ಎಲ್ಲರಿಗೂ ರಕ್ಷಣೆ ನೀಡಬೇಕಾದ ಸರ್ಕಾರ, ಒಂದು ವರ್ಗದ ಪರ ನಿಂತು, ಸಂಘ ಸಂಸ್ಥೆಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ : ಎ.ಬಿ. ಚೇತನ್ ಕುಮಾರ್
ರಾಮನಗರ : ಹಿಜಾಬ್, ಆಜಾನ್, ಹಲಾಲ್ ಕಟ್, ವ್ಯಾಪಾರ ಬಂದ್ ನಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಸದ್ದುಗದ್ದಲವಿಲ್ಲದೆ ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನ ಸಾಮಾನ್ಯರ ಜೇಬಿಗೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕತ್ತರಿ ಹಾಕುತ್ತಿವೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಆರೋಪಿಸಿದರು.
ಜನಸಾಮಾನ್ಯರನ್ನು ಕಿತ್ತು ತಿನ್ನುತ್ತಿರುವ ಬೆಲೆ ಹೆಚ್ಚಳದ ಬಗ್ಗೆ ಮಾತನಾಡದ ಬಿಜೆಪಿ ನಾಯಕರು, ಸಂಘ ಪರಿವಾರ ಮತ್ತು ಅದರ ಮಿತ್ರಮಂಡಳಿಗಳು ಹೂಡುತ್ತಿರುವ ಷಡ್ಯಂತ್ರಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ, ದೇಶವನ್ನು ಅಧೋಗತಿಗೆ ತಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಒಂದು ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲ ಧರ್ಮೀಯರು ನೆಮ್ಮದಿಯಿಂದ ವ್ಯಾಪಾರ, ವಹಿವಾಟು ನಡೆಸಿಕೊಂಡು ಹೋಗಲು ಮುಕ್ತ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲಾಲ್ ಕಟ್ ಹೆಸರಿನಲ್ಲಿ ಮಾಂಸ ವ್ಯಾಪಾರವನ್ನು, ಜಾತ್ರೆಗಳಲ್ಲಿ ಮುಸ್ಲಿಂ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಒಂದು ಸಮುದಾಯವನ್ನು ಗುರಿಯಾಗಿ, ಅವರ ಅರ್ಥಿಕ ವಹಿವಾಟುಗಳನ್ನು ಕುಸಿತಗೊಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ಭಜರಂಗದಳ, ಆರ್.ಎಸ್.ಎಸ್ ಹಾಗೂ ಅದರ ಅಂಗ ಸಂಸ್ಥೆಗಳು ಮಾಡುತ್ತಿದ್ದರೂ ಇಂತಹ ಮತಾಂಧರ ವಿರುದ್ದ ಕಾನೂನು ಕ್ರಮ ಜರುಗಿಸಿ, ಎಲ್ಲರಿಗೂ ರಕ್ಷಣೆ ನೀಡಬೇಕಾದ ಸರ್ಕಾರ, ಒಂದು ವರ್ಗದ ಪರ ನಿಂತು, ಸಂಘ ಸಂಸ್ಥೆಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳ ಮಾಡಿದ್ದರ ಬಗ್ಗೆ ಅಂದಿನ ಮನಮೋಹನ್ ಸಿಂಗ್ ಸರ್ಕಾರದ ವಿರುದ್ದ ಬೀದಿಗೆ ಇಳಿದಿದ್ದ ಕೆಲವರು ದ್ವನಿ ಇಂದು ಅಡಗಿದೆ. ಕೇಂದ್ರ ಸರ್ಕಾರ ಹಾಕುವ ದೇಶದ್ರೋಹ ಕೇಸುಗಳಿಗೆ ಹೆದರಿ, ಜನರು ಸರ್ಕಾರದ ವಿರುದ್ದ ಮಾತನಾಡಲು ಹಿಂಜರಿಯುವಂತಹ ಸ್ಥಿತಿ ಇದೆ. ಐಟಿ, ಇಡಿ, ಪೊಲೀಸ್ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಸದ್ದು ಅಡಗಿಸುವಂತಹ ನೀಚ ಕೆಲಸಕ್ಕೆ ಬಿಜೆಪಿ ಕೈಹಾಕಿದೆ. ಇದರ ವಿರುದ್ದ ಯುವಜನರು ಹೋರಾಟ ರೂಪಿಸಬೇಕಿದೆ ಎಂದು ಅವರು ಹೇಳಿದರು.
ನೆರವು ನೀಡಿ :
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ವಸ್ತುನಿಷ್ಠ, ವರದಿ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ. ಗೂಗಲ್ ಪೇ ಅಥವಾ ಪೋನ್ ಪೇ ಮಾಡಿ – 9880439669 (Rudreshwara S)