ಪೌರಕಾರ್ಮಿಕರನ್ನು ಗೌರವದಿಂದ ನೋಡಿ : ಪೌರಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡು ದೂರು ದಾಖಲಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ : ಎಂ. ಶಿವಣ್ಣ ಕೋಟೆ ಎಚ್ಚರಿಕೆ

ರಾಮನಗರ : ಪೌರಕಾರ್ಮಿಕರು ವೃತ್ತಿ ಕೂಡ ಗೌರವಯುತವಾದ ವೃತ್ತಿ ಅವರನ್ನು ಗೌರವಿಸಿ. ಒಂದು ದಿನ ಅವರು ಸ್ವಚ್ಛತೆ ಮಾಡುವ ಕೆಲಸ ನಿಲ್ಲಿಸಿದರೇ ಎಲ್ಲರಿಗೂ  ತೊಂದರೆ ತಿಳಿಯುತ್ತದೆ. ಪೌರಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡು ದೂರು ದಾಖಲಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಎಚ್ಚರಿಕೆ ನೀಡಿದರು.

ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೇರಪಾವತಿ ಪೌರಕಾರ್ಮಿಕರಿಗೆ ಅವರಿಗೆ ನೀಡಲಾಗುತ್ತಿರುವ ವೇತನದಲ್ಲಿ ಪಿ.ಎಫ್ ಹಾಗೂ ಇತರೆ ಸೌಲಭ್ಯಗಳು ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರ ಏಜೆನ್ಸಿಗಳಿಗೆ ಬಿಲ್ ಪಾವತಿ ಮಾಡಬೇಕು. ಪ್ರತಿ ಮಾಹೆ ಅವರಿಗೆ ನೀಡಲಾಗುತ್ತಿರುವ ವೇತನದ ವಿವರದ ಒಂದು ಪ್ರತಿಯನ್ನು ಒದಗಿಸುವಂತೆ ತಿಳಿಸಿದರು.

ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ವತಿಯಿಂದ ನೇರ ಸಂವಾದವನ್ನು ನಡೆಸಲಾಗುತ್ತಿದ್ದು, ಪೌರಕಾರ್ಮಿಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು ಎಂದು ತಿಳಿಸಿದರು.

ಪೌರಕಾರ್ಮಿಕ ಮಹಿಳೆಯರು ತಮಗೆ ಇರುವ ಸಮಸ್ಯೆಗಳ ತಿಳಿಸಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಗೃಹ, ಹಬ್ಬದ ದಿನಗಳಲ್ಲಿ ರಜೆ ಸೇರಿದಂತೆ ಹಲವಾರು ಸಮಸ್ಯೆಗಳು ಇರುತ್ತದೆ. ಅವುಗಳನ್ನು ಆಯೋಗದ ಗಮನಕ್ಕೆ ತರಬೇಕು ಎಂದರು.

ಜಿಲ್ಲಾ ಜಗೃತ ಸಮಿತಿ ಸದಸ್ಯ ನಾಗರಾಜು ಮಾತನಾಡಿ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಪೊಲೀಸ್ ಇಲಾಖೆಯಲ್ಲಿ ನೀಡಲಾಗುವ ಹೆಲ್ತ್ ಕಾರ್ಡ್ ರೀತಿ ಪೌರಕಾರ್ಮಿಕರಿಗೆ ನೀಡಬೇಕು. ಅವರ ಕುಟುಂಬಕ್ಕೂ ಸಹ ಆರೋಗ್ಯ ವಿಮೆ ಒದಗಿಸಬೇಕು. ಪೌರಕಾರ್ಮಿಕರಿಗೆ ಜಿ-1, ಜಿ-2 ರೀತಿ ಮನೆ ನೀಡುವ ಬದಲು 30*40 ಅಡಿ ನಿವೇಶನ ನೀಡಬೇಕು ಇದರಿಂದ ಅವರು ಭೂ ಮಾಲೀಕರಾಗುತ್ತಾರೆ. ಪೌರಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತೆ ಮನವಿ ಸಲ್ಲಿಸಿದರು.

ನೇರಪಾವತಿ ಪೌರಕಾರ್ಮಿಕ ಜಿಲ್ಲಾಧ್ಯಕ್ಷ ಛಲಪತಿ ಮಾತನಾಡಿ 2ನೇ ಹಂತದ ನೇರ ಪಾವತಿ ಪೌರಕಾರ್ಮಿಕರನ್ನು ಖಾಯಂ ಮಾಡಬೇಕು. ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಲಭ್ಯವಿರುವ ಸರ್ಕಾರಿ ಭೂಮಿ ಗುರುತಿಸಿ, ನೇರ ವೇತನ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು. ನೇರ ಪಾವತಿ ಪೌರಕಾರ್ಮಿಕರ ಬೆಳಗಿನ ಉಪಾಹಾರಕ್ಕೆ ನಿಗಧಿಪಡಿಸಿರುವ ರೂ. 20 ರಿಂದ ರೂ. 50 ಕ್ಕೆ ಹೆಚ್ಚಳ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಪೌರಕಾರ್ಮಿಕರಿಗೆ ಇರುವ ನಿವೇಶನ ಹಂಚಿಕೆ, ಆರೋಗ್ಯ ವಿಮೆ, ವೈದ್ಯಕೀಯ ವೆಚ್ಚ ಮರುಪಾವತಿ, ಪೌರಕಾರ್ಮಿಕರಿಗೆ ತರಬೇತಿ ಕಾರ್ಯಕ್ರಮಗಳ ಆಯೋಜನೆಯ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರಿಹರಿಸಿಕೊಳ್ಳಬಹುದು. ಪೌರಕಾರ್ಮಿಕರ ಹುದ್ದೆ ಖಾಯಂಗೊಳಿಸುವ ಬಗ್ಗೆ, ಉಪಹಾರಕ್ಕೆ ನಿಗಧಿಪಡಿಸಿರುವ ದರ ಹೆಚ್ಚಳದ ಬಗ್ಗೆ ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಅಧಿಕಾರಿಗಳು ನಿಯಮ ತಿಳಿದುಕೊಳ್ಳಿ :

 ಮ್ಯಾನುಯಲ್ ಸ್ಕಾ್ಯವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013 ರ ಕಾಯ್ದೆ ಹಾಗೂ ನಿಯಮಗಳನ್ನು ಅಧಿಕಾರಿಗಳು ತಿಳಿದುಕೊಂಡು ಕಾರ್ಯನಿರ್ವಹಿಸಬೇಕು. ಇದನ್ನು ಲಘುವಾಗಿ ಪರಿಗಣಿಸಿ ಕಾಯ್ದೆ ಉಲ್ಲಂಘಿಸಿದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.

ವಿಶ್ರಾಂತಿ ಕೊಠಡಿ: ಪೌರಕಾರ್ಮಿಕರು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ವಿಶ್ರಾಂತಿ ಕೊಠಡಿಯ ಅವಶ್ಯಕತೆ ಇದ್ದು, ಪೌರಕಾರ್ಮಿಕರ ಸಂಖ್ಯೆಯ ಆಧಾರದ ಮೇಲೆ ವಿಶ್ರಾಂತಿ ಕೊಠಡಿಗಳನ್ನು ಆದ್ಯತೆ ಮೇಲೆ ಒದಗಿಸಬೇಕು. ವಿಶ್ರಾಂತಿ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರಿ ಭೂಮಿ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಅವರಿಗೆ ಮಾಸ್ಟರ್ ಹೆಲ್ತ್ ಚೆಕ್ ಅಪ್ ಮಾಡಿಸುವಾಗ ಬಿ.ಪಿ, ಸಕ್ಕರೆ ಖಾಯಿಲೆ ಪರೀಕ್ಷೆಯೊಂದಿಗೆ ಎಕೋ- ಕಾರ್ಡಿಯೋಗ್ರಾಮ್, ಟಿ.ಎಂ.ಟಿ ಅಂತಹ ಪರೀಕ್ಷೆಯನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು ಎಂದರು.

ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗಿ ಎಫ್.ಐ.ಆರ್ ಆಗುವ ಕೇಸ್‌ಗಳ ವಿವರವನ್ನು ಪೊಲೀಸ್ ಇಲಾಖೆಯವರು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಇದರಿಂದ ಅವರಿಗೆ ನೀಡಬೇಕಿರುವ ಪರಿಹಾರದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕ್ರಮ ವಹಿಸಲಿದೆ ಎಂದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಆಪ್ತ ಕಾರ್ಯದರ್ಶಿ ರಘು ಅವರು ಮಲ ಹೊರುವ ಪದ್ಧತಿಯು ಒಂದು ಅಮಾನವೀಯ ಪದ್ಧತಿಯಾಗಿದ್ದು, ಇನ್ನು ಜೀವಂತವಾಗಿರುವುದರಿಂದ ನೈರ್ಮಲ್ಯ ರಹಿತ ಶೌಚಾಲಯಗಳು ಇನ್ನು ಅಸ್ತಿತ್ವದಲ್ಲಿರುವುದರಿಂದ ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಾಗೂ ಮ್ಯಾನ್ಯುಯಲ್ ಸ್ಕಾ್ಯವೆಂಜಿಂಗ್ ಕೆಲಸಗಳಿಂದ ಅವರಿಗೆ ಆಗಿರುವ ಗತ ಕಾಲದ ಅನ್ಯಾಯವನ್ನು ಅಗೌರವ ಬದುಕನ್ನು ಸರಿಪಡಿಸುವುದಕ್ಕೆ ಅವರು ಗೌರವಯುತ ಬದುಕನ್ನು ನಡೆಸುವುದಕ್ಕೆ ಅವರಿಗೆ ಪುನರ್ವಸತಿಯನ್ನು ಕಲ್ಪಿಸುವ ಉದ್ದೇಶವನ್ನು ಮ್ಯಾನ್ಯುಯಲ್ ಸ್ಕಾ್ಯವೆಂರ‍್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ಹೊಂದಿದೆ.

ಎಂ.ಎಸ್ ಕಾಯ್ದೆ 2013ರ ನಿಯಮ 3 ರ ಪ್ರಕಾರ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ನೇಮಕ ಮಾಡಿದ ಯಾವುದೇ ವ್ಯಕ್ತಿಗೆ ಆತನ ಉದ್ಯೋಗದಾತನು ರಕ್ಷಣಾತ್ಮಕ ಕವಚ ಮತ್ತು ಸುರಕ್ಷತಾ ಸಾಧನಗಳನ್ನು ಒದಗಿಸಬೇಕು ಎಂದು ತರಬೇತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರ ಸ್ವಾಮಿ, ಉಪವಿಭಾಗಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್, ರಾಮನಗರ ನಗರಸಭೆ ಆಯುಕ್ತ ನಂದ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಲಿತಾ ಬಾಯಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *