ಬಿಡದಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ ; ಜಾಗಟೆ ಬಾರಿಸಿ ; ಅಡುಗೆ ಅನಿಲ ಸಿಲಿಂಡರ್ ಸ್ಕೂಟರ್ ಗೆ ಹೂವಿನ ಹಾರ ಹಾಕಿ ಪ್ರತಿಭಟನೆ
ರಾಮನಗರ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ದೇಶಾದಾದ್ಯಂತ ‘ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ’ ಹಮ್ಮಿಕೊಂಡಿದೆ. ಇದರ ಅಂಗವಾಗಿ ಬಿಡದಿಯಲ್ಲಿ ಬಿಡದಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಸ್ಕೂಟರ್ ಗೆ, ಅಡುಗೆ ಅನಿಲ ಸಿಲಿಂಡರ್‌ಗೆ ಹೂವಿನ ಹಾರ ಹಾಕಿ, ಜಾಗಟೆ ಬಾರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳ ತಲುಪಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ. ಬೆಲೆ ಏರಿಕೆ ಮೂಲಕ ಪ್ರತಿದಿನ ಜನ ಸಾಮಾನ್ಯರ ಪಿಕ್ ಪಾಕೆಟ್ ಆಗುತ್ತಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್, ಬೈಕ್, ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ತಿಳಿಸಿದರು.
ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು ಎಂದು ತಿಳಿಸಿದರು.
ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ ಎಲ್ಲರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದ ಬಿಜೆಪಿ ಸರ್ಕಾರ, ತನ್ನ ಆಡಳಿತದಲ್ಲಿ ಬೆಲೆಗಳನ್ನು ಗಗನಕ್ಕೇರಿದೆ. ಆದಾಯ ಪಾತಳಕ್ಕೆ ಹೋಗಿದೆ. ಹೀಗಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ. ವಾಹನ ಸವಾರರಿಂದ ಹಿಡಿದು, ಗೃಹಿಣಿಯವರೆಗೂ ಎಲ್ಲರೂ ದಿನನಿತ್ಯ ನೋವು ಅನುಭಿಸುತ್ತಿದ್ದಾರೆ. ಈಗಾಗಲೇ ಸುಮಾರು 35 ರೂ. ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ 111 ರೂ. ಮುಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಗೋಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸಂಪತ್ ಕುಮಾರ್, ಮುಖಂಡರಾದ ಜಿ.ಎನ್. ಗಂಗಾಧರಯ್ಯ, ಪ್ರಕಾಶ್ ಚೌಕಳ್ಳಿ, ಗೋಪಿ, ಗೋಪಾಲ್, ಹುಲಿಯಪ್ಪ, ಮಂಜುಳ ಇತರರು ಪಾಲ್ಗೊಂಡಿದ್ದರು.