ಚನ್ನಪಟ್ಟಣ : ಸುಳ್ಳೇರಿ ಗ್ರಾಮದ ಪ್ರಸಿದ್ದ ಪಟ್ಟಲದಮ್ಮದೇವಿಯ ಜಾತ್ರಾ ಮಹೋತ್ಸವ-ಸಿಡಿ ಉತ್ಸವ ಸಂಪನ್ನ

ಚನ್ಪಟ್ಟಣ : ತಾಲೂಕಿನ ಸುಳ್ಳೇರಿ ಗ್ರಾಮದ ಪ್ರಸಿದ್ದ ಪಟ್ಟಲದಮ್ಮದೇವಿಯಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.
ಸುಳ್ಳೇರಿ, ಮದಾಪುರ, ಅವ್ವೇರಹಳ್ಳಿ, ಹಾರೋಹಳ್ಳಿ, ಮೋಳೆ ಸೇರಿದಂತೆತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಭಕ್ತರನ್ನು ಹೊಂದಿರುವ ಸುಳ್ಳೇರಿ ಪಟ್ಟಲದಮ್ಮದೇವಿಯ ಹಬ್ಬ ಕಳೆದ ಶುಕ್ರವಾರದಿಂದ ಆರಂಭಗೊಂಡಿದ್ದು, ಭಾನುವಾರ ಸಿಡಿ ಉತ್ಸವದೊಂದಿಗೆ ಮುಕ್ತಾಯಗೊಂಡಿತು.
ಸಿಡಿ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಕೆರೆಯ ಅಂಗಳದಿಂದ ಹೂ ಹೊಂಬಾಳೆಯೊಂದಿಗೆ ದೇವರನ್ನು ಪೂಜೆ ಮಾಡಿಕೊಂಡು, ಟಮಟೆ, ನಗಾರಿ ಮೊದಲಾದ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬಂದ ಸಿಡೀರಣ್ಣನನ್ನು ದೇವಾಲಯದ ಮುಂಭಾಗ ಇದ್ದ ಸಿಡಿ ಕಂಬದಲ್ಲಿ ಸಿಡಿ ಆಡಿಸಲಾಯಿತು. ಬಳಿಕ ಹರಕೆ ಹೊತ್ತ ಭಕ್ತರುತಮ್ಮ ಮಕ್ಕಳನ್ನು ಸಿಡಿ ಆಡಿಸಿದರು. ಇದೇ ವೇಳೆ ಹರಕೆ ಹೊತ್ತಿದ್ದ ಭಕ್ತರು ಬಾಯಿ ಬೀಗ ಚುಚ್ಚಿಸಿಕೊಂಡು ದೇವರಿಗೆ ಸೇವೆಸಲ್ಲಸಿದರು. ನೂರಾರು ಮಂದಿ ಬೆಳಗ್ಗಿನಿಂದ ಸಂಜೆಯ ವರೆಗೆ ಬಾಯಿಬೀಗ ಹಾಕಿಸಿಕೊಂಡು ದೇವಿಗೆ ಹರಕೆತೀರಿಸುವುದು ವಾಡಿಕೆ.
ಇದೇ ವೇಳೆ ಭಕ್ತರು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು. ತಾಲೂಕಿನ ವಿವಿಧಗ್ರಾಮಗಳ ಭಕ್ತರುಜಾತ್ರೆಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದರು. ವಿವಿಧ ಗ್ರಾಮಗಳಲ್ಲಿ ಪಾನಕದ ಬಂಡಿ, ಮಜ್ಜಿಗೆ ಬಂಡಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದವು.
ಗ್ರಾಮದೇವತೆ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ನೂತನವಾಗಿ ನಿರ್ಮಿಸಲಾಗಿರುವ ರಥವನ್ನುಗ್ರಾಮದಲ್ಲಿ ಎಳೆಯಲಾಯಿತು. ರಥೋತ್ಸವದ ವೇಳೆ ಭಕ್ತರು ಹಣ್ಣು ಜವನ ಎಸೆದು ದೇವಿಗೆ ಪೂಜೆ ಸಲ್ಲಿಸಿದರು. ಶುಕ್ರವಾರರಾತ್ರಿ ಕೊಂಡಾಬಂಡಿ, ಶನಿವಾರ ಬೆಳಿಗ್ಗೆ ಕೊಂಡೋತ್ಸವ ನಡೆಯಿತು. ಮಂಗಳವಾರ ಗ್ರಾಮದ ಶ್ರೀ ಬಸವೇಶ್ವರ ದೇವರಕೊಂಡ ಮಹೋತ್ಸವ ನಡೆಯಲಿದೆ.

Leave a Reply

Your email address will not be published. Required fields are marked *