ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ : ಜನವರಿ 1ರಿಂದಲೇ ಪೂರ್ವಾನ್ವಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.75 ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.

“ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆ ಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾ ಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು” ಎಂದು ಮುಖ್ಯಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಕೂಡ ತನ್ನ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು.

ತುಟ್ಟಿಭತ್ಯೆ ಮತ್ತು ಹಣದುಬ್ಬರ :

ತುಟ್ಟಿಭತ್ಯೆಗೂ ಹಣದುಬ್ಬರ ಅಥವಾ ಬೆಲೆ ಏರಿಕೆಗೂ ನೇರವಾದ ನಂಟು ಇದೆ. ಸರ್ಕಾರಿ ನೌಕರರ ಒಟ್ಟು ವೇತನದಲ್ಲಿ ಮೂಲವೇತನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆ ಮುಂತಾದವುಗಳ ಜೊತೆಗೇ ತುಟ್ಟಿಭತ್ಯೆಯೂ ಸೇರಿರುತ್ತದೆ. ತುಟ್ಟಿಭತ್ಯೆ ಹೊರತುಪಡಿಸಿದ ಇತರ ಭತ್ಯೆಗಳು ನಿರ್ದಿಷ್ಟ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಿದ್ದು ಅವುಗಳನ್ನು ಮೂಲವೇತನದ ಒಂದು ನಿಗದಿತ ಶೇಕಡಾ ಭಾಗ ಅಥವಾ ನಿರ್ದಿಷ್ಟ ಮೊತ್ತದ ರೂಪದಲ್ಲಿ ನೀಡಲಾಗುತ್ತದೆ.

ಇಂತಹ ಭತ್ಯೆಗಳು ಪದೇ ಪದೇ ಹೆಚ್ಚಳವಾಗುವುದಿಲ್ಲ. ವ್ಯಕ್ತಿಯ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿ ತುಟ್ಟಿಭತ್ಯೆಯನ್ನು ಬೆಲೆ ಸೂಚ್ಯಂಕ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಅಂದರೆ ಜನವರಿ ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಒಂದು ವೇಳೆ ತುಟ್ಟಿಭತ್ಯೆ ಇಲ್ಲದಿದ್ದಲ್ಲಿ ಮುಂದಿನ ವೇತನ ಪರಿಷ್ಕರಣೆಯವರೆಗೆ ಹತ್ತು ವರ್ಷಗಳ ಕಾಲ ವಾರ್ಷಿಕ ವೇತನ ಬಡ್ತಿ ಹೊರತಾಗಿ ಸಂಬಳ ಅಥವಾ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ.

Leave a Reply

Your email address will not be published. Required fields are marked *