ಹಳೆ ಮೈಸೂರು ಭಾಗದಲ್ಲಿ ಗೆಲುವು ಅಭ್ಯರ್ಥಿಗಳನ್ನು ಸಿದ್ದಗೊಳಿಸಿ : ಅವಧಿಪೂರ್ವ ಚುನಾವಣೆಗೆ ಬೇಡ ಎಂದ ಅಮಿತ್ ಶಾ
ಬೆಂಗಳೂರು : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಬಹುದೆಂಬ ಗುಸುಗುಸು ಸುದ್ದಿಗೆ ಈಗ ಬಹುತೇಕ ತೆರೆ ಬಿದ್ದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸಂದೇಶ ರವಾನೆಯಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ನಡೆದ ಸಭೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಗುಜರಾತ್ ಜತೆಗೆ ರಾಜ್ಯದಲ್ಲೂ ಚುನಾವಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಮಿತ್ ಶಾ ಚುನಾವಣೆ ಯಾವಾಗ ನಡೆಸಬೇಕೆಂಬ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಯಾವಾಗ ನಡೆದರೂ ಫಲಿತಾಂಶ ಹೇಗಿರಬೇಕೆಂಬ ಬಗ್ಗೆ ಯೋಚಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಅಭಿವೃದ್ಧಿ ವಿಚಾರ ಹೊರತುಪಡಿಸಿ ಅನಪೇಕ್ಷಿತ ಸಂಗತಿಗಳಿಗೆ ಕರ್ನಾಟಕದಲ್ಲಿ ವಿಶೇಷ ಆಸಕ್ತಿ ನೀಡುವುದೇಕೆ ? ಅತಿಯಾದ ಕೋಮು ಪ್ರಚೋದನೆಯನ್ನು ಕರ್ನಾಟಕದ ಜನ ಸಹಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಶಾ ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡುತ್ತಿಲ್ಲ. ಅಂಥ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಸಿದ್ದಗೊಳಿಸಿ ಎಂದು ಸೂಚನೆ ನೀಡಿದ್ದಾರೆ.