ಏ.1 ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ಡಾ. ಶಿವಕುಮಾರಸ್ವಾಮೀಜಿ ಅವರ ಜಯಂತಿಗೆ ರಾಮನಗರ ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವಹಿಸಿ : ಲೋಹಿತ್ ಕುಮಾರ್ ಮನವಿ

ರಾಮನಗರ : ತುಮಕೂರಿನ ಸಿದ್ಧಗಂಗಾ ಮಠದ ಡಾ. ಶ್ರೀ. ಶಿವಕುಮಾರ ಸ್ವಾಮೀಜಿ ಅವರ ಜಯಂತಿಯನ್ನು ಏ.1 ರಂದು ತುಮಕೂರು ಸಿದ್ದಗಂಗಾ ಮಠದಲ್ಲಿ ಆಚರಿಸಲಾಗುತ್ತಿದ್ದು, ರಾಮನಗರ ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ಮುಖಂಡ ಮತ್ತು ಬಿಡದಿ ಪುರಸಭೆ ಸದಸ್ಯ ಲೋಹಿತ್ ಕುಮಾರ್ ಮನವಿ ಮಾಡಿದರು.
ನಗರದ ಅರಳೇಪೇಟೆಯ ಶ್ರೀ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕರೋನಾ ಪ್ರಯುಕ್ತ ಡಾ. ಶ್ರೀ. ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಆಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ.
ಈ ವರ್ಷ ತುಮಕೂರಿನ ಮಠದ ಆವರಣದಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಲು ಶ್ರೀಮಠ ಮತ್ತು ಭಕ್ತವೃಂದ ನಿರ್ಧರಿಸಿದೆ. ಜಾತಿ-ಮತ, ಧರ್ಮಗಳನ್ನು ಮೆಟ್ಟಿ ನಿಂತು ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಜಿಲ್ಲೆಯಲ್ಲಿ ಜನಿಸಿದ ಮಹಾನ್ ಚೇತನಕ್ಕೆ ಭಕ್ತಿ ಸಮರ್ಪಣೆ ಮಾಡಲು ಇದೊಂದು ಸುಸಮಯವಾಗಿದೆ. ಜಿಲ್ಲೆಯಿಂದ ಹೆಚ್ಚಿನ ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಸಮಾಜದ ಮುಖಂಡ ವಿದ್ವಾನ್ ಚಂದ್ರಶೇಖರಯ್ಯ ಮಾತನಾಡಿ ಅಂದು ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು, ದೇಶದ ನಾನಾ ಭಾಗಗಳ ಹಿರಿಯ ಮಠಾಧೀಶರುಗಳೂ ಭಾಗವಹಿಸುವರು, ಹೆಸರಾಂತ ಕವಿಗಳು, ಸಂಗೀತಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂದು ದಿನ ಪೂರ್ತಿ ಕಾರ್ಯಕ್ರಮ ನೀಡುವರು ಎಂದರು.
ಶಿವಕುಮಾರ ಸ್ವಾಮೀಜಿ ಅವರು ನಮ್ಮ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದವರು, ಬಡ ಕುಟುಂಬದಲ್ಲಿ ಜನಿಸಿದ್ದ ಅವರು ವ್ಯಾಸಂಗಕ್ಕಾಗಿ ತುಮಕೂರಿನ ಮಠಕ್ಕೆ ತೆರಳಿದ್ದರು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಠದ ಸ್ವಾಮೀಜಿ ಆಗಿದ್ದರು, ತಾವು ವಿದ್ಯಾಭ್ಯಾಸ ಮಾಡಲು ಅನುಭವಿಸಿದ ಕಷ್ಟ ಇತರೆ ವಿದ್ಯಾರ್ಥಿಗಳಿಗೆ ಆಗಬಾರದು ಎಂಬ ದೃಷ್ಟಿಯಿಂದ ಮಠದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. 40 ವಿದ್ಯಾರ್ಥಿಗಳಿದ್ದ ಶಿಕ್ಷಣ ಸಂಸ್ಥೆ ಈಗ 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಸ್ವಾಮೀಜಿಗೆ ಭಕ್ತಿ ಸಮರ್ಪಣೆ ಮಾಡಲು ಇದೊಂದು ಸುಸಮಯ ಎಂದರು.
ಕಾರ್ಯಕ್ರಮಕ್ಕೆ ಬಸ್ ವ್ಯವಸ್ಥೆ : ರಾಮನಗರ ತಾಲೂಕಿನಿಂದ ಏಪ್ರಿಲ್ ಒಂದರಂದು ನಡೆಯುವ ಕಾರ್ಯಕ್ರಮಕ್ಕೆ ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟದ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಒಕ್ಕೂಟದ ಪದಾಧಿಕಾರಿಗಳು ಈ ಸಂಧರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರಾಮನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್. ನಾಗರಾಜು, ಪೋಲೀಸ್ ರುದ್ರೇಶ್, ರಾಜಶೇಖರಯ್ಯ, ಶಿವಸ್ವಾಮಿ, ರುದ್ರದೇವರು, ಯಜಮಾನ್ ಪುಟ್ಟಮಲ್ಲಯ್ಯ, ಮಹದೇವಯ್ಯ, ಶಿವಕುಮಾರ್ ಸಿದ್ಧಲಿಂಗಮೂರ್ತಿ, ಪ್ರಭುಸ್ವಾಮಿ, ಚಂದ್ರಶೇಖರ್, ಮಹೇಶ್, ಗಿರೀಶ್, ರವಿಕುಮಾರ್, ಸುರೇಶ್, ವಿಜಯಕುಮಾರ್, ಶಿವಣ್ಣ, ನಾಗೇಶ್, ಮಾಸ್ಟರ್ ಶಿವಣ್ಣ, ಪಂಚಾಕ್ಷರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *