ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಶ್ರೀ ಮಂಟೇಸ್ವಾಮಿ ಮತ್ತು ಶರಣ ಶ್ರೀ ಚನ್ನಪ್ಪ ಸ್ವಾಮಿ ಅವರ ಕುರಿತಾಗಿ ವಿಶೇಷ ಉಪನ್ಯಾಸ ಹಾಗೂ ವಸಂತ ಕವಿ ಗೋಷ್ಠಿ ಕಾರ್ಯಕ್ರಮ

ಚನ್ನಪಟ್ಟಣ : ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪೋಷಿಸುವ ಸಹೃದಯರ ಕೊರತೆಯನ್ನು ಸಾಹಿತ್ಯ ಕ್ಷೇತ್ರ ಎದುರಿಸುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.‌ ಬಿ.ಟಿ. ಚಿಕ್ಕಪುಟ್ಟೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಡಾ.ಸಿ. ಗುರುವಪ್ಪ ತೋಟದ ಮನೆ ಆವರಣದಲ್ಲಿ, ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕರಾದ ಶ್ರೀ ಮಂಟೇಸ್ವಾಮಿ ಮತ್ತು ಶರಣ ಶ್ರೀ ಚನ್ನಪ್ಪ ಸ್ವಾಮಿ ಅವರ ಕುರಿತಾಗಿ ವಿಶೇಷ ಉಪನ್ಯಾಸ ಹಾಗೂ ವಸಂತ ಕವಿ ಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಜನರ ಬೌದ್ಧಿಕ ಸಾಮರ್ಥ್ಯ ‌ವೃದ್ಧಿಸುವ ಸಾಹಿತ್ಯ, ಸಂಗೀತ, ಕಲೆ, ನಾಟಕಗಳು ನಿರಾತಂಕವಾಗಿ ಜರುಗುವ ಪ್ರಕ್ರಿಯೆ ಏರ್ಪಡಬೇಕು.‌ ಬರಗಾರರು ಮತ್ತು ಕಲಾವಿದರಷ್ಟೇ ಪ್ರಾಮುಖ್ಯತೆ, ಇವುಗಳ ಪೋಷಕರಿಗೂ ಸಂದಾಗ ಮಾತ್ರವೇ ನಮ್ಮ ಸಂಸ್ಕೃತಿ ಜೀವಂತಿಕೆ ಪಡೆಯಲು ಸಾಧ್ಯ ಎಂದರು.
ಸಾಹಿತಿ ವಿಜಯ್ ರಾಂಪುರ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ ನಾಡಿನ ಅಪರೂಪದ ಮೌಖಿಕ ಪರಂಪರೆಯ ಮಹಾಕಾವ್ಯಗಳು ಈ ನೆಲದ ಜ್ಞಾನದ ಸೆಲೆಯನ್ನು ಪರಿಚಯಿಸುತ್ತವೆ. ಜನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾ, ಮಾನವತೆಯ ಸಾರವತ್ತತೆಯನ್ನು ಉಣಬಡಿಸುವ ಕಾವ್ಯ ಪರಂಪರೆಯನ್ನು ಆಸ್ವಾಧಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಮೌಖಿಕ ಮಹಾಕಾವ್ಯಗಳ ಸಾಹಿತ್ಯ ಸಂಪದ್ಭರಿತವಾಗಿದ್ದು, ಅವುಗಳನ್ನು ವೈಚಾರಿಕವಾಗಿ ಆಲೋಚಿಸುವ ಮತ್ತು ವಿಮರ್ಶೆಗೆ ಒಳಪಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಹುದೊಡ್ಡ ಪರಂಪರೆ ಈ ಮಹಾಕಾವ್ಯಗಳಿಗಿದೆ. ಆದರೆ, ಈ ಮಹಾಕಾವ್ಯಗಳು ಪಠ್ಯ ವಿಷಯಗಳಲ್ಲಿ ಸೇರ್ಪಡೆಗೊಳ್ಳದಿರುವುದು ಇತಿಹಾಸದ ಅಣಕ ಎಂದರು.

ಡಾ. ಸಿ. ಗುರುವಪ್ಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಜಿ. ಲೋಕಾನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ,
ನಿವೃತ್ತ ಶಿಕ್ಷಕ ಕೆ. ನಾಗಪ್ಪ, ಹಿರಿಯ ಫಾರ್ಮಸಿಸ್ಟ್ ಎಂ. ವೇದಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕವಿ ಗೋಷ್ಠಿಯಲ್ಲಿ ಚಂಪಕಮಾಲಾ, ಆರ್.ಬಿ. ಯಶಸ್ವಿನಿ, ಜಿ.ಎಸ್.‌ಸುಕನ್ಯಾ, ಶಿಕ್ಷಕ ಕೃಷ್ಣ, ಅಬ್ಬೂರು ಶ್ರೀನಿವಾಸ್, ಚಂದ್ರು ಸಾಕ್ಯವಂಶಿ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ವಿಜೇತೆ ಹೆಚ್.ಕೆ. ಸಂಧ್ಯಾ ಶ್ರೀ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಮಂಗಳವಾರಪೇಟೆ ಗಿರೀಶ್, ಧ್ಯಾನ್ ಸಾಗರ್, ವರ್ಷಾಂತ್ ಹಾಗೂ ನೀಲಕಂಠನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *