ಅರ್ಥಪೂರ್ಣವಾಗಿ ಡಾ. ಬಾಬು ಜಗಜೀವನ ರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲು ನಿರ್ಧಾರ
ರಾಮನಗರ : ಜಿಲ್ಲಾಡಳಿತದ ವತಿಯಿಂದ ಏಪ್ರಿಲ್ 5 ರಂದು ಡಾ: ಬಾಬು ಜಗಜೀವನ ರಾಂ ಜಯಂತಿ ಹಾಗೂ ಏಪ್ರಿಲ್ 14 ರಂದು ಡಾ: ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಇಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡರದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಎರಡು ಜಯಂತಿಗಳು ಯಾವುದೇ ಲೋಪವಿಲ್ಲದಂತೆ ನಡೆಯಬೇಕು. ಅಧಿಕಾರಿಗಳು ತಮಗೆ ವಹಿಸಲಾಗುವ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನರಾಂ ಅವರ ತತ್ವ, ಆದರ್ಶ ಹಾಗೂ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ದೊಡ್ಡದು. ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಈ ಹಿನ್ನಲೆಯಲ್ಲಿ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದರು.
ಜಯಂತಿಗಳ ದಿನದಂದು ನಡೆಸಲಾಗುವ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಭಾವತ್ರಗಳ ಮೆರವಣಿಗೆಗೆ ಸ್ಥಳವನ್ನು ನಿಗಧಿಪಡಿಸಿಕೊಳ್ಳಿ. ಸಂಘಟನೆಯ ಮುಖ್ಯಸ್ಥರು ಹೆಚ್ಚಿನ ಜನರನ್ನು ಮೆರವಣಿಗೆಗೆ ಸಂಘಟಿಸಬೇಕು. ಉತ್ತಮ ಕಲಾತಂಡವನ್ನು ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ಜಯಂತಿಯ ದಿನದಂದು ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಹಾಜರಾತಿ ಕಡ್ಡಾಯ: ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕಚೇರಿಯಲ್ಲಿ ಜಯಂತಿ ಆಚರಿಸಿ, ಜಿಲ್ಲಾ ಮಟ್ಟದಲ್ಲಿ ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಡಾ: ಬಾಬು ಜಗಜೀವನರಾಂ ಜಯಂತಿ ಹಾಗೂ ಏಪ್ರಿಲ್ 14 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಡಾ: ಬಿ.ಆರ್. ಅಂಬೇಡ್ಕರ್ ಅವರ ಜಯಂತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾ ಬಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಡಾ: ಜಿ ಗೋವಿಂದಯ್ಯ, ಶಿವಲಿಂಗಯ್ಯ, ವೆಂಕಟೇಶ್, ಚಲುವರಾಜು, ಜಗದೀಶ್, ನಾಗೇಶ್, ಸದಾನಂದ, ದಾಸಪ್ಪ, ವಾಸು, ಶೇಖರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.