ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರಿಸಬೇಕು : ಕಛೇರಿಯ ನೆಲಮಹಡಿಯಲ್ಲಿ ಅಕ್ರಮವಾಗಿ ಹೋಟೆಲ್ ತೆರೆಯಲು ಅವಕಾಶ ಮಾಡಿಕೊಟ್ಟಿರುವ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಒತ್ತಾಯ

ಚನ್ನಪಟ್ಟಣ : ಚನ್ನಪಟ್ಟಣ ಟೌನ್, ಕುವೆಂಪುನಗರದ 1ನೇ ಅಡ್ಡರಸ್ತೆಯಲ್ಲಿ ಇರುವ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರಿಸುವಂತೆ ಮತ್ತು ಉಪ ನೋಂದಣಾಧಿಕಾರಿಗಳ ಕಛೇರಿಯ ನೆಲಮಹಡಿಯಲ್ಲಿ ಅಕ್ರಮವಾಗಿ ಹೋಟೆಲ್ ತೆರೆಯಲು ಅವಕಾಶ ಮಾಡಿಕೊಟ್ಟಿರುವ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡುವಂತೆ ಕೋಡಿ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಅವರು ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಚನ್ನಪಟ್ಟಣ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚನ್ನಪಟ್ಟಣ ನಗರ, ಕುವೆಂಪುನಗರ, 1ನೇ ಅಡ್ಡರಸ್ತೆಯಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ಬಿ.ಎಸ್.ಎನ್.ಎಲ್. ಕಛೇರಿ, ಕರ್ನಾಟಕ ಬ್ಯಾಂಕ್, ವಿಜಯ ಬ್ಯಾಂಕ್, ಉಜ್ಜೀವನ್ ಬ್ಯಾಂಕ್, ಈ ಎಲ್ಲಾ ಬ್ಯಾಂಕ್ಗಳ ಎ.ಟಿ.ಎಂ.ಗಳು ಗ್ರಾಮೀಣ ಮೈಕ್ರೋ ಫೈನಾಸ್ಸ್ ಕಛೇರಿ, ಆಸ್ಪತ್ರೆ, ಲ್ಯಾಬ್, ಪತ್ರಿಕಾಲಯ, ಪ್ರಿಂಟಿಂಗ್ ಪ್ರೆಸ್, ಗುರುಕೃಪ ಸಮಾರಂಭ ಭವನ ಮತ್ತು ಉಪ-ನೋಂದಣಾಧಿಕಾರಿಗಳ ಕಛೇರಿ ಸೇರಿದಂತೆ ಇನ್ನೂ ಹಲವು ಅಂಗಡಿ ಮಳಿಗೆಗಳು ಇದ್ದು, ಈ ಎಲ್ಲಾ ಕಛೇರಿಗಳು ಮತ್ತು ಅಂಗಡಿಗಳ ಮಧ್ಯೆ ಕಿರಿದಾದ ರಸ್ತೆ ಇದ್ದು, ಚನ್ನಪಟ್ಟಣ ನಗರದ ಚರ್ಚ್ ರಸ್ತೆ, ಶಾಲೆಗಳು ಮತ್ತು ನಗರದ ಒಳಪ್ರವೇಶಿಸಲು, ಕುವೆಂಪುನಗರದ 2ನೇ ಅಡ್ಡರಸ್ತೆಯಲ್ಲಿರುವ ಆಸ್ಪತ್ರೆ ಮತ್ತು ಸರ್ಕಾರಿ ಗ್ರಂಥಾಲಯಕ್ಕೆ ಸಂಚರಿಸಲು ಮತ್ತು ಈ ಭಾಗದಿಂದ ಬೆಂಗಳೂರು-ಮೈಸೂರು ಮುಖ್ಯ ರಸ್ತೆಗೆ ಓಡಾಡಲು ಸಾರ್ವಜನಿಕರು ಈ ರಸ್ತೆಯನ್ನು ಅವಲಂಬಿಸಿರುತ್ತಾರೆ ಎಂದು ಮನವಿ ತಿಳಿಸಿದ್ದಾರೆ.

ಕುವೆಂಪುನಗರದ 1ನೇ ಅಡ್ಡರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಛೇರಿ ಮತ್ತು ವಿವಿಧ ಇತರೆ ಕಛೇರಿಗಳಿಗೆ ವಾಹನಗಳ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕಿರಿದಾದ ಈ ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದು, ಈ ರಸ್ತೆ ಜಾಮ್ ಆಗುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದೆ ಎಂದು ಆರೋಪಿಸಿದ್ದಾರೆ.

ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಉಪ-ನೋಂದಣಾಧಿಕಾರಿಗಳ ಕಛೇರಿ ತೆರೆಯಲು ಅನುಕೂಲವಾಗುವ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಹಲವು ಸರ್ಕಾರಿ ಕಟ್ಟಡಗಳು ಖಾಲಿ ಇದ್ದರೂ, ಮೂಲಭೂತ ಸೌಕರ್ಯಗಳಾದ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಬಾಡಿಗೆ ಮನೆಗೆ ಪ್ರತಿ ತಿಂಗಳು ಕಮಿಷನ್ ಪಡೆಯುವ ದುರಾಸೆಯಿಂದ ಹೆಚ್ಚುವರಿ ಬಾಡಿಗೆ ನಿಗಧಿ ಮಾಡಿ ನೆಲಮಹಡಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ನಡುವೆ ಬಾಡಿಗೆ ಪಡೆದಿರುವ ನೆಲಮಹಡಿಯಲ್ಲಿ ಮೊದಲ ಮಹಡಿಗೆ ಹೋಗಲು ಇರುವ ಹಂತಗಳ ಕೆಳಭಾಗದಲ್ಲಿ ಅಕ್ರಮವಾಗಿ ಹೋಟೆಲ್ ತೆರೆಯಲು ಉಪನೋಂದಣಾಧಿಕಾರಿಗಳು ಅವಕಾಶ ಮಾಡಿಕೊಟ್ಟಿರುತ್ತಾರೆ. ಇದರಿಂದ ಈ ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಡ್ಡಿಯಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಆದುದರಿಂದ, ಚನ್ನಪಟ್ಟಣ ಟೌನ್, ಕುವೆಂಪುನಗರದ 1ನೇ ಅಡ್ಡರಸ್ತೆಯಲ್ಲಿ ಇರುವ ಉಪ ನೋಂದಣಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರಿಸುವಂತೆ ಮತ್ತು ಉಪ ನೋಂದಣಾಧಿಕಾರಿಗಳ ಕಛೇರಿಯ ನೆಲಮಹಡಿಯಲ್ಲಿ ಅಕ್ರಮವಾಗಿ ಹೋಟೆಲ್ ತೆರೆಯಲು ಅವಕಾಶ ಮಾಡಿಕೊಟ್ಟಿರುವ ಉಪ ನೋಂದಣಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ಮಾಡಿ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ತಮ್ಮ ಕರ್ತವ್ಯ ಬದ್ಧತೆಗಳನ್ನು ಸಾರ್ವಜನಿಕರ ಮುಂದಿಡುವಂತೆ ಈ ಎಲ್ಲ ವಿಚಾರಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *