ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ವತಿಯಿಂದ ಮೇದ ಬುಡಕಟ್ಟು ಮಹಿಳೆಯ ಚಿಕಿತ್ಸೆಗೆ ನೆರವು
ರಾಮನಗರ : ಗ್ರಾಮೀಣ ಆರೋಗ್ಯ ಸುಧಾರಣೆಗೆ ಸಮಾಜದ ಎಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರು ನಗರದ ಹ್ಯುಮಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಎಸ್.ಬಿ. ಉದಯಕುಮಾರ್ ತಿಳಿಸಿದರು.
ಅವರು ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಪೂಜಾರಿದೊಡ್ಡಿಯ ವಾಸಿ ಥೈರಾಯಿಡ್ ಪೀಡಿತ ಮೇದ ಬುಡಕಟ್ಟು ಮಹಿಳೆ ಚಿಕ್ಕಕಾಳಮ್ಮ ಎಂಬ ಮಹಿಳೆಗೆ ಶಸ್ತ್ರ ಚಿಕಿತ್ಸೆಗೆ ಧನಸಹಾಯವಾಗಿ ಹನ್ನೆರಡು ಸಾವಿರ ನಗದು ಹಣ ನೀಡಿ ಮಾತನಾಡಿದರು. ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುವುದಾಗಿ ಅವರು ತಿಳಿಸಿದರು.
ಕೆ.ಎಸ್.ಎಂ. ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ ಉದ್ದೇಶ ಒಳ್ಳೆಯದಿದ್ದರೆ ಸಹಾಯಕ್ಕೆ ಸಾವಿರ ಕೈಗಳಿರುತ್ತವೆ. ಹ್ಯುಮಾನಿಟಿ ಫಸ್ಟ್ ರಾಮನಗರ ಜಿಲ್ಲೆಯ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಕರ್ನಾಟಕ ಪ್ರಾಂತ ರೈತಸಂಘದ ಸಣ್ಣರಂಗಯ್ಯ ಮತ್ತು ಸಾಹಿತಿ ದೇ. ನಾರಾಯಣಸ್ವಾಮಿ ಹಾಗೂ ಚಿಕ್ಕಕಾಳಮ್ಮ ಅವರ ಮಕ್ಕಳು ಉಪಸ್ಥಿತರಿದ್ದರು.