ `ಗೌರ್ನರ್ ಅಫಿಷಿಯಲ್ ವಿಸಿಟ್ 2021-22’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಾವುಗಳು ಒಂದು ಒಳ್ಳೆಯ ಪುಸ್ತಕ, ಸಿನಿಮಾ, ಊಟ ಹಾಗೂ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ನಂತರ ಅವುಗಳ ಗುಣಗಳನ್ನು ಇತರರಿಗೆ ಹಂಚಿಕೊಳ್ಳುವಂತೆ ನಮ್ಮ ಸಂಸ್ಥೆಯ ಒಳ್ಳೆಯ ಕೆಲಸಗಳನ್ನು ಸದಸ್ಯರುಗಳು ಪ್ರಚಾರಪಡಿಸಿ ಸಂಸ್ಥೆಗೆ ಹೆಚ್ಚಿನ ಸದಸ್ಯರು ಸಮಾಜ ಸೇವೆಗೆ ಸೇರ್ಪಡೆಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು.

117 ವರ್ಷಗಳ ಇತಿಹಾಸವಿರುವ ರೋಟರಿ ಸಂಸ್ಥೆ ಪ್ರಪಂಚದಾದ್ಯಂತ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗೆ ಒದಗಿಸುವ ಯಾವುದೇ ವಿಧವಾದ ಸೇವೆಗೆ ಸರ್ಕಾರದ ಸಹಾಯ ಹಸ್ತವನ್ನು ನಿರೀಕ್ಷಿಸುವುದು ಸರಿಯಲ್ಲ. ಅದಕ್ಕಿಂತಲೂ ಮಿಗಿಲಾಗಿ ನಮ್ಮಂತಹ ಖಾಸಗಿ ಸಂಘ-ಸಂಸ್ಥೆಗಳು ಸಾರ್ವಜನಿಕರಿಗೆ ಅವಶ್ಯಕತೆ ಇರುವಂತಹ ಸೇವೆಗಳನ್ನು ನೀಡಲು ಪ್ರಥಮವಾಗಿ ಮುಂದಾಗಬೇಕು ಎಂದು ನುಡಿದರು.

ರಾಮನಗರ ರೋಟರಿ ಸಂಸ್ಥೆಯ ವತಿಯಿಂದ ಒಳ್ಳೆಯ ಕೆಲಸಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯಿಂದ ಯಾರಾದರೂ ಒಬ್ಬ ಸದಸ್ಯರು ಜಿಲ್ಲಾ ವಲಯ ಪಾಲಕರಾಗಿ ಬರಬೇಕೆಂಬುದು ನನ್ನ ಹಂಬಲವಾಗಿದ್ದು, ರೋಟರಿ ಸಂಸ್ಥೆಗೆ 1500 ಸದಸ್ಯರನ್ನು ಪರಿಚಯಿಸಿರುವ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ಜಿಲ್ಲಾ ವಲಯ ಪಾಲಕರಾಗಿ ಆಗಮಿಸಬೇಕೆಂಬುದು ನನ್ನ ಅಭಿಲಾಷೆಯಾಗಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿ, ನಾವು ನಮ್ಮ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಒಳ್ಳೆಯ ಸೇವೆಗಳನ್ನು ಒದಗಿಸಿದರೆ ರಷ್ಯಾ-ಯುಕ್ರೇನ್ ನಡುವೆ ನಡೆದಂತಹ ಯುದ್ಧಗಳ ಅವಶ್ಯಕತೆ ಉದ್ಬವಿಸುವುದಿಲ್ಲ ಎಂದರು.
2022-23ನೇ ಸಾಲಿಗೆ ರಾಮನಗರ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಪಿ. ಉಮೇಶ್ ಹಾಗೂ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿರುವ ಉಮೇಶ್‍ಬಾಬು ಅವರುಗಳು ಇಂದಿನ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ ಹಾಗೂ ಕಾರ್ಯದರ್ಶಿ ಎಸ್. ಕೇಶವ್ ಅವರುಗಳ ಮಾರ್ಗದರ್ಶನದಲ್ಲಿ ಸಂಸ್ಥೆಯ ವತಿಯಿಂದ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಪ್ರಯತ್ನಿಸಬೇಕು ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಸುರಕ್ಷಿತ ವಾಹನ ಚಾಲನೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಾದ ನಗರದ ಕೆಎಸ್‍ಆರ್‍ಟಿಸಿ ವಾಹನ ಚಾಲಕ ಹೆಚ್. ವೆಂಕಟೇಶ್ ಕುಮಾರ್, ಸರ್ಕಾರಿ ಹುದ್ದೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ರಾಮನಗರ ನಗರಸಭೆಯ ಪರಿಸರ ಅಭಿಯಂತರರಾದ ಎಂ.ಕೆ. ಸುಬ್ರಮಣ್ಯ, ಹಾಗೂ ಶಿಕ್ಷಕ ಚಿಕ್ಕಹನುಮಯ್ಯ ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ರೋಟೆರಿಯನ್ ಪಟೇಲ್ ಸಿ. ರಾಜು ಅವರು ಜಿಲ್ಲಾ ವಲಯ ಪಾಲಕ ಫಜಲ್ ಮಹಮೂದ್ ಅವರು ಪರಿಚಯ ಹಾಗೂ ಸಾಧನೆಗಳನ್ನು ವಾಚಿಸಿದರೆ, ಕಾರ್ಯದರ್ಶಿ ಜಿ. ಶಿವಣ್ಣ ಅವರು ರಾಮನಗರ ರೋಟರಿ ಸಂಸ್ಥೆಯ 2022ನೇ ಸಾಲಿನ ಸೇವಾ ಸಾಧನೆಗಳನ್ನು ತಿಳಿಸಿದರು, ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅವರು ಅತಿಥಿಗಳಿಗೆ ವಂದಿಸಿದರು. ಆರೀಫ್ ಪಾಷ, ಎಸ್. ಕೇಶವ್, ಬಿ.ಡಿ. ಹೊನ್ನೇಗೌಡ, ಅಲ್ತಾಫ್ ಅಹ್ಮದ್, ಉಮೇಶ್, ಉಮೇಶ್‍ಬಾಬು ಸೇರಿದಂತೆ ರಾಮನಗರ ರೋಟರಿ ಸಂಸ್ಥೆಯ ಇನ್ನಿತರೆ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.