ಬೇಸಿಗೆ ಅವಧಿಯಲ್ಲಿ ಉದ್ಯೋಗ ಚೀಟಿ ಬಳಸಿ ನಿಮ್ಮ ಗ್ರಾಮದಲ್ಲೆ ಉದ್ಯೋಗ ಪಡೆಯಿರಿ: ಚಂದ್ರು

ಚನ್ನಪಟ್ಟಣ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನತೆಗೆ ತಮ್ಮ ಗ್ರಾಮ ವ್ಯಾಪ್ತಿಯಲ್ಲೆ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂದು ಚನ್ನಪಟ್ಟಣ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ಅವರು ತಿಳಿಸಿದರು.

ಅವರು ಇಂದು ಚನ್ನಪಟ್ಟಣ ತಾಲ್ಲೂಕಿನ ವಂದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯೋಣ ಬಾ ಅಭಿಯಾನವನ್ನು ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮತನಾಡಿದರು. ಗ್ರಾಮದ ಜನರಿಗೆ ಉದ್ಯೋಗದ ಮಾಹಿತಿ ನೀಡುವ ಕೆಲಸ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಜರುಗಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದ ಯೋಜನೆಯಾಗಿದ್ದು, ವಂದರ ಗುಪ್ಪೆ ಗ್ರಾಮೀಣ ಪ್ರದೇಶದ ಜನರು ಮಾತ್ರವಲ್ಲದೇ ರಾಮನಗರ ಜಿಲ್ಲಾದ್ಯಾಂತ ಗ್ರಾಮೀಣ ಪ್ರದೇಶದ ಜನರು ಯೋಜನೆಯ ಫಲಾನುಭವಿಳಾಗಿ ಉತ್ತಮ ರೀತಿಯಲ್ಲಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಮಾಚ್೯ 30 ರಿಂದ ಏಪ್ರಿಲ್, ಮೇ, ಜೂನ್ ಈ 3 ತಿಂಗಳು ಬೇಸಿಗೆ ಅವಧಿಯಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಬಾಧಿಸುವ ಅವಧಿಯಾಗಿದೆ. ಗ್ರಾಮೀಣ ಪ್ರದೇಶದ ಜನರು ಗ್ರಾಮ ಪಂಚಾಯಿತಿಗಳಿಂದ ಜಾಬ್ ಕಾಡ್೯ ಅನ್ನು ಪಡೆದು ತಮ್ಮ ಗ್ರಾಮ ವ್ಯಾಪ್ತಿಯಲ್ಲೆ ಉದ್ಯೋಗ ಪಡೆದು ನಿರುದ್ಯೋಗಮುಕ್ತರಾಗಬೇಕು ಎಂಬುವ ಉದ್ದೇಶವನ್ನು ದುಡಿಯೋಣ ಬಾ ಅಭಿಯಾನ ಒಳಗೊಂಡಿದೆ ಎಂದರು.

2022 ಏಪ್ರಿಲ್ 1 ರಿಂದ ನರೇಗಾ ಕೆಲಸಕ್ಕೆ ದಿನದ ಕೂಲಿ ರೂ 289 ರಿಂದ ರೂ 309 ಕ್ಕೆ ಹೆಚ್ಚಳವಾಗಿದೆ ಮತ್ತು ಕೂಲಿಕಾರರು ತರುವ ಸಲಕರಣೆಗಳಿಗೆ 10 ರೂ ಹೆಚ್ಚುವರಿ ವೆಚ್ಚವನ್ನು ಬರಿಸಲಾಗುತ್ತಿದೆ. ಇದರ ಪೂಣ೯ ಉಪಯೋಗವನ್ನು ಗ್ರಾಮೀಣ ಜನರಿಗೆ ತಿಳಿಸುವ ಪ್ರಚಾರದ ಕೆಲಸ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜರುಗಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ದೊರಕುವಂತಾದರೆ ಜಿಲ್ಲಾ ಪಂಚಾಯತಿಯ ಶ್ರಮ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.

ವಂದರಗುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರು ಮಾತನಾಡಿ ಗ್ರಾಮೀಣ ಭಾಗದ ರೈತರು ತಮ್ಮ ಜಮೀನಿನಲ್ಲಿ ಒಕ್ಕಣೆ ಕೆಲಸ ಮುಗಿಸಿ ಮುಂದಿನ ಬಿತ್ತನೆ ಕಾಯ೯ದವರೆಗೆ ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದ್ದು , ಇದನ್ನು ತಪ್ಪಿಸಲು ನಿಟ್ಟಿನಲ್ಲಿ ದುಡಿಯೋಣ ಬಾ ಅಭಿಯಾನ ಕಾಯ೯ಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ DIEC ಅರುಣ್ ಕುಮಾರ್ ಸಿ.ಜಿ , ವಂದರ ಗುಪ್ಪೆ ಗ್ರಾಮ ಪಂಚಾಯಿತಿ ಉಪದ್ಯಕ್ಷರಾದ ಕುಮಾರ್ ಅವರು, ಸೆಕ್ರೇಟರಿ ರಾಜೇಶ್ , ತಾಲ್ಲೂಕು IEC ಸಂಯೋಜಕಿ ಭವ್ಯಶ್ರೀ , DEO ಶಿಲ್ಪ, ಗ್ರಾಮ ಕಾಯಕ ಮಿತ್ರ ಮಂಜುಳ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *