ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಸಡ್ಡೆ : ಜೋಗಿದೊಡ್ಡಿ ಬಳಿಯ ಸೇತುವೆ ಬಿದ್ದು 5 ತಿಂಗಳಾದರೂ ದುರಸ್ತಿಯಾಗಿಲ್ಲ : ಜೀವ ಕೈಯಲ್ಲಿ ಹಿಡಿದು ಮುರಿದ ಸೇತುವೆಯಲ್ಲೇ ಸಂಚಾರ ಮಾಡುತ್ತಿರುವ ಜನರು

ರಾಮನಗರ : ಕಳೆದ ಐದು ತಿಂಗಳ ಹಿಂದೆ ಬಿದ್ದ ಬಾರಿ ಮಳೆಗೆ ಕೊಚ್ಚಿಹೋದ ಸೇತುವೆಯನ್ನು ದುರಸ್ತಿ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಮುರಿದ ಸೇತುವೆಯಲ್ಲೇ ಜನರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುತ್ತಿದ್ದಾರೆ.

ತಾಲ್ಲೂಕಿನ ಜೋಗಿದೊಡ್ಡಿ ಗ್ರಾಮದ ಬಳಿ ಹಳ್ಳಕ್ಕೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಮುರಿದು ಬಿದ್ದು 5 ತಿಂಗಳು ಕಳೆದಿದೆ. ಸೇತುವೆ ದುರಸ್ತಿ ಮಾಡದ ಕಾರಣ ಮುರಿದು ಬಿದ್ದಿರುವ ಸೇತುವೆ ಮೇಲೆಯೇ ವಾಹನ ಸವಾರರು ಸಂಚಾರ ನಡೆಸುತ್ತಿದ್ದಾರೆ.

2021ರ ನವೆಂಬರ್‌ನಲ್ಲಿ ಸುರಿದ ಬಾರಿ ಮಳೆಗೆ ಈ ಸೇತುವೆ ಮುರಿದು ಬಿದ್ದಿತ್ತು. ಮುರಿದು ಬಿದ್ದ ಸೇತುವೆಯನ್ನು ಮತ್ತೆ ನಿರ್ಮಾಣ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಸೇತುವೆ ಪಕ್ಕದಲ್ಲೇ ಇದ್ದ ಜಮೀನಿನ ಮಾಲೀಕನ ಜೊತೆಗೆ ಒಪ್ಪಂದ ಮಾಡಿಕೊಂಡು ತಾತ್ಕಾಲಿಕವಾಗಿ ಓಡಾಟ ನಡೆಸುವ ರಸ್ತೆ ನಿರ್ಮಾಣ ಮಾಡಿ ಮುರಿದು ಬಿದ್ದ ಸೇತುವೆಯ ನಿರ್ಮಾಣದ ಕೆಲಸ ಮರೆತಿದ್ದಾರೆ.

ಜೋಗಿದೊಡ್ಡಿ ಬಳಿಯ ಸೇತುವೆ

“ಖಾಸಗಿ ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯನ್ನು ಮುಚ್ಚಿರುವ ಕಾರಣ ಜನರು ಓಡಾಡಲು ರಸ್ತೆಯೇ ಇಲ್ಲದಂತಾಗಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೂ ತಂದರು ಯಾರು ಸ್ಪಂದನೆ ಮಾಡುತ್ತಿಲ್ಲ” ಎಂದು ಗ್ರಾಮದ ಜಗದೀಶ್ ಆರೋಪ ಮಾಡಿದ್ದಾರೆ.

ಜೋಗಿದೊಡ್ಡಿ ಸೇರಿದಂತೆ ಮಾಗಡಿ ಭಾಗದ ಸುಮಾರು 7 ರಿಂದ 8 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದು ಐದಾರು ತಿಂಗಳು ಕಳೆದಿದೆ. ಅಲ್ಲದೇ ಜೋಗಿದೊಡ್ಡಿ ಗ್ರಾಮದ ಜನರು ತಮ್ಮ ಜಮೀನುಗಳ ಬಳಿಗೆ ಹೋಗಲು ಹಾಗೂ ಜಾನುವಾರುಗಳಿಗೆ ಮೇವು ತರಲು 5-6 ಕಿಲೋಮೀಟರ್ ಸುತ್ತಿ ಬಳಸಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಮುರಿದು ಬಿದ್ದಾಗ, ಮುರಿದ ಸೇತುವೆ ಪಕ್ಕದ ರೈತನ ಜಮೀನಿನಲ್ಲಿ ತಿಂಗಳ ಬಾಡಿಗೆ ರೂಪದಲ್ಲಿ ಹಣ ನೀಡುವುದಾಗಿ ಹೇಳಿ 12 ಲಕ್ಷ ಖರ್ಚು ಮಾಡಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದರು. ಆದರೆ ಒಪ್ಪಂದದಂತೆ ಜಮೀನಿನ ಮಾಲೀಕನಿಗೆ ಅಧಿಕಾರಿಗಳು ಹಣ ಕೊಡದ ಹಿನ್ನೆಲೆಯಲ್ಲಿ ಜಮೀನು ಮಾಲೀಕ ತಾತ್ಕಾಲಿಕ ರಸ್ತೆಯನ್ನ ಕಿತ್ತು ಹಾಕಿದ್ದಾರೆ. ಜಮೀನು ಮಾಲೀಕನೊಂದಿಗೆ ಚರ್ಚೆ ಮಾಡಿ ಮುಚ್ಚಿರುವ ತಾತ್ಕಾಲಿಕ ರಸ್ತೆಯನ್ನು ತೆರವು ಮಾಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಹಾಗೂ ಮುರಿದು ಬಿದ್ದಿರುವ ಸೇತುವೆಯನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂದಿಸಿದ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಸಡ್ಡೆಯಿಂದ ಇಂದು 7-8 ಗ್ರಾಮದ ಜನರು ರಸ್ತೆಗಾಗಿ ಪರಿತಪಿಸುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಹೊಸ ಸೇತುವೆ ನಿರ್ಮಾಣಮಾಡಿ ಜೋಗಿದೊಡ್ಡಿ ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಬೇಕಿದೆ.

Leave a Reply

Your email address will not be published. Required fields are marked *