ಕ್ರಿಕೆಟ್ ಬೆಟ್ಟಿಂಗ್ ಕೋರ ಶ್ರೀಲಂಕಾಗೆ ಓಡಿಹೋದ, ಮೈತ್ರಿ ಸರಕಾರ ಬೀಳಿಸಲು ಕೆಲಸ ಮಾಡಿದ : ಎಚ್.ಡಿ. ಕುಮಾರಸ್ವಾಮಿ

ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಭಾಷಣ

ಇವಿಎಂಗಳ ಮೇಲಿನ ಅನುಮಾನವನ್ನು ಆಯೋಗವೇ ನಿವಾರಿಸಬೇಕು ಎಂದು ಆಗ್ರಹ

ಆಯೋಗದಲ್ಲಿ ನ್ಯೂನತೆಗಳಿವೆ

ಬೆಂಗಳೂರು: ಇವಿಎಂ ( ಎಲೆಕ್ಟ್ರಾನಿಕ್ ಮತಯಂತ್ರ) ಕಳವಿನ ಬಗ್ಗೆ ಉತ್ತರದಾಯಿತ್ವ ಯಾರದ್ದು ಎಂದು ಖಾರವಾಗಿ ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ದೇಶದಲ್ಲಿ ಅತ್ಯಂತ ಗಂಭೀರವಾಗಿ ಚರ್ಚೆ ಮಾಡಬೇಕಿದೆ ಎಂದರು.

ಅಲ್ಲದೆ, ಇವಿಎಂಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಹೊರಬಂದಾಗ ಆ ಫಲಿತಾಂಶದ ಬಗ್ಗೆ ಅನುಮಾನ ಪಡುವ ಪರಿಸ್ಥಿತಿ ಇದೆ. ಇದನ್ನು ಚುನಾವಣಾ ಆಯೋಗ ಸರಿ ಮಾಡಬೇಕು, ಇಂಥ ಅನುಮಾನಗಳನ್ನು ಅದು ನಿವಾರಿಸಬೇಕು ಎಂದು ಅವರು ಆಗ್ರಹಪಡಿಸಿದರು.

ವಿಧಾನಸಭೆಯಲ್ಲಿ ಇಂದು ಚುನಾವಣಾ ಸುಧಾರಣೆಗಳ ವಿಷಯದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದರು. ಬಹುಮುಖ್ಯವಾಗಿ ಅವರು ಹೇಳಿದ ಅಂಶಗಳಿವು.

ಶಾಸಕರಷ್ಟೇ ಉತ್ತರದಾಯಿಗಳು:

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯದ ವಿಚಾರವಾಗಿ ಸದನದಲ್ಲಿ ಎರಡು ದಿನ ಕಾಲ ಚರ್ಚೆಗೆ ಅವಕಾಶ ನೀಡಲಾಗಿದೆ. ನಾವು ನಾಡಿನ ಜನರಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಇವತ್ತು ಸಂವಿಧಾನದ ಇತರೆ ಅಂಗಗಳು ಸಮಾಜಕ್ಕೆ ಏನೇ ಸಮಸ್ಯೆ ಆದರೂ ಉತ್ತರದಾಯಿ ಆಗಲ್ಲ. ಆದರೆ, ಕಾರ್ಯಾಂಗವಷ್ಟೆ ಉತ್ತರದಾಯಿ ಆಗಿರುತ್ತದೆ. ಅದಂದರೆ, ಶಾಸಕರು ಉತ್ತರದಾಯಿ ಆಗಿರುತ್ತಾರೆ.

ಫಲಿತಾಂಶದ ಬಗ್ಗೆ ಅನುಮಾನ

ಚುನಾವಣಾ ಆಯೋಗದಲ್ಲಿರುವ ನ್ಯೂನ್ಯತೆಗಳ ಬಗ್ಗೆ ಹೆಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ಸುಧೀರ್ಘ ಚರ್ಚೆ ಮಾಡಿದ್ದಾರೆ. ಇವಿಎಂ ಕಳವಿಗೆ ಯಾರು ಉತ್ತರದಾಯಿತ್ವರು? ಇದರ ಹೊಣೆಯನ್ನು ಜನಪ್ರತಿನಿದಿಗಳೇ ಹೊರಬೇಕಾ ಅನ್ನುವುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇವತ್ತು ಮತಯಂತ್ರಗಳ ಮತದಾನದ ಫಲಿತಾಂಶ ಬಂದಾಗ ಅಭ್ಯರ್ಥಿಗಳು ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಚುನಾವಣಾ ಆಯೋಗ ಸರಿಪಡಿಸಬೇಕು. ಇವುಗಳ ಬಗ್ಗೆ ಬಹಳ ಗೊಂದಲ ಇದೆ.

ಪ್ರತಿ ಚುನಾವಣೆ ಬಂದಾಗಲೂ ಇವಿಎಂ ಬಗ್ಗೆ ಮಾತನಾಡುತ್ತೇವೆ. ಇದನ್ನು ಎಷ್ಟು ವರ್ಷ ಅಂತ ಮುಂದುವರೆಸಿಕೊಂಡು ಹೋಗಬೇಕು? ನಾವೆಲ್ಲರೂ ಮುಕ್ತವಾಗಿ ಚರ್ಚೆ ಮಾಡಬೇಕಾದ ವಿಚಾರ ಇದು. ಇದು ಚುನಾವಣಾ ಪದ್ಧತಿ ಸುಧಾರಣೆ ತರಲು ಮೊದಲ ಹೆಜ್ಜೆಯಾಗಿದೆ. ಮೊದಲ ಚುನಾವಣೆ ಆರಂಭವಾದಾಗಿನಿಂದ ಹಿಡಿದು ಈವರೆಗೆ 17 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ನಾವು ಯಾರನ್ನೂ ಬೊಟ್ಟು ಮಾಡಿ ತೋರಿಸಲು ಆಗಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ನೋಡಿದ್ದೆವು.1972-73 ಚುನಾವಣೆಯಲ್ಲಿ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಆದಾಗ ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು. ಚುನಾವಣೆಯ ಎರಡು ದಿನ ಮೊದಲು ಅಭ್ಯರ್ಥಿಗಳು ಆಮಿಷ ಒಡ್ಡಬಾರದು ಅಂತ ರಸ್ತೆಗೆ ಅಡ್ಡವಾಗಿ ಕಲ್ಲು, ಮರ ಹಾಕುತ್ತಿದ್ದರು. ಈಗ ಅಂತ ವಾತಾವರಣ ಇಲ್ಲ.

ಹಳ್ಳಿಗರ ಬಗ್ಗೆ ಲಘುವಾಗಿ ಮಾತನಾಡಬೇಡಿ:

ನಿನ್ನೆ ಅನಕ್ಷರಸ್ಥರ ಬಗ್ಗೆ ಯಾರೋ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸೋದು ರೈತರು ಮತ್ತು ಕೂಲಿಯ ವರ್ಗ ಮಾತ್ರ. ಸೌಲಭ್ಯ ಪಡೆಯಲು, ಧ್ವನಿ ಎತ್ತುವ ಜನರ ಸಂಖ್ಯೆ ಕಡಿಮೆ. ಲಘುವಾಗಿ ಮಾತನಾಡುವ ವರ್ಗ ಚುನಾವಣೆಗೆ ಬರೋದು ಕಡಿಮೆ. ಚುನಾವಣೆ ಬಂದಾಗ ವಿಶ್ವಾಸದಿಂದ ಬರುವ ಜನ ಕೂಲಿ ವರ್ಗದ ಜನ. ಅಂದಿನ ಹಾಗೂ ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಅಂತ ನೋಡಿದ್ದೇವೆ.

ಟಿ ಎನ್ ಶೇಷನ್ ಅವರು ಚುನಾವಣೆಯ ವ್ಯವಸ್ಥೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ಭಯದಿಂದ ಚುನಾವಣೆ ನಡೆಸುವಂತೆ ಮಾಡಿದರು. ನಂತರ ಹಾಗೆ ಯಾರೂ ಕೆಲಸ ಮಾಡಲಿಲ್ಲ. ಏನೇ ಮಾಡಿದರೂ ಎಲ್ಲರೂ ರಾಜಕಾರಣಿಗಳ ವಿರುದ್ಧವೇ ಬೊಟ್ಟು ಮಾಡುತ್ತಾರೆ. ಹಾಗಾದರೆ; ನ್ಯಾಯಾಧೀಶರು, ಸಮಾಜವಾದಿಗಳು, ಪತ್ರಕರ್ತರ ಬಗ್ಗೆ ಪ್ರಶ್ನೆ ಮಾಡೋದು ಯಾರು? ಟಿ.ವಿ ಚಾನಲ್‌ಗಳೇ ದೂರು ತೆಗೆದುಕೊಳ್ಳುತ್ತಾರೆ, ಚರ್ಚೆ ಮಾಡುತ್ತಾರೆ, ಅವರೇ ತೀರ್ಪು ನೀಡುತ್ತಾರೆ.

ಮಾಧ್ಯಮಳತ್ತ ಬೊಟ್ಟು:

ಕಳೆದ ಎರಡೂ ಮೂರು ತಿಂಗಳಿಂದ ಇದೇ ನಡೆಯುತ್ತಿದೆ. ಮಾಧ್ಯಮ ವರದಿಗಳು ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿವೆ. ವಾಹಿನಿಗಳಿಗೆ TRP ಅಷ್ಟೇ ಮುಖ್ಯ. ಸಮಾಜದಲ್ಲಿ ದೊಡ್ಡ ಬಿರುಕನ್ನೇ ಸೃಷ್ಟಿ ಮಾಡಲಾಗಿದೆ. ಮಾದ್ಯಮ ಒಂದೇ ಅಲ್ಲ, ಎಲ್ಲರೂ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಇವತ್ತು ವ್ಯವಸ್ಥೆ ಸರಿಪಡಿಸೋದು ಜನ ಪ್ರತಿನಿಧಿಗಳು ಮಾತ್ರ ಅಲ್ಲ, ನಾಡಿನ ಆರೂವರೆ ಕೋಟಿ ಜನರ ಕೈಯಲ್ಲಿದೆ.

ಶ್ರೀಲಂಕಾಗೆ ಓಡಿ ಹೋದ:

ಅಭ್ಯರ್ಥಿಗಳು ಪೂರ್ವ ಚರಿತ್ರೆ ನೀಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಬೆಟ್ಟಿಂಗ್ ನಡೆಸುವ ವಿಚಾರಕ್ಕೆ ಬ್ರೇಕ್ ಬೀಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೆ ನಾನು. ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದವನ ಹಿಡಿಯಲು ಹೋದಾಗ, ಶ್ರೀಲಂಕಾಗೆ ಓಡಿಹೋದ. ಅವನೇ ಮೈತ್ರಿ ಸರಕಾರ ಬೀಳಿಸಲು ಎಲ್ಲಾ ರೀತಿಯ ಕೆಲಸ ಮಾಡಿದ. ಅದರ ಲಾಭವನ್ನೂ ಯಾರೆಲ್ಲಾ ಪಡೆದುಕೊಂಡರು ಅಂತ ಮಾಧ್ಯಮಗಳಲ್ಲಿ ಚರ್ಚೆ ಮಾಡಲ್ಲ.

ಇನ್ನು; ಲಂಚ, ಕಮೀಷನ್ ಪಡೆಯುವವನ ಮಾತ್ರವಲ್ಲದೆ, ಕೊಡುವವನ ಮೇಲೂ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ಸದಸ್ಯರು ನಮ್ಮ‌ತೋಟಕ್ಕೆ ಬಂದಿದ್ದರು. ನರೇಗಾ ಕೆಲಸ ಮಾಡಲು ನಮ್ಮ ಹೆಂಡತಿ ಒಡವೆ ಇಟ್ಟು ಕೆಲಸ ಮಾಡಿದೆವು. ಆದರೆ ಹಣ ನೀಡಿಲ್ಲ,‌ ಈಗ ಮನೆಲ್ಲಿ ಊಟ ಹಾಕುತ್ತಿಲ್ಲ. ಕೊನೆಗೆ ನಾವು ಊರಿಗೆ ಹೋಗಲ್ಲ, ಇಲ್ಲೇ ತೋಟದಲ್ಲಿ ಕೆಲಸ ಮಾಡುತ್ತೇವೆ ಅಂತ ನಿರ್ಧಾರಕ್ಕೆ ಬಂದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಇಲಾಖೆಯಲ್ಲಿ ಹೀಗಾಗಿದೆ.

ಚುನಾವಣೆಯನ್ನು ನಿಯಮಿತ ಹಣದಲ್ಲಿ ಮಾಡಲು ಆಯೋಗ ಸೂಚಿಸಿದೆ. ಅದು ನಿಜಕ್ಕೂ ಸಾಧ್ಯವಾ? ಅದನ್ನು ಲೆಕ್ಕ ಹಾಕಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ನಾವು ಸಭೆ ಸಮಾರಂಭ ಮಾಡಿದಾಗ, ತಲೆಗಳನ್ನು ಲೆಕ್ಕ‌ ಹಾಕುತ್ತಾರೆ.

300 ವರ್ಷಗಳು ಬೇಕು:

ನ್ಯಾಯಾಂಗ ವ್ಯವಸ್ಥೆ ಕೂಡ ಹದಗೆಟ್ಟಿದೆ. ಈ ದೇಶದಲ್ಲಿ ಇರುವ ಕೋರ್ಟ್ ಕೇಸ್ ಗಳು ಬಗೆಹರಿಸಲು 300 ವರ್ಷಗಳು ಬೇಕು. ಅದಕ್ಕೆ ನಮ್ಮ ಮೊಮ್ಮಕ್ಕಳ ಕಾಲ ಬರಬೇಕು. ಒಂದು ಡಿ-ನೋಟಿಫಿಕೇಷನ್ ಹಲಗೆ ವಡೇರಹಳ್ಳಿಯಲ್ಲಿ ಆಗಿತ್ತು. ಹಿಂದಿನ ಸಿಎಂ ಜತೆ ಕೆಲಸ ಮಾಡ್ತಿದ್ದ ಅಧಿಕಾರಿ ಫೈಲ್ ಕ್ಲಿಯರ್ ಮಾಡುವಂತೆ ತಿಳಿಸಿದ್ದರು. ಸರಿ ಇದ್ರೆ ಮಾಡೋಣ ಫೈಲ್‌ತನ್ನಿ ಅಂತ ಹೇಳಿ, ಸಹಿ ಹಾಕಿದೆ. ಆ ಪ್ರಕರಣವೂ ಇನ್ನೂ ಕೂಡ ಬಗೆಹರಿದೇ ಇಲ್ಲ. ಆಗ ಕುಮಾರಸ್ವಾಮಿಗೆ ಮುಳುವು, ಜೈಲಿಗೆ ಹೋಗ್ತಾರೆ ಅನ್ನುವ ರೀತಿ ಮಾತನಾಡಿದರು.

ಭ್ರಷ್ಟಾಚಾರ ಅನ್ನೋದು ಮಿತಿಮೀರಿದೆ. ಬಡವರು ಕೆಲಸ ಮಾಡಿಸಿಕೊಳ್ಳಬೇಕಾದರೆ ಎಂಟು ಸಾವಿರ ಮಿಲಿಯನ್ ಲಂಚ ಕೊಟ್ಟಿರೋದು ದಾಖಲಾಗಿದೆ. ಪ್ರತೀ ಇಲಾಖೆಯಲ್ಲೂ ಮಿಲಿಯನ್ ಗಟ್ಟಲೆ ಲಂಚ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಲಂಚ ನೀಡಲಾಗಿದೆ. ಇದು ಇಂಡಿಯಾ ಕರೆಕ್ಷನ್ ಸರ್ವೆ ನೀಡಿರುವ ವರದಿಯಲ್ಲಿ ಉಲ್ಲೇಖ ಆಗಿದೆ.*

2004ರ ನಂತರ ನಾನು ರಾಜಕಾರಣಕ್ಕೆ ಬಂದವನು. ವಿಧಾನ ಪರಿಷತ್ ಚುನಾವಣೆ ಹೇಗೆ ನಡೆಯುತ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯೇ ಉದಾಹರಣೆಗೆ ನೋಡಿದ್ದೇವೆ. ರಾಜ್ಯಸಭಾ ಚುನಾವಣೆಯನ್ನೂ ನೋಡಿದ್ದೇವೆ.ಯಾರ ಮನೆ ಹಾಳು ಮಾಡಿದರೂ ಸರಿ, ಗೆಲ್ಲಬೇಕು ಅಷ್ಟೇ. ಚುನಾವಣೆ ಗೆಲ್ಲೋವರೆಗೂ ಒಂದು ಹಂತ ಅಷ್ಟೇ. ನಂತರ ಐದು ವರ್ಷ ಉಳಿಯಬೇಕಲ್ಲ, ಅದು ಬಾರೀ ಕಷ್ಟ. ದೇವಸ್ಥಾನ, ಮದುವೆ, ಸ್ಕೂಲ್ ಫೀಸ್ ಎಲ್ಲದಕ್ಕೂ ಜನ ಬರುತ್ತಾರೆ. ಜಾಹೀರಾತು ವಿಚಾರ ಕೂಡ ದೊಡ್ಡ ಸಮಸ್ಯೆ ಆಗಿದೆ.

ಶಾಸಕರಾದವರು ಪರವಾಗಿಲ್ಲ,‌ ಒಂದಷ್ಟು ಹಣ ಬರುತ್ತದೆ. ಆದರೆ ಎಮ್ಮೆಲ್ಸಿ ಆಗುವವರು 25-30 ಕೋಟಿ ಖರ್ಚು ಮಾಡಿ ಬರುತ್ತಾರೆ. ಪಂಚಾಯತಿ ಅಧ್ಯಕ್ಷ ಆಗಲು ಒಂದು ಮತಕ್ಕೆ 500-600 ಲೆಕ್ಕದಂತೆ 1-2 ಕೋಟಿ ಖರ್ಚು ಮಾಡುತ್ತಿದ್ದಾರೆ. ಅವರೇ ಅಷ್ಟು ಖರ್ಚು ಮಾಡುವಾಗ, ನಮ್ಮ ಚುನಾವಣೆ ಹೇಗೆ ಮಾಡಬೇಕು? ಇನ್ನು ಎಲ್ಲಾ ಚುನಾವಣೆ ನಾವೇ ನಡೆಸಬೇಕು. ಎಲ್ಲದಕ್ಕೂ ಹಣ ಕೊಡಿ ಅಂತ ಕೇಳುತ್ತಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅದರಲ್ಲಿ ಯಾವುದೇ ಧರ್ಮ ಅಡ್ಡ ಬರೋದಿಲ್ಲ.

ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡಲಾಗುತ್ತಿದೆ. ಈಗ ಧರ್ಮ‌ ಧರ್ಮದ ನಡುವೆ ಸಂಘರ್ಷ ತರುವ ಕೆಲಸ ಆಗುತ್ತಿದೆ. ಇದನ್ನು ಹೇಗೆ ನಿಲ್ಲಿಸ್ತೀರಾ ಹೇಳಿ? ನಮ್ಮ‌ ತಂದೆಯವರು ಚುನಾವಣೆ ನಡೆಸುವಾಗ ಅಭ್ಯರ್ಥಿಗಳು ಕೊಡುವ ಐದು ಸಾವಿರ ಹಣವನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕಾರ ಮಾಡ್ತಿದ್ದರು. ಈಗ ಐದು ಕೋಟಿ ಕೊಟ್ಟರೂ ಸಾಲುವುದಿಲ್ಲ. ಅಂತ ಪರಿಸ್ಥಿತಿ ಬಂದಿದೆ.

Leave a Reply

Your email address will not be published. Required fields are marked *