ಹುಣಸನಹಳ್ಳಿಯಲ್ಲಿ ರೈತ ಸಂಘದ ಶಾಖೆ ಆರಂಭ : ಸರ್ಕಾರದ ಯೋಜನೆಗಳನ್ನು ಪಡೆಯಲು ರೈತರು ಲಂಚ ಕೊಡಬೇಡಿ : ಚೀಲೂರು ಮುನಿರಾಜು
ಕನಕಪುರ : ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಗ್ರಾಮ ಶಾಖೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು ಉದ್ಘಾಟಿಸಿದರು.
ಮುನಿರಾಜು ಮಾತನಾಡಿ, ‘ರಾಜ್ಯದ ಗಡಿಭಾಗವಾಗಿರುವ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗಿವೆ. ರೈತರ ಸಮಸ್ಯೆಗಳನ್ನು ರೈತರೇ ಇಂದು ಪರಿಹರಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ರೈತ ಸಂಘವನ್ನು ನಾವು ಇಲ್ಲಿ ಬಲಪಡಿಸಬೇಕಿದೆ’ ಎಂದು ತಿಳಿಸಿದರು.
ಸರ್ಕಾರದ ಯೋಜನೆಯನ್ನು ಪಡೆಯಲು ಯಾರು ಲಂಚ ಕೊಡಬೇಡಿ. ಸರ್ಕಾರವು ರೈತರಿಗೆ ಮತ್ತು ಕಂದಾಯ ಇಲಾಖೆಗೆ ಸೇರಿದ ಎಲ್ಲಾ ದಾಖಲಾತಿ ಮತ್ತು ಸೇವೆಗಳನ್ನು ಗ್ರಾಮ ಒನ್ ಅಡಿಯಲ್ಲಿ ಮನೆ ಬಾಗಿಲಿಗೆ ಕೊಡುತ್ತಿದೆ. ಅಗತ್ಯ ಸವಲತ್ತು ಮತ್ತು ಸೌಕರ್ಯಗಳು ಇಂದು ಗ್ರಾಮ ಪಂಚಾಯಿತಿಯಲ್ಲೇ ದೊರೆಯುತ್ತವೆ. ಅವುಗಳ ಬಗ್ಗೆ ತಿಳಿದುಕೊಂಡು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರೈತ ಸಂಘದ ನೂತನ ಗ್ರಾಮ ಶಾಖೆಗೆ ಹಲವು ರೈತ ಮುಖಂಡರನ್ನು ಸೇರ್ಪಡೆ ಮಾಡಿಕೊಂಡರು. ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಗ್ರಾಮ ಶಾಖೆಯ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.