ಕನಕಪುರ ನಗರಸಭೆಯಲ್ಲಿ ಲಂಚ ಕೊಡದಿದ್ದರೆ ಕೆಲಸಗಳು ಆಗುವುದಿಲ್ಲ : ಲಂಚಗುಳಿತನಕ್ಕೆ ಇತಿಶ್ರೀ ಹಾಡಲು ಮಲ್ಲಿಕಾರ್ಜುನ್ ಆಗ್ರಹ
ಕನಕಪುರ: ಕನಕಪುರ ನಗರಸಭೆಯಲ್ಲಿ ಲಂಚ ಕೊಡದಿದ್ದರೆ ಇಲ್ಲಿ ಯಾವುದೆ ಕೆಲಸಗಳು ಆಗುವುದಿಲ್ಲ. ಹಣ ಕೊಡದಿದ್ದರೆ ಸಬೂಬು ಹೇಳಿ ತಿಂಗಳಗಟ್ಟಲೆ ಅಲೆಸುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಲಂಚಗುಳಿತನಕ್ಕೆ ಇತಿಶ್ರೀ ಹಾಡಬೇಕು’ ಎಂದು ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆಗ್ರಹಿಸಿದರು.
ನಗರಸಭೆಯಲ್ಲಿ ಭ್ರಷ್ಟಾಚಾರವನ್ನು ವಿರೋಧಿಸಿ ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ನಡೆಸಿದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.
ಸರ್ಕಾರ ನೌಕರರು ಮತ್ತು ಅಧಿಕಾರಿಗಳಿಗೆ ಕೈತುಂಬ ಸಂಬಳ ಕೊಡುತ್ತಿದೆ. ಆದರೂ ಅಧಿಕಾರಿಗಳು ರೈತರು ಸಾರ್ವಜನಿಕರು ಸಣ್ಣಪುಟ್ಟ ಕೆಲಸ ಮಾಡಿಸಲು ಲಂಚ ಕೊಡಬೇಕಿದೆ. ನಗರಸಭೆಯಿಂದ ನಡೆಯುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರದ ಯೋಜನೆಗಳನ್ನು ಹಳ್ಳ ಹಿಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ನಗರ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿವೆ. ಸರ್ಕಾರವು ಕಂದಾಯ ಭೂಮಿಯನ್ನು ಭೂ-ಪರಿವರ್ತನೆ ಮಾಡಿ ಪ್ರಾಧಿಕಾರದಿಂದ ಅನುಮೋದನೆ ಪಡೆದು ಸುಸಜ್ಜಿತವಾದ ಬಡಾವಣೆ ನಿರ್ಮಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಅದನ್ನು ತಾಲ್ಲೂಕಿನಲ್ಲಿ ಗಾಳಿಗೆ ತೂರಲಾಗುತ್ತಿದೆ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ‘ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್, ಸಂಸದ ಡಿ,ಕೆ, ಸುರೇಶ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸರ್ಕಾರಿ ನೌಕರರು ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಭಾಸ್ಕರ್, ಯುವಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ‘ನಗರಸಭೆಯಲ್ಲಿ ಅಧಿಕಾರಿಗಳು ಹತ್ತಾರು ವರ್ಷದಿಂದ ಟಿಕಾಣಿ ಹೂಡಿರುವುದು ಭ್ರಷ್ಟಾಚಾರ ಮತ್ತು ಅಕ್ರಮಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮದಂತೆ ನಿಯಮಿತ ಸಮಯದಲ್ಲಿ ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮೂಲಕ ಒತ್ತಾಯದ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು. ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ, ಯುವಶಕ್ತಿ ವೇದಿಕೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.