ಚನ್ನಪಟ್ಟಣ ತಾಲೂಕಿನಲ್ಲಿ ಒಬ್ಬ ವಿದ್ಯಾರ್ಥಿನಿಯ SSLC ಪರೀಕ್ಷೆಗೆ 23 ಸಿಬ್ಬಂದಿ ನಿಯೋಜನೆ!
ಚನ್ನಪಟ್ಟಣ : ಇಡೀ ತಾಲೂಕಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಪ್ರಸಂಗ ಶುಕ್ರವಾರ ನಡೆದಿದೆ. ಪರ್ಯಾಯ ವಿಷಯ ಆಯ್ಕೆಮಾಡಿಕೊಳ್ಳುವ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ನಗರದ ಬಿಜೆಎಲ್ ಶಾಲೆಯ ವಿದ್ಯಾರ್ಥಿನಿ ಸಿಂಚನಾ, ಈ ವಿಷಯವನ್ನು ಆಯ್ಕೆಮಾಡಿಕೊಂಡಿದ್ದಳು.
ವಿದ್ಯಾರ್ಥಿನಿಯ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷೆ ನಡೆಸಿದರು. ಅರ್ಥಶಾಸ್ತ್ರವನ್ನು ಆಯ್ಕೆಮಾಡಿಕೊಂಡ ವಿಶೇಷ ಚೇತನ ವಿದ್ಯಾರ್ಥಿನಿ ಇಡೀ ತಾಲೂಕಿಗೆ ಒಬ್ಬಳೇ ಆಗಿದ್ದರೂ, ಈ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಸಲು 23 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು ವಿಶೇಷ.

ಪರೀಕ್ಷಾ ನಿಯಮಾವಳಿಗಳ ಪ್ರಕಾರ ಪರೀಕ್ಷೆ ನಡೆಸುವ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ವಿಚಕ್ಷಣ ದಳದ ಸಿಬ್ಬಂದಿ, ಪರೀಕ್ಷಾ ಕೇಂದ್ರಕ್ಕೆ ಭದ್ರತೆ ಕಲ್ಪಿಸಲು ಪೊಲೀಸ್ ಸಿಬ್ಬಂದಿ ಹಾಗೂ ಪ್ರಶ್ನೆ ಪತ್ರಿಕೆಯನ್ನು ಸಂಗ್ರಹಿಸಲು ತಾಲೂಕು ಖಜಾನೆಯಲ್ಲಿ 3 ಸಿಬ್ಬಂದಿ ಹಾಗೂ ಅದನ್ನು ವಿತರಣೆ ಮಾಡಲು ಒಬ್ಬ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಿದೆ.
ಪರ್ಯಾಯ ಪತ್ರಿಕೆ ಏಕೆ?
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯ ನಿಯಮಾವಳಿಯಂತೆ ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯುತ್ತವೆ. ಆದರೆ ಅಂಧ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಪರೀಕ್ಷೆ ಬರೆಯಲು ಕೆಲ ದೌರ್ಬಲ್ಯಗಳು ಎದುರಾಗುವುದರಿಂದ ಅವರಿಗೆ ಪರ್ಯಾಯವಾಗಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯವನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿರುತ್ತದೆ.