ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ : ಬಿ.ಎಸ್. ಗಂಗಾಧರ್
ರಾಮನಗರ : ಬೇಸಿಗೆ ಕಾಲದಲ್ಲಿ ಉಷ್ಣಾಂಶದ ವ್ಯತ್ಯಾಸದಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಬರಬಹುದು ಆದ್ದರಿಂದ ವಿದ್ಯಾರ್ಥಿಗಳು ಇದರಿಂದ ರಕ್ಷಣೆ ಪಡೆಯಬೇಕಾದರೆ ಹೆಚ್ಚಾಗಿ ಶುದ್ಧ ನೀರು ಕುಡಿಯುವುದು, ದ್ರವ ರೂಪದ ಪೌಷ್ಠಿಕ ಆಹಾರ ಸೇವಿಸಬೇಕು, ತಾಜಾ ಹಣ್ಣುಗಳಿಂದ ತಯಾರಿಸಿದ ತಂಪು ಪಾನಿಯಗಳ ಸೇವನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ತಿಳಿಸಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ದೊಂಬರದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕನಕಪುರ ತಾಲ್ಲೂಕು ಇವರ ಸಹಕಾರದೊಂದಿಗೆ ಚಿಕ್ಕಕಲ್ಬಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಕಾಲದಲ್ಲಿ ಆರೋಗ್ಯ ನಿರ್ವಹಣೆ, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆ, ಕೋವಿಡ್ ಸೋಂಕು ನಿಯಂತ್ರಣ ಮತ್ತು ಲಸಿಕೆ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಲಿನ ಉತ್ಪನ್ನಗಳಾದ ಮೊಸರು – ಮಜ್ಜಿಗೆ ಬಳಕೆ ಮಾಡಬೇಕು, ಜೊತೆಗೆ ದೇಹದ ಉಷ್ಣಾಂಶ ನಿಯಂತ್ರಿಸಲು ಖಾಧಿ ಬಟ್ಟೆಗಳನ್ನು ಧರಿಸಬೇಕು, ಮಧ್ಯಾಹ್ನದ ವೇಳೆ ಮನೆ, ಶಾಲೆ, ಮರದ ನೆರಳಿನಲ್ಲಿರ ಬೇಕು, ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ ಜೊತೆಗೆ ಬಿಸಿಯಾದ ಊಟ ಮಾಡಬೇಕು ರಸ್ತೆ ಬದಿಗಳಲ್ಲಿ ತೆರೆದಿಟ್ಟ ಹಣ್ಣುಗಳು, ತಿನಿಸುಗಳು, ತಿನ್ನಬಾರದು ಆರೋಗ್ಯದಲ್ಲಿ ಸಮಸ್ಯೆಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತವೆಂದು ಸಲಹೆ ನೀಡಿದರು.

ಜಿಲ್ಲಾ ಎಸ್.ಬಿ.ಸಿ.ಸಿ. ಸಂಯೋಜಕ ಸುರೇಶ್ ಬಾಬು ಮಾತನಾಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ವಾಂತಿ-ಬೇದಿ, ಚರ್ಮರೋಗ ಮತ್ತು ಇತರೆ ಸೋಂಕುಗಳಿಂದ ರಕ್ಷಣೆ ಪಡೆಯಬಹುದೆಂದು ತಿಳಿಸಿದರು. ಕೋವಿಡ್ ನಿಯಂತ್ರಿಸ ಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಹಾಗೂ 12 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ಕಡ್ಡಾಯವಾಗಿ ಕೋರ್ಬಿವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಆಶಾ, ತಿಪ್ಪಣ್ಣ, ಸಹ ಶಿಕ್ಷಕರಾದ ಅರ್ಚನ, ಕೃಷ್ಣಪ್ಪ, ಗಂಗಾಮಣಿ, ರಮ್ಯ, ಯಶೋಧ, ಶ್ವೇತ, ನರಸಿಂಹಮೂರ್ತಿ, ಅಡುಗೆ ಸಿಬ್ಬಂದಿ, ಹಾಗೂ ಮಕ್ಕಳು ಹಾಜರಿದ್ದರು.