ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂಬ ರೈತರ ಕೂಗನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ : ನಾಳೆ (ಏ.8) ಸಭೆಯ ಹಿನ್ನಲೆಯಲ್ಲಿ ಮಾಹಿತಿ ಕಲೆ ಹಾಕಿದ ಎಸ್ಪಿ, ಸಿಇಒ
ರಾಮನಗರ : ಮಾವು ಬೆಳೆ ನಷ್ಟವಾಗಿದ್ದು ಸೂಕ್ತವಾಗಿ ಸ್ಪಂದಿಸದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾವು ಬೆಳಗಾರ ರೈತರು ಎಚ್ಚರಿಸಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಈ ವಿಚಾರದಲ್ಲಿ ರಾಮನಗರ ಜಿಲ್ಲಾಡಳಿತ ಏಪ್ರಿಲ್ 8ರ ಶುಕ್ರವಾರದಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರೊಂದಿಗೆ ಸಭೆಯನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದಾರೆ.
ಈ ಸಭೆಗೆ ಪೂರ್ವಭಾವಿ ಎನ್ನುವಂತೆ ಬುಧವಾರ ಜಿಲ್ಲಾ ಪೊಲೀಸ್ ಭವನದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಮ್ ಅವರ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆಯನ್ನು ಆಯೋಜಿಸಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ.

ರೈತ ಹೋರಾಟ ತಾತ್ಕಾಲಿಕ ಸ್ಥಗಿತ :
ಮಾರ್ಚ್ 23ರಂದು ಮಾವು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದರು. ಬೆಳೆಗಾರರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಅವರು , ತಾವು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳ ನೇತೃತ್ವದಲ್ಲಿ ರೈತರ ಸಭೆಯನ್ನು ಆಯೋಜಿಸುವುದಾಗಿ ಏಪ್ರಿಲ್ 7 ರವರೆಗೆ ಗಡುವು ಕೇಳಿದ್ದರು. ಜಿಲ್ಲಾಧಿಕಾರಿಗಳ ಮಾತುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.
ಈಗ ಏಪ್ರಿಲ್ 8ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಮನಗರ ಜಿಲ್ಲೆಯ ರೈತರ ಸಮಗ್ರ ಸಮಸ್ಯೆಗಳನ್ನು ಚರ್ಚಿಸಲು ಸಭೆ ಆಯೋಜಿಸಿರುವುದಾಗಿ ಜಂಟಿ ಕೃಷಿ ನಿರ್ದೇಶಕರು ಸಭಾ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ :
ಪೊಲೀಸ್ ಇಲಾಖೆಯ ಗಮನಕ್ಕೆ ತರಬಹುದಾದ ಸಮಸ್ಯೆಗಳಿದ್ದರೆ ಹಂಚಿಕೊಳ್ಳಿ ಎಂದು ಎಸ್ಪಿಯವರು ರೈತ ಮುಖಂಡರಿಗೆ ತಿಳಿಸಿದರು.
ಪೊಲೀಸ್ ಇಲಾಖೆಯಿಂದ ತಮಗೆ ದೊರಕಬೇಕಾದ ರಕ್ಷಣೆಯ ಬಗ್ಗೆ ರೈತರು ಪ್ರಸ್ತಾಪಿಸಿದರು. ಎಲ್ಲಾ ವಿಚಾರಗಳ ಬಗ್ಗೆಯೂ ಗಮನ ಹರಿಸುವ ಭರವಸೆಯನ್ನು ಎಸ್ಪಿ ನೀಡಿದರು.
ಏಪ್ರಿಲ್ 8ರಂದು ನಡೆಯುವ ಸಭೆಯಲ್ಲಿ ಸರ್ಕಾರದಿಂದ ರೈತರು ಇಡಬಹುದಾದ ಬೇಡಿಕೆಗಳ ಬಗ್ಗೆಯೂ ಇಬ್ಬರೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ರೈತ ಮುಖಂಡರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸೂಕ್ತ ಸ್ಪಂದನೆ ಸಿಗದಿದ್ದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ :
ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂಬ ರೈತರ ಕೂಗನ್ನು ಜಿಲ್ಲಾಡಳಿತ ಗಂಭಿರವಾಗಿ ಪರಿಗಣಿಸಿದೆ. ಏಪ್ರಿಲ್ 8ರ ಸಭೆಯಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಸಿಗದಿದ್ದರೆ ರೈತರು ತಾವು ಸ್ಥಗಿತಗೊಳಿಸಿರುವ ಹೋರಾಟವನ್ನು ಪುನಃ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.