ಮಹದೇಶ್ವರ ಬೆಟ್ಟ: ಯುಗಾದಿ ರಥೋತ್ಸವದ ಸಂಭ್ರಮ
ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ ನೆರವೇರಿತು.
ಬೆಳಿಗ್ಗೆ 8.33ಕ್ಕ ಸಾಲೂರು ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವದ ವಿಧಿ ವಿಧಾನಗಳು ನಡೆದವು.
ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರು ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಬೆಳಗಿದ ಬೆಲ್ಲದ ಆರತಿಯೊಂದಿಗೆ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ಜಿಲ್ಲೆ ಹೊರಜಿಲ್ಲೆ ಹಾಗೂ ತಮಿಳುನಾಡಿನಿಂದ ಬಂದಿದ್ದ ಸಹಸ್ರಾರು ಭಕ್ತರ ಮಾದಯ್ಯ, ಮಾದಪ್ಪ, ಉಘೇ ಮಾದಪ್ಪ ಮುಂತಾದ ಉದ್ಘೋಷಗಳ ನಡುವೆ ಮಾದಪ್ಪನ ತೇರು ದೇವಾಲಯದ ಸುತ್ತ ಸಾಗಿತು.
ಮಹಾರಥೋತ್ಸವ ಜರುಗಿದ ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು. ಭಕ್ತರು ಹುಲಿವಾಹನ, ರುದ್ರಾಕ್ಷಿ ಮಂಟಪ, ಬಸವವಾಹನ ಸೇವೆಗಳನ್ನು ನೆರವೇರಿಸಿ, ಪಂಜಿನ ಸೇವೆ, ಉರುಳುಸೇವೆ, ಆಲಾಂಭಾಡಿ ಬಸವೇಶ್ವರನ ಬೆಣ್ಣೆ ಸೇವೆಯನ್ನು ನೆರವೇರಿಸಿ ಮಹದೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಹಾ ರಥೋತ್ಸವದೊಂದಿಗೆ ಐದು ದಿನಗಳ ಯುಗಾದಿ ಜಾತ್ರೆಗೆ ತೆರೆ ಬಿದ್ದಿದೆ.