ರಾಗಿ ಖರೀದಿಸದೆ ನಿರ್ಲಕ್ಷಿಸಿದರೆ ತಾಲ್ಲೂಕು ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ : ಹೊಸಪಾಳ್ಯ ಲೋಕೇಶ್ ಎಚ್ಚರಿಕೆ
ಮಾಗಡಿ : ಸರಕಾರ ಏ. 1 ರಿಂದ ರೈತರಿಂದ ರಾಗಿ ಖರೀದಿಸದೆ ನಿರ್ಲಕ್ಷಿಸಿದರೆ ರಾಜ್ಯ ವ್ಯಾಪ್ತಿಯ ತಾಲೂಕು ಕಚೇರಿಗಳಿಗೆ ಬೀಗ ಜಡಿದು ರಾಗಿ ಸುರಿದು ಉರುಳು ಸೇವೆ ಮತ್ತು ರಸ್ತೆ ರಾಗಿ ಸುರಿದು ರಸ್ತೆ ತಡೆಯು ವುದಾಗಿ ತಾಲೂಕು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಹೇಳಿದರು.
ತಾಲೂಕು ಕಚೇರಿ ಮುಂಭಾಗ ನೆಲಕ್ಕೆ ರಾಗಿ ಸುರಿದು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಸರಕಾರ ಸಣ್ಣ ರೈತ,ದೊಡ್ಡ ರೈತ ಎಂಬ ತಾರತಮ್ಯ ಮಾಡಿ ರೈತ ಬೆಳೆದ ರಾಗಿಯನ್ನು ಖರೀದಿಸುವಲ್ಲಿ ಮುಂದಾಗಿ ಅರ್ಧಕ್ಕೆ ಮೊಟಕುಗೊಳಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ. ರಾಜ್ಯದ 25 ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಗಿ ಖರೀದಿಸಲು ಮುಂದಾಗಿ ರೈತರ ಬಗ್ಗೆ ನ್ಯಾಯಕೊಡಿಸಲು ಮುಂದಾಗದೆ ನಿರ್ಲಕ್ಷ್ಯಿಸಿದ್ದಾರೆ ಇಂಥಹ ಸಂಸದರುಗಳಿಗೆ ಮುಂದಿನ ಚುನಾವಣೆಯಲ್ಲಿ ರೈತರು ತಕ್ಕಪಾಠಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಗಿ ಬೆಳೆಯಲ್ಲಿ ರಾಜ್ಯಕ್ಕೆ ತಾಲೂಕು ಮೊದಲ ಸ್ಥಾನದಲ್ಲಿದ್ದು ರೈತರು ರಾಗಿ ಬೆಳೆಯನ್ನೆ ನಂಭಿ ಜೀವನ ನಡೆಸುತ್ತಿದ್ದಾರೆ, ಅರ್ಧದಷ್ಟು ರೈತರು ರಾಗಿ ಮಾರಾಟಕ್ಕೆ ಹಾಕಿದ್ದು ಉಳಿದವರು ರಾಗಿ ಒಕ್ಕಣೆಮಾಡಿಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದಾರೆ, ಸರಕಾರ ಅರ್ಧದಷ್ಟು ಖರೀದಿ ಮಾಡಿ ಅರ್ಧದಷ್ಟು ಮಂದಿಯ ರಾಗಿ ಖರೀದಿ ಮಾಡದೆ ಮಲತಾಯಿ ಧೋರಣೆ ಅನುಭವಿಸುತ್ತಿದ್ದು, ಸರಕಾರ ಖರೀದಿಸಿದೆ ಹೊದರೆ ರೈತರು ಮಧ್ಯವರ್ತಿಗಳಿಗೆ ಮಾರಾಟಮಾಡುವಂತಾಗುತ್ತದೆ ಇದರಿಂದ ಬೆಳೆದ ಖರ್ಚಿನ ಹಣವೂ ಸಿಗದಂತಾಗಿ ರೈತ ಆತ್ಮಹತ್ಯೆಮಾಡಿಕೊಳ್ಳುವಂತಹ ಪರಿಸ್ಥಿತಿಗೆ ಬರುವಂತಾಗುತ್ತದೆ ಈ ಸಂಬಂಧ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತದೆ ತಮಗೆ ಅನುಕೂಲವಾಗುವಂತಹ ವಿಷಯಗಳಿಗೆ ಧ್ವನಿ ಎತ್ತಿರುವುದು ಖಂಡನೀಯ ಎಂದು ಚುನಾಯಿತ ಪ್ರತಿನಿಧಿಗಳ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಒಂದುವರೆ ವರ್ಷ ಕಳೆದರು ಮಾವು ಬೆಳೆಗೆ ಪರಿಹಾರ ನೀಡಿಲ್ಲ, ತೆಂಗಿನ ಕಾಯಿಗೆ ಚುಕ್ಕೆ ರೋಗ ಬಂದು ಕಾಯಿ ಉದುರುಹೋಗಿದೆ, ರೈತರ ಜಮೀನಿನಲ್ಲಿ ವಿದ್ಯುತ್ ದೊಡ್ಡ ಲೈನ್‍ಗಳು ಹಾದುಹೋಗಿದ್ದು ಇದರಿಂದ ಸಾವಿರಾರು ತೆಂಗಿನ ಮರ, ಅಡಿಕೆ ಮರ, ಮಾವಿನ ಮರಗಳು ಹಾಳಾಗಿದ್ದು ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ನೀಡುವಲ್ಲಿ ಅಧಿಕಾರಿಗಳಿಗೆ ಯೋಗ್ಯತೆ ಇಲ್ಲ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ರೈತರನ್ನು ಕಾಯುವ ಯೋಗ್ಯತೆ ಅವರಿಗಿಲ್ಲ ಎಂದು ಲೇವಡಿ ಮಾಡಿದರು.
ಪ್ರಾಂತರೈತಸಂಘದ ಅಧ್ಯಕ್ಷ ವನಜಾ, ಯುವ ಘಟಕದ ಅಧ್ಯಕ್ಷ ರವಿಕುಮಾರು, ಕಾರ್ಯದರ್ಶಿ ಕಾಂತರಾಜು, ರೈತಮುಖಂಡರಾದ ನಿಂಗಪ್ಪ, ಪಟೇಲ್ ಹನುಮಂತಯ್ಯ, ಚಂದ್ರುಶೇಖರ್, ವೆಂಕಟೇಶ್, ಷಡಾಕ್ಷರಿ, ರಾಮಣ್ಣ, ಬುಡಾನ್ ಸಾಬ್, ಬಷೀರು, ರಂಗಸ್ವಾಮಯ್ಯ, ಗಂಗಾಧರಯ್ಯ, ಶಂಕರಯ್ಯ ಇತರರು ಇದ್ದರು.